ಕುಣಿಗಲ್: ಅಕಾಲಿಕ ಮಳೆ ಸೇರಿದಂತೆ ವಾಡಿಕೆ ಮಳೆಯ ಜೊತೆಗೆ ಕುಣಿಗಲ್ ದೊಡ್ಡಕೆರೆ ತುಂಬಿ ಕೋಡಿಯಾದರೂ ಅಚ್ಚುಕಟ್ಟು ದಾರರಿಗೆ ಕೃಷಿ ಉದ್ದೇಶಕ್ಕೆ ನೀರು ಪೂರೈಕೆ ಮಾಡುವಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಪೂರಕ ಕ್ರಮ ಕೈಗೊಳ್ಳದೆ ಇರುವುದು ಅಚ್ಚುಕಟ್ಟುದಾರರ ಅಸಮಾಧಾನಕ್ಕೆ ಕಾರಣವಾಗಿದೆ.
ಕಳೆದ ಕೆಲ ದಶಕಗಳ ಹಿಂದೆ ಕುಣಿಗಲ್ ದೊಡ್ಡಕೆರೆ ಅಚ್ಚುಕಟ್ಟು ಹಸಿ ಭತ್ತ, ಬಿಸಿ ಬೆಲ್ಲಕ್ಕೆ ಹೆಸರುವಾಸಿಯಾಗಿತ್ತು, ವರ್ಷಪೂರ್ತಿ ಹಚ್ಚಹಸಿರಿನಿಂದ ಅಚ್ಚುಕಟ್ಟು ಕಂಗೊಳಿಸುತ್ತಿತ್ತು, ಆದರೆ, ಕಳೆದ ಹದಿನೈದು ವರ್ಷಗಳಿಂದ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಬಿಡದ ಕಾರಣ, ವ್ಯಾಪಕ ನಗರಿಕರಣದ ಪ್ರಭಾವದಿಂದಾಗಿ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುವ ಲಕ್ಷ್ಮದೇವಿ ಹಂತದ ಕಾಲುವೆ ಪಟ್ಟಣದ ಕೊಳಚೆ ನೀರು ಹರಿಸುವ ತಾಣವಾಗಿ ಮಾರ್ಪಾಟಾಗಿದೆ, ದೊಡ್ಡಕೆರೆಯಿಂದ ಲಕ್ಷ್ಮೀದೇವಿ ಹಂತ ಹಾಗೂ ರಾಮಬಾಣದ ಹಂತ ಎಂಬ ಎರಡು ಕಾಲುವೆ ಮೂಲಕ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸಲಾಗುತ್ತದೆ.
1022 ಎಕರೆ ಇರುವ ದೊಡ್ಡಕೆರೆಯು 550 ಎಂಸಿಎಫ್ಟಿ (ಅರ್ಧ ಟಿಎಂಸಿ) ಸಂಗ್ರಹ ಸಾಮಾರ್ಥ್ಯ ಇದೆ, ಒಟ್ಟಾರೆ 2800 ಎಕರೆ ಅಚ್ಚುಕಟ್ಟು ಪ್ರದೇಶ ಎನ್ನಲಾಗುತ್ತಿದ್ದರೂ ಹತ್ತು ಸಾವಿರ ಎಕರೆಗೂ ಹೆಚ್ಚಿನ ಪ್ರದೇಶ ಅವಲಂಬಿತವಾಗಿದೆ ಎನ್ನಲಾಗುತ್ತಿದೆ, ಇದರ ಜೊತೆಯಲ್ಲಿ ಹತ್ತಾರು ಗ್ರಾಮಗಳ ಜಮೀನಿಗೆ ಕೃಷಿ ಉದ್ದೇಶಕ್ಕೆ ನೀರು ಪೂರೈಕೆ ತಾಣವಾಗಿದೆ, ಲಕ್ಷ್ಮೀದೇವಿ ಹಂತದ ಕಾಲುವೆಯಲ್ಲಿ ಸತತ ನೀರು ಹರಿಯುತ್ತಿದ್ದ ಕಾರಣ ಈ ಕಾಲುವೆಯನ್ನು ಅವಲಂಬಿಸಿದ ಜಮೀನು ಮಾಲೀಕರ ಮನೆಯಲ್ಲಿ ಲಕ್ಷ್ಮೀ ತಾಂಡವವಾಡುತ್ತಿದ್ದಳು ಎಂಬ ಪ್ರತೀತಿ ಇದೆ.
ಪುರಸಭೆ ಚರಂಡಿ ನೀರು ಹರಿಸುವ ಜೊತೆಯಲ್ಲಿ ನಗರಿಕರಣದ ವ್ಯಾಪಕ ಪ್ರಭಾವಕ್ಕೆ ಕಾಲುವೆ ಒತ್ತುವರಿಯಾಗಿದೆ, ನಿದ್ದೆಯೆಲ್ಲಿರುವ ನಾಲಾ ವಲಯದ ಅಧಿಕಾರಿಗಳು ಎಚ್ಚೆತ್ತು ನಾಲೆ ಒತ್ತುವರಿ ತೆರವುಗೊಳಿಸಿ, ಕಾಲುವೆ ತೂಬನ್ನು ಸರಿಪಡಿಸಿ ಅಚ್ಚುಕಟ್ಟಿಗೆ ನೀರು ಬಿಟ್ಟು ಹಸಿ ಭತ್ತ, ಬಿಸಿ ಬೆಲ್ಲದ ಖ್ಯಾತಿ ಮರು ಕಳಿಸಲು ಕ್ರಮ ಕೈಗೊಳ್ಳುವರೆ ಎಂದು ಕಾದು ನೋಡಬೇಕಿದೆ.
Comments are closed.