ಉಪನ್ಯಾಸಕರ ವೇತನ ಬಿಡುಗಡೆಗೆ ಆಗ್ರಹ

3

Get real time updates directly on you device, subscribe now.


ತುಮಕೂರು: ರಾಜ್ಯ ಸರಕಾರ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ 2024ರ ಅಕ್ಟೋಬರ್ 03 ರಂದು ಹೊರಡಿಸಿರುವ ಸುತ್ತೋಲೆ, ಕರ್ನಾಟಕ ರಾಜ್ಯ ಅನುದಾನಿತ ಪದವಿ ಪೂರ್ವ ಕಾಲೇಜುಗಳು ಉಪನ್ಯಾಸಕರಿಗೆ ನುಂಗಲಾರದ ತುತ್ತಾಗಿದ್ದು, ಕೂಡಲೇ ಸುತ್ತೋಲೆ ಪುನರ್ ಪರಿಶೀಲಿಸಬೇಕು ಹಾಗೂ ತಡೆಹಿಡಿದಿರುವ ಉಪನ್ಯಾಸಕರ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಕರ್ನಾಟಕ ರಾಜ್ಯ ಅನುದಾನಿತ ಪದವಿ ಪೂರ್ವ ಕಾಲೇಜುಗಳ ನೌಕರರ ಸಂಘನ ಅಧ್ಯಕ್ಷ ಡಾ.ಹರೀಶ್ ಸರಕಾರವನ್ನು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುತ್ತೋಲೆಯಲ್ಲಿ ತಿಳಿಸಿರುವಂತೆ ಕಾರ್ಯ ಭಾರವಿಲ್ಲದ ಉಪನ್ಯಾಸಕರನ್ನು ಹತ್ತಿರದ ಅನುದಾನಿತ ಕಾಲೇಜಿಗೆ ನಿಯೋಜಿಸುವಂತೆ ಸೂಚನೆ ನೀಡಲಾಗಿದೆ, ಇದರಲ್ಲಿ ಹಲವಾರು ನೂನ್ಯತೆಗಳಿವೆ, ಹಾಗಾಗಿ ಸರಕಾರ ತನ್ನ ಸುತ್ತೋಲೆ ಪರಿಶೀಲನೆಗೆ ಒಳಪಡಿಸಬೇಕು, ಹಾಗೆಯೇ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರನ್ನು ಸರಕಾರಿ ಪದವಿ ಪೂರ್ವ ಕಾಲೇಜುಗಳಿಗೆ ನಿಯೋಜಿಸಲು ಇರುವ ನಿರ್ಭಂಧವನ್ನು ರದ್ದುಪಡಿಸ ಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದರು.

ಸರಕಾರ ಹಿಂದೆ ಎರಡು ಸಂಯೋಜನೆಗೆ ಅನುಮೋದನೆ ಕೊಟ್ಟು ಈಗ 20 ಗಂಟೆಗಳ ಕಾರ್ಯಭಾರ ಸಮಸ್ಯೆ ತಂದಿಟ್ಟಿರುವುದು ಸರಿಯಲ್ಲ, ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳ 821 ಅನುದಾನಿತ ಪದವಿ ಪೂರ್ವ ಕಾಲೇಜುಗಳ ಸುಮಾರು 6000 ನೌಕರರು ಸರಕಾರದ ಸುತ್ತೋಲೆಯಿಂದ ಆಂತಕಕ್ಕೆ ಒಳಗಾಗಿದ್ದಾರೆ, ಅಲ್ಲದೆ ಇಲಾಖೆಯ ನಿರ್ದೇಶಕರ ಮೌಖಿಕ ಆದೇಶಕ್ಕೆ ಮಣಿದು ಇದುವರೆಗೂ ಕಾರ್ಯಭಾರವಿಲ್ಲದೆ ನಿಯೋಜನೆಗೆ ಒಳಗಾಗದ ಉಪನ್ಯಾಸಕರಿಗೆ ವೇತನ ಮತ್ತು ಭತ್ಯೆ ತಡೆ ಹಿಡಿಯಲಾಗಿದೆ, ಮೊದಲು ತಡೆ ಹಿಡಿದಿರುವ ವೇತನ ಬಿಡುಗಡೆ ಮಾಡಿ ನಂತರ ನಿಮ್ಮ ಕಾರ್ಯಾಭಾರದ ಕುರಿತು ಸಂಘಟನೆಯೊಂದಿಗೆ ಮಾತನಾಡಿ ಎಂಬುದು ನಮ್ಮ ಒತ್ತಾಯವಾಗಿದೆ ಎಂದು ಡಾ.ಹರೀಶ್ ನುಡಿದರು.

ಸರಕಾರ ಮತ್ತು ಇಲಾಖೆ 9 ಸೆಪ್ಟೆಂಬರ್ 2012 ರಿಂದ ಕಾರ್ಯಭಾರ ಸಮಸ್ಯೆ ಸೃಷ್ಟಿಸಲು ಪ್ರಾರಂಭಿಸಿದೆ, ನಂತರದ ದಿನಗಳಲ್ಲಿ ಒಂದೊಂದೇ ನಿಯಮಗಳನ್ನು ನಮ್ಮ ಮೇಲೆ ಏರುತ್ತಾ ಬರುತ್ತಿರುವುದು ಸರಿಯಲ್ಲ, ಭಾಷಾ ವಿಷಯಗಳ ತೆಲುಗು ಹಿಂದಿ, ಉರ್ದು, ಎಲೆಕ್ಟ್ರಾನಿಕ್ಸ್, ಉಪನ್ಯಾಸಕರ ಕಾರ್ಯಭಾರ ಸರಿದೂಗಿಸಬೇಕು, ಜ್ಯೋತಿ ಸಂಜೀವಿನಿ ಸೌಲಭ್ಯ ಅನುದಾನಿತ ಕಾಲೇಜುಗಳ ನೌಕರರಿಗೂ ವಿಸ್ತರಿಸಬೇಕು, ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಮಿತಿಯನ್ನು ಕನಿಷ್ಠ 20, ಗರಿಷ್ಠ 40 ಕ್ಕೆ ನಿಗದಿಗೊಳಿಸಬೇಕು, ವಾಣಿಜ್ಯ ವಿಷಯದ ಉಪನ್ಯಾಸಕರಿಗೆ ಬಿಇಡಿ ನಿಗದಿ ಕೈಬಿಡಬೇಕು, ಪರೀಕ್ಷೆಗಳನ್ನು ಅನುದಾನಿತ ಕಾಲೇಜುಗಳ ನೌಕರರಿಗೂ ವಿಸ್ತರಿಸಬೇಕು, ಕಂಪ್ಯೂಟರ ಸಾಕ್ಷರತಾ ಪರೀಕ್ಷೆ ವಿಸ್ತರಿಸಬೇಕು, ಅಂತರ್ ಜಿಲ್ಲೆ ನಿಯೋಜನೆಯನ್ನು ರದ್ದುಗೊಳಿಸುವುದು ಸೇರಿದಂತೆ ಹಲವಾರು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಲಾಗುತ್ತಿದೆ ಮೊದಲ ಹಂತದಲ್ಲಿ ಸರಕಾರಕ್ಕೆ, ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸುವ ಕೆಲಸ ಮಾಡಲಾಗುವುದು, ನಂತರ ಎಲ್ಲಾ ಶಾಸಕರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು, ಇದಕ್ಕೆ ಸರಕಾರ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಅನಿವಾರ್ಯ ಎಂದು ಸಂಘದ ಅಧ್ಯಕ್ಷ ಡಾ.ಹರೀಶ್ ನುಡಿದರು.

ಈ ವೇಳೆ ರಾಜ್ಯ ಪದವಿ ಪೂರ್ವ ಕಾಲೇಜುಗಳ ನೌಕರರ ಸಂಘದ ಗೌರವಾಧ್ಯಕ್ಷ ಶ್ರೀಕಂಠಯ್ಯ, ಉಪಾಧ್ಯಕ್ಷ ತಿಪ್ಪೇಸ್ವಾಮಿ, ಕಾರ್ಯಾಧ್ಯಕ್ಷ ಆನಂದ್, ಪ್ರಾಂಶುಪಾಲ ಸಂಘದ ಉಪಾಧ್ಯಕ್ಷ ಕುಮಾರಯ್ಯ, ತುಮಕೂರು ಜಿಲ್ಲಾ ಅಧ್ಯಕ್ಷ ಗೋವಿಂದರಾಜು, ರಾಜ್ಯ ಪ್ರತಿನಿಧಿ ಬಿ.ಆರ್ ಮಂಜುನಾಥ್, ರಾಮನಗರ ಜಿಲ್ಲೆಯ ಅಧ್ಯಕ್ಷ ಗೋವಿಂದರಾಜು, ಪುಟ್ಟಸ್ವಾಮಿ, ರಾಜ್ಯ ಸದಸ್ಯರಾದ ಉಷಾ ಪಟೇಲ್, ಕೃಷ್ಣಮೂರ್ತಿ, ಜಂಟಿ ಕಾರ್ಯದರ್ಶಿ ದೇವರಾಜು, ಪ್ರದಾನ ಕಾರ್ಯದರ್ಶಿ ಆನಂದ್,ರಾಜ್ಯ ಕಾರ್ಯದರ್ಶಿ ಬಿ.ಎಲ್.ಯಶವಂತ್, ಮೋಹನ್ ಹೆಗ್ಗಡೆ, ಕುಬೇಂದ್ರ, ಉಮೇಶ್, ಬೋರಪ್ಪ, ಪರಮೇಶ್ವರಪ್ಪ, ವೆಂಕಟಾಚಲ, ದೇವರಾಜು ಇತರರಿದ್ದರು.

Get real time updates directly on you device, subscribe now.

Comments are closed.

error: Content is protected !!