ಕುಣಿಗಲ್: ಅಧಿಕ ಸಾಲಬಾಧೆಯಿಂದ ದಂಪತಿ ಆತ್ಮಹತ್ಯೆಗೆ ಯತ್ನಿಸಿದ್ದು ಪತಿ ಮೃತಪಟ್ಟರೆ, ಪತ್ನಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಸೋಮವಾರ ಪಟ್ಟಣದಲ್ಲಿ ನಡೆದಿದೆ.
ಆತ್ಮಹತ್ಯೆಯಿಂದ ಮೃತ ಪಟ್ಟವನನ್ನು ಕಗ್ಗರೆ ಗ್ರಾಮದ ಹಾಲಿ ಪಟ್ಟಣದ 18ನೇ ವಾರ್ಡ್ನಲ್ಲಿ ವಾಸಮಾಡುತ್ತಿದ್ದ ಸೃಜನ್ ಎಲೆಕ್ಟ್ರಾನಿಕ್ಸ್ ಮಾಲೀಕ ಅನಿಲ್ (44) ಎಂದು ಗುರುತಿಸಲಾಗಿದೆ, ಈತ ಅಧಿಕ ಸಾಲಬಾಧೆಯಿಂದ ಬಳಲುತ್ತಿದ್ದು, ಸೋಮವಾರ ಬೆಳಗ್ಗೆ ಅಂಗಡಿ ಕೆಲಸಗಾರರು ಅಂಗಡಿ ತೆಗೆದಿದ್ದು ಮಧ್ಯಾಹ್ನವಾದರೂ ಮಾಲೀಕರು ಬಾರದೆ ಮಾಲೀಕರ ಹಾಗೂ ಪತ್ನಿಯ ಫೋನ್ ಸ್ವಿಚ್ ಆಫ್ ಆದ ಕಾರಣ ಮನೆ ಮಾಲೀಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ, ಮನೆ ಮಾಲೀಕ ಮನೆಯೊಳಗೆ ನೋಡಿದಾಗ ಅನಿಲ್ ವಿವಿಧ ರೀತಿಯ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡು ಮೃತ ಪಟ್ಟಿದ್ದರೆ, ಪತ್ನಿ ಉಮಾ ಆತ್ಮಹತ್ಯೆಗೆ ಯತ್ನಿಸಿದ್ದು ಇನ್ನು ಜೀವ ಇದ್ದುದನ್ನು ಕಂಡು ಆಕೆಯನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮೃತನ ಸೋದರ ನೀಡಿದ ದೂರಿನ ಮೇರೆಗೆ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿದ್ದು, ಪರಿಶೀಲನೆ ನಡೆಸುವ ವೇಳೆಯಲ್ಲಿ ಮನೆಯಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸೋಮವಾರ ಸಂಜೆಯೇ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಮತ್ತು ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಡೆತ್ನೋಟ್ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಕಾರಣದ ಮೇರೆಗೆ ಏಳು ಮಂದಿ ಮೇಲೆ ಪ್ರಕರಣ ದಾಖಲಿಸಿದ್ದು, ಶಿವಕುಮಾರ, ಲೋಕೇಶ್, ಪ್ರಸನ್ನ ಎಂಬುವರನ್ನು ವಶಕ್ಕೆ ಪಡೆದಿರುವ ಪೊಲೀಸರು ಬಾಕಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
Comments are closed.