ತುಮಕೂರು: ದೀಪಾವಳಿ ಹಬ್ಬವನ್ನು ಪರಿಸರಸ್ನೇಹಿ ಹಬ್ಬವನ್ನಾಗಿ ಆಚರಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ 125 ಡೆಸಿಬಲ್ ಗಳಿಗಿಂತಲೂ ಹೆಚ್ಚಿನ ಶಬ್ದ ಮಾಡುವ ಪಟಾಕಿಗಳನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚಿಸಿದ್ದಾರೆ.
ಜಿಲ್ಲೆಯ ಸಾರ್ವಜನಿಕರ ಆಸ್ತಿ ಮತ್ತು ಆರೋಗ್ಯದ ಸಂರಕ್ಷಣೆ, ಪರಿಸರ ಮಾಲಿನ್ಯ ಹಾಗೂ ಶಬ್ದ ಮಾಲಿನ್ಯ ನಿಯಂತ್ರಣದಲ್ಲಿ ಇಡುವ ಉದ್ದೇಶದಿಂದ ಈ ನಿಷೇಧಕ್ಕೆ ಸೂಚನೆ ನೀಡಲಾಗಿದೆ, ದೀಪಾವಳಿ ಹಬ್ಬವನ್ನು ಸಿಡಿಮದ್ದು ಪಟಾಕಿಗಳನ್ನು ಉಪಯೋಗಿಸದೆ ದೀಪದ ಹಬ್ಬವನ್ನಾಗಿ ಆಚರಿಸಬೇಕು.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯವರೆಗೆ ಪಟಾಕಿಗಳನ್ನು ಸಿಡಿಸುವುದು, ಹೆಚ್ಚು ಶಬ್ದ ಮಾಡುವ ಪಟಾಕಿ ಹಾಗೂ ಸಿಡಿ ಮದ್ದುಗಳ ಮಾರಾಟ ನಿಷೇಧಿಸಲಾಗಿದೆ, ದಿನದ ಯಾವುದೇ ಸಮಯದಲ್ಲಿ ನಿಶಬ್ದ ವಲಯಗಳೆಂದು ಘೋಷಿಸಲ್ಪಟ್ಟಿರುವ ಆಸ್ಪತ್ರೆ, ಶಾಲೆ, ಪ್ರಾರ್ಥನಾ ಮಂದಿರದ ಸುತ್ತ-ಮುತ್ತ ಯಾವುದೇ ರೀತಿಯ ಶಬ್ದ ಉಂಟು ಮಾಡುವ ನಿಷೇಧಿತ ಪಟಾಕಿ, ಸಿಡಿ ಮದ್ದುಗಳನ್ನು ಬಳಸಬಾರದು, ಸಾರ್ವಜನಿಕರು ನಗರ ಮತ್ತು ಪಟ್ಟಣದ ಚಿಕ್ಕ-ಚಿಕ್ಕ ಬೀದಿಗಳಲ್ಲಿ ಪಟಾಕಿ, ಸಿಡಿಮದ್ದು ಹಾಗೂ ಬಾಣ ಬಿರುಸುಗಳನ್ನು ಉಪಯೋಗಿಸುವುದರಿಂದ ಅಲ್ಲಿನ ನಿವಾಸಿಗಳಿಗೆ ಹಾನಿ ಅಥವಾ ಬೆಂಕಿ ಹಾಗೂ ಸ್ಪೋಟದಿಂದ ಅಪಾಯವಾಗುವ ಸಾಧ್ಯತೆಯಿದ್ದು, ಪಟಾಕಿ ಹಾಗೂ ಸಿಡಿ ಮದ್ದುಗಳನ್ನು ವಸತಿ ಪ್ರದೇಶಗಳ ಬದಲು ಮೈದಾನಗಳಲ್ಲಿ ಸಿಡಿಸಬೇಕೆಂದು ಮನವಿ ಮಾಡಿದ್ದಾರೆ.
ಪಟಾಕಿ ಮಾರಾಟಗಾರರಿಗೆ ಸೂಚನೆ
ಪಟಾಕಿ ಮಾರಾಟಗಾರರು ತಮ್ಮ ಮಳಿಗೆ, ಗೋದಾಮುಗಳಲ್ಲಿ ಹಸಿರು ಪಟಾಕಿ ಅಲ್ಲದೆ ಇನ್ನಾವುದೇ ನಿಷೇಧಿತ ಪಟಾಕಿಗಳನ್ನು ದಾಸ್ತಾನು ಮಾಡುವಂತಿಲ್ಲ, ದಾಸ್ತಾನು ಮಾಡಿದ್ದಲ್ಲಿ ಇಡೀ ಮಳಿಗೆ, ಗೋದಾಮುಗಳನ್ನು ಮುಟ್ಟುಗೋಲು ಹಾಕಿಕೊಂಡು ಸಂಬಂಧಪಟ್ಟ ವ್ಯಕ್ತಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು.
ಎಲ್ಲಾ ಹಸಿರು ಪಟಾಕಿಗಳ ಮೇಲೆ ಹಾಗೂ ಅವುಗಳ ಪ್ಯಾಕೆಟ್ ಮೇಲೆ ಹಸಿರು ಪಟಾಕಿಯ ಚಿಹ್ನೆ ಹಾಗೂ ಕ್ಯೂಆರ್ ಕೋಡ್ ಇರುತ್ತದೆ, ಚಿಹ್ನೆ ಇಲ್ಲದ ಯಾವುದೇ ಪಟಾಕಿ ಹಸಿರು ಪಟಾಕಿಯೆನಿಸುವುದಿಲ್ಲ, ಅಂತಹ ಪಟಾಕಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು.
ದೀಪಾವಳಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು ಮತ್ತು ಪ್ರಮುಖವಾಗಿ ಹಸಿರು ಪಟಾಕಿ ಮಳಿಗೆಯಲ್ಲಿ ತಯಾರಕರು, ಮಾರಾಟಗಾರರು ಮತ್ತು ಏಜೆಂಟ್ ಗಳಿಗೆ ಮಾತ್ರ ಅನುಮತಿಸಲಾಗುವುದು, ಯಾವುದೇ ಹಸಿರು ಪಟಾಕಿಗಳ ಪ್ಯಾಕೆಟ್ ಗಳನ್ನು ರ್ಯಾಂಡಮ್ ಆಗಿ ಸಂಗ್ರಹಿಸಿ, ನಿಗದಿತ ವಿಧಿ ವಿಧಾನಗಳ ಮೂಲಕ ಅವುಗಳ ಶಬ್ದ ಮಟ್ಟವನ್ನು ಮಾಪನ ಮಾಡಲಾಗುವುದು, ನಿಗದಿತ ಗುಣಮಾಪನಗಳಿಗೆ ಸರಿ ಹೊಂದದಿದ್ದಲ್ಲಿ ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು.
ಜಿಲ್ಲೆಯಲ್ಲಿ ದೀಪಾವಳಿ ಹಬ್ಬದ ಸಮಯದಲ್ಲಿ ಪಟಾಕಿ, ಸಿಡಿಮದ್ದು ಮಾರಾಟ ಮತ್ತು ಬಳಕೆ ನಿಯಂತ್ರಿಸುವ ಹಾಗೂ ನಿಯಮಗಳನ್ನು ಉಲ್ಲಂಸಿ ಅನಧಿಕೃತವಾಗಿ ತಯಾರು, ಮಾರಾಟ ಮಾಡುವ ವ್ಯಕ್ತಿ, ಸಂಸ್ಥೆಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
Comments are closed.