ತುಮಕೂರು: ನಗರದ 23ನೇ ವಾರ್ಡಿನ ಸತ್ಯಮಂಗಲ- ನವಿಲಹಳ್ಳಿ ಕೆರೆ ಕೋಡಿ ಹರಿದಿದ್ದು ಬುಧವಾರ ಗ್ರಾಮಸ್ಥರು ಗಂಗಾಪೂಜೆ ನೆರವೇರಿಸಿ ಭಕ್ತಿ ಸಮರ್ಪಿಸಿದರು, ಸತ್ಯಮಂಗಲದ ಪಟೇಲ್ ಹೊನ್ನಪ್ಪನವರ ಕುಟುಂಬದವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಂಗಾಪೂಜೆ ನೆರವೇರಿಸಿ ಕೆರೆಗೆ ಬಾಗಿನ ಅರ್ಪಿಸಲಾಯಿತು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕೆರೆ ತುಂಬಿ ಕೋಡಿ ಹರಿದಿರುವುದು ಈ ಭಾಗದ ರೈತರಲ್ಲಿ ಸಂತಸ ಮೂಡಿದೆ. ಕೆರೆ ತುಂಬಿರುವುದರಿಂದ ಸುತ್ತಮುತ್ತಲ ಪ್ರದೇಶದಲ್ಲಿ ಅಂತರ್ಜಲ ವೃದ್ಧಿಯಾಗಿ ಕೊಳವೆಬಾವಿಗಳು ಜಲಪೂರಣವಾಗಿ ಕೃಷಿಗೆ ಹಾಗೂ ಕುಡಿಯುವ ನೀರಿಗೆ ಅನುಕೂಲವಾಗಲಿದೆ ಎಂದರು.
ಈ ಬಾರಿ ಉತ್ತಮ ಮಳೆಯಾಗಿ ನಗರ ವ್ಯಾಪ್ತಿಯ ಕೆರೆಗಳು ತುಂಬುತ್ತಿರುವುದರಿಂದ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗುತ್ತದೆ ಎಂದ ಶಾಸಕರು, ಗ್ರಾಮಸ್ಥರ ಮನವಿ ಮೇರೆಗೆ ಸತ್ಯಮಂಗಲ ಕೆರೆ ಅಭಿವೃದ್ಧಿ ಮಾಡುವುದಾಗಿ ಭರವಸೆ ನೀಡಿದರು.
ನಗರ ಪಾಲಿಕೆ ಮಾಜಿ ಉಪ ಮೇಯರ್ ಟಿ.ಕೆ.ನರಸಿಂಹಮೂರ್ತಿ, ಟೂಡಾ ಮಾಜಿ ಸದಸ್ಯ ಸತ್ಯಮಂಗಲ ಜಗದೀಶ್, ಮುಖಂಡರಾದ ಅಣೆತೋಟ ಶ್ರೀನಿವಾಸ್, ಕೇಬಲ್ ಕುಮಾರ್, ಹನುಮಂತರಾಜು, ಟಿ.ಡಿ.ಕೃಷ್ಣಪ್ಪ, ಗಂಗಭೈರಯ್ಯ, ಕೀರ್ತಿ, ಹರೀಶ್ ಮೊದಲಾದವರು ಭಾಗವಹಿಸಿದ್ದರು.
Comments are closed.