ತುಮಕೂರು: ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ಕಾಮಗಾರಿ ಪುನರಾರಂಭ ವಿರೋಧಿಸಿ ಬುಧವಾರ ಮಾಜಿ ಸಚಿವ ಸೊಗಡು ಶಿವಣ್ಣ ಹಾಗೂ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾಜಿ ಸಚಿವ ಸೊಗಡು ಶಿವಣ್ಣ ಮಾತನಾಡಿ, ಕುಣಿಗಲ್ ತಾಲೂಕಿಗೆ ಹಂಚಿಕೆಯಾಗಿರುವ ನೀರು ತೆಗೆದುಕೊಂಡು ಹೋಗಲು ನಮ್ಮ ಅಭ್ಯಂತರವಿಲ್ಲ, ಆದರೆ ಮೂಲ ನಾಲೆಗೆ ಧಕ್ಕೆಯಾಗದಂತೆ ತೆಗೆದುಕೊಂಡು ಹೋಗಬೇಕೆಂಬುದು ನಮ್ಮ ಆಗ್ರಹವಾಗಿದೆ, ಈ ಹಿಂದೆ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ಪ್ರತಿಭಟನೆ ನಡೆದಾಗ ಸರಕಾರ ತಾಂತ್ರಿಕ ಸಮಿತಿ ನೇಮಿಸಿ ವರದಿ ಬಂದ ನಂತರ ಸಾಧಕ, ಭಾದಕಗಳನ್ನು ಚರ್ಚಿಸಲಾಗುವುದು ಎಂದು ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಹೋರಾಟ ಹಿಂಪಡೆಯಲಾಗಿತ್ತು, ತಾಂತ್ರಿಕ ವರದಿಯನ್ನು ಕತ್ತಲಲ್ಲಿ ಇಟ್ಟು ಕಾಮಗಾರಿ ನಡೆಸಲು ಹೊರಟಿರುವುದು ಸರಿಯಲ್ಲ, ಜಿಲ್ಲಾಡಳಿತ ಕೂಡಲೇ ಸಂಬಂಧಪಟ್ಟವರಿಗೆ ಸೂಚನೆ ನೀಡಿ ಕಾಮಗಾರಿ ತಡೆಯಬೇಕು, ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಬಿಜೆಪಿ ಮುಖಂಡ ದಿಲೀಪ್ ಕುಮಾರ್ ಮಾತನಾಡಿ, ತಾಂತ್ರಿಕ ಸಲಹಾ ಸಮಿತಿಯ ವರದಿ ಬಗ್ಗೆ ಚರ್ಚೆಯಾಗಿ ಇದರ ಬಗ್ಗೆ ನಿರ್ಧಾರ ಆಗುವ ವರೆಗೂ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಕೂಡಲೇ ನಿಲ್ಲಿಸುವಂತೆ ಜಿಲ್ಲಾಧಿಕಾರಿಗಳಾದ ತಾವು ಸಂಬಂಧಪಟ್ಟ ಇಲಾಖೆಯವರಿಗೆ ಆದೇಶಿಸಬೇಕೆಂಬುದು ನಮ್ಮ ಆಗ್ರಹವಾಗಿದೆ, ಇದು ಕಾರ್ಯರೂಪಕ್ಕೆ ಬರದಿದ್ದಲ್ಲಿ ನಮ್ಮಗಳ ಹೋರಾಟ ತೀವ್ರ ಸ್ವರೂಪ ಪಡೆದು ಶಾಶ್ವತವಾಗಿ ಹೆದ್ದಾರಿ ಬಂದ್, ಪುನಃ ಜಿಲ್ಲಾ ಬಂದ್ ಹಾಗೂ ಶಾಲಾ ಕಾಲೇಜ್ ಗಳ ಬಂದ್ ಈ ರೀತಿಯಾಗಿ ಇಡೀ ಜಿಲ್ಲೆಯಲ್ಲಿಯೇ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ, ಹೇಮಾವತಿ ನೀರಿನ ವಿಚಾರವಾಗಿ ಮನೆಗೊಬ್ಬರು ಜೈಲಿಗೆ ಹೋಗಲು ಸಿದ್ಧ ಎಂದರು.
ಕನ್ನಡ ಸೇನೆಯ ಧನಿಯಕುಮಾರ್ ಮಾತನಾಡಿ, ಹೇಮಾವತಿ ಹೋರಾಟ ಸಮಿತಿಯವರು, ಕನ್ನಡ ಪರ ಸಂಘಟನೆಗಳು ಹಾಗೂ ಸ್ವಾಮೀಜಿಗಳ ನೇತೃತ್ವಜಲ್ಲಿ ಹೋರಾಟ ಮಾಡಿ ತುಮಕೂರು ಬಂದ್ ಆಚರಣೆ ಮಾಡಲಾಗಿತ್ತು, ಪೈಪ್ ಲೈನ್ ಮುಖಾಂತರ ನೀರು ಬಿಡುವುದಕ್ಕೆ ನಾವು ವಿರೋಧ ವ್ಯಕ್ತಪಡಿಸಿದ್ದೆವು, ವರದಿ ಬರುವವರೆಗೆ ಕಾಮಗಾರಿ ಸ್ಥಗಿತಗೊಳಿಸುವಂತೆ ಸರ್ಕಾರ ಮತ್ತು ಜಿಲ್ಲಾಡಳಿತ ಸೂಚನೆ ನೀಡಿತ್ತು, ಆದರೆ ರಾತ್ರೋರಾತ್ರಿ ಜೆಸಿಬಿ ಯಂತ್ರಗಳ ಹಾಗೂ ಪೈಪ್ ಲೈನ್ ತಂದು ಕಾಮಗಾರಿ ಪ್ರಾರಂಭಿಸಲು ಮುಂದಾಗಿದ್ದಾರೆ, ಯಾವುದೇ ಕಾರಣಕ್ಕೂ ನಾವು ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದರು.
ಈ ಸಂಬಂಧ ಮನವಿಯನ್ನು ಅಪರ ಜಿಲ್ಲಾಧಿಕಾರಿ ಡಾ.ತಿಪ್ಪೇಸ್ವಾಮಿ ಅವರಿಗೆ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಸವರಾಜು, ಚಿಕ್ಕಬೋರೇಗೌಡ, ರವೀಶ್, ಹೆಚ್.ಟಿ.ಭೈರಪ್ಪ, ಸಾಗರನಹಳ್ಳಿ ವಿಜಯಕುಮಾರ್, ಕಳ್ಳಿಪಾಳ್ಯ ಲೋಕೇಶ್, ವೆಂಕಟಾಚಲ, ಟಿ.ಹೆಚ್. ಭೈರಪ್ಪ, ಹೊಸಕೋಟೆ ನಟರಾಜು, ಕೆ.ಪಿ.ಮಹೇಶ್, ನಂಜೇಗೌಡ, ದಸಂಸ ಮುಖಂಡ ಪಿ.ಎನ್.ರಾಮಯ್ಯ, ಜಿಪಂ ಮಾಜಿ ಸದಸ್ಯೆ ಯಶೋಧಮ್ಮ, ಜಗದೀಶ್, ಎ.ಸುನೀಲ್, ರಾಮಲಿಂಗಯ್ಯ, ಶಬ್ಬೀರ ಅಹಮದ್, ರಾಮಚಂದ್ರರಾವ್ ಇತರರು ಇದ್ದರು.
Comments are closed.