ಕುಣಿಗಲ್: ಪಟ್ಟಣದ ಕೋಟೆ ಪ್ರದೇಶದಲ್ಲಿನ ನಗರ ಅರೋಗ್ಯ ಕೇಂದ್ರದ ಸಿಬ್ಬಂದಿ ಬುಧವಾರ ರಾತ್ರಿ ಕೋಟೆ ಪ್ರದೇಶದಲ್ಲಿ ರಕ್ತದ ಮಾದರಿ ಸಂಗ್ರಹಿಸಲು ಮುಂದಾದಾಗ ನಾಗರಿಕರಲ್ಲಿ ಕೆಲಕಾಲ ಗಲಿಬಿಲಿ ಉಂಟಾಯಿತು.
ಕೋಟೆ ಪ್ರದೇಶದಲ್ಲಿ ನಗರ ಆರೋಗ್ಯ ಕೇಂದ್ರ ಕಳೆದ ಕೆಲ ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದು, ಬುಧವಾರ ಸಂಜೆ ಕೇಂದ್ರ ಸಿಬ್ಬಂದಿ ಕೆಲ ಮನೆಗೆ ತೆರಳಿ ರಕ್ತದ ಮಾದರಿ ನೀಡುವಂತೆ ಮನೆಯವರಲ್ಲಿ ಮನವಿ ಮಾಡಿದರು, ಇದರಿಂದ ಕೆಲ ನಾಗರಿಕರು ಆತಂಕಕ್ಕೆ ಒಳಗಾದರಲ್ಲದೆ ಕೇಂದ್ರದ ಮುಂದೆ ಜಮಾವಣೆಗೊಂಡು ಗಲಿಬಿಲಿಗೊಂಡರು.
ನಂತರ ಕೇಂದ್ರದ ವೈದ್ಯ ಡಾ.ರಮೇಶ್, ಈ ಭಾಗಕ್ಕೆ ವಲಸೆ ಬಂದಿರುವ ಒಬ್ಬರಲ್ಲಿ ಆನೆಕಾಲು ರೋಗದ ಲಕ್ಷಣಗಳು ಕಂಡು ಬಂದಿದೆ, ಮುನ್ನೆಚ್ಚರಿಕೆ ಕ್ರಮವಾಗಿ ರೋಗ ತಪಾಸಣೆ ನಿಟ್ಟಿನಲ್ಲಿ ರಕ್ತದ ಮಾದರಿ ಸಂಗ್ರಹ ಮಾಡಲಾಗುತ್ತಿದೆ, ಆನೆ ಕಾಲು ರೋಗವು ಸಂಜೆ ಹೊತ್ತು ಕಚ್ಚುವ ಸೊಳ್ಳೆಗಳಿಂದ ಬರುವ ಕಾರಣ ಈ ರೋಗದ ರಕ್ತ ತಪಾಸಣೆ ಸಂಜೆ ವೇಳೆಯಲ್ಲಿ, ರಾತ್ರಿ ಸಂಗ್ರಹ ಮಾಡಬೇಕಿದೆ, ರಕ್ತದ ಮಾದರಿ ಸಂಗ್ರಹಿಸಿ ಜಿಲ್ಲಾ ಲ್ಯಾಬ್ ಗೆ ಕಳಿಸಿ ತಪಾಸಣೆ ಮಾಡಿಸಲಾಗುವುದು, ಒಂದು ದಿನದಲ್ಲಿ ಫಲಿತಾಂಶ ದೊರಕುವುದರಿಂದ ಚಿಕಿತ್ಸೆಯನ್ನು ಸಹ ಬೇಗನೆ ಆರಂಭಿಸಬಹುದು, ಯಾರಿಗೆ ಕಾಲು ಊತ, ಕಾಲು ನೋವು ಇದೆ ಅಂತಹವರು ರಕ್ತ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.
ಬುಧವಾರ ರಾತ್ರಿ 125 ಮಂದಿಯ ರಕ್ತದ ಮಾದರಿ ಪಡೆದಿದ್ದು ಗುರುವಾರವೂ ರಕ್ತದ ಮಾದರಿ ಪಡೆಯುವುದಾಗಿ ಹೇಳಿದ್ದಾರೆ.
ತಾಲೂಕು ಆರೊಗ್ಯಾಧಿಕಾರಿ ಡಾ.ಮರಿಯಪ್ಪ ಮಾತನಾಡಿ, ಆನೆ ಕಾಲು ರೋಗವು ಒಂದು ಜಾತಿಯ ಸೊಳ್ಳೆ ಕಚ್ಚುವಿಕೆಯಿಂದ ಪೈಲೇರಿಯಾ ಬ್ಯಾಕ್ಟೀರಿಯದಿಂದ ಬರುವ ರೋಗವಾಗಿದ್ದು, ರಾತ್ರಿವೇಳೆ ರಕ್ತ ತಪಾಸಣೆಯಿಂದ ಪತ್ತೆ ಹಚ್ಚಬಹುದು, ರೋಗ ಪ್ರಾಥಮಿಕ ಹಂತದಲ್ಲಿ ಪತ್ತೆಯಾದರೆ ಸಂಪೂರ್ಣವಾಗಿ ವಾಸಿ ಮಾಡಬಹುದು, ನಾಗರಿಕರು ಸಹಕಾರ ನೀಡಬೇಕು ಎಂದಿದ್ದಾರೆ.
ಪುರಸಭೆ ಸೊಳ್ಳೆ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿರುವುದೆ ಘಟನೆಗೆ ಕಾರಣ ಎಂದು ಪುರಸಭೆ ಸದಸ್ಯನಾಗಣ್ಣ ಆರೋಪಿಸಿದ್ದು, ಸೊಳ್ಳೆ ನಿಯಂತ್ರಣಕ್ಕೆ ಪುರಸಭೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.
Comments are closed.