ಜಗತ್ತನ್ನು ಪೋಲಿಯೋ ಮುಕ್ತ ಮಾಡಬೇಕಿದೆ

ತುಮಕೂರಿನಲ್ಲಿ ಪೋಲಿಯೋ ನಿರ್ಮೂಲನೆ ಜನಜಾಗೃತಿ ಜಾಥಾ

3

Get real time updates directly on you device, subscribe now.


ತುಮಕೂರು: ಅಂತಾರಾಷ್ಟ್ರೀಯ ಪಲ್ಸ್ ಪೋಲಿಯೋ ದಿನಾಚರಣೆ ಅಂಗವಾಗಿ ಗುರುವಾರ ನಗರದ ಎಲ್ಲಾ ರೋಟರಿ ಸಂಸ್ಥೆಯ ಶಾಖೆಗಳು, ಇನ್ನರ್ವೀಲ್ ಹಾಗೂ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಪಲ್ಸ್ ಪೋಲಿಯೋ ಬಗ್ಗೆ ಜನಜಾಗೃತಿ ಜಾಥಾ ಹಮ್ಮಿಕೊಂಡಿದ್ದವು.
ಬಿ.ಜಿ.ಎಸ್. ವೃತ್ತದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಂದ್ರಶೇಖರ್ ಜಾಗೃತಿ ಜಾಥಾಗೆ ಚಾಲನೆ ನೀಡಿದರು, ರೋಟರಿ ಜಿಲ್ಲಾ ಕಾರ್ಯದರ್ಶಿ ಬಿಳಿಗೆರೆ ಶಿವಕುಮಾರ್ ಮಾತನಾಡಿ, ಜಗತ್ತನ್ನು ಪೋಲಿಯೋ ಮುಕ್ತಗೊಳಿಸುವ ನಿಟ್ಟಿನಲ್ಲಿ ಪ್ರಪಂಚದಾದ್ಯಂತ ರೋಟರಿ ಸಂಸ್ಥೆ ಹಲವಾರು ಕಾರ್ಯಕ್ರಮ ಹಮ್ಮಿಕೊಂಡು ಕಾರ್ಯ ನಿರ್ವಹಿಸುತ್ತಿದೆ, ಜನರ ಸಹಕಾರದಿಂದ ಪೋಲಿಯೋ ನಿರ್ಮೂಲನೆ ಮಾಡಬಹುದು, ಇದಕ್ಕಾಗಿ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು.
ಪೋಲಿಯೋ ನಿರ್ಮೂಲನೆಗಾಗಿ ರೋಟರಿ ಸಂಸ್ಥೆ 580 ಮಿಲಿಯನ್ ಡಾಲರ್ ಹಣ ಖರ್ಚು ಮಾಡಿ ಈ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದೆ, ಭಾರತ ಪೋಲಿಯೊ ಮುಕ್ತವಾಗಿದೆ, ಆದರೂ ಅಕ್ಕಪಕ್ಕದ ದೇಶಗಳಲ್ಲಿ ಪೋಲಿಯೊ ಪ್ರಕರಣಗಳು ಕಂಡು ಬಂದಿರುವುದರಿಂದ ಭಾರತಕ್ಕೂ ಹರಡಬಹುದೆಂಬ ಕಾರಣಕ್ಕೆ ತಡೆಯಲು ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.

ರೋಟರಿ ಸಂಯೋಜಕ ಬೆಳ್ಳಿ ಲೋಕೇಶ್ ಮಾತನಾಡಿ, ಪೋಲಿಯೊ ನಿರ್ಮೂಲನೆಗಾಗಿ ಜನಜಾಗೃತಿ ಕಾರ್ಯಕ್ರಮಕ್ಕೆ ವಿವಿಧ ಸಂಸ್ಥೆಗಳು ಕೈ ಜೋಡಿಸಿವೆ, 8 ವರ್ಷದ ಹಿಂದೆಯೇ ಭಾರತ ಪೋಲಿಯೊ ಮುಕ್ತವಾಗಿದ್ದರೂ ನೆರೆಯ ಪಾಕಿಸ್ತಾನ, ಆಫ್ಘಾನಿಸ್ತಾನ ದೇಶಗಳಲ್ಲಿ ಪೋಲಿಯೊ ಪ್ರಕರಣ ಇರುವುದರಿಂದ ನಮ್ಮ ದೇಶಕ್ಕೂ ಹರಡುವ ಸಾಧ್ಯತೆಗಳಿವೆ, ಈ ಕಾರಣದಿಂದ ಮಕ್ಕಳು ಹುಟ್ಟಿದಾಗಿನಿಂದ 5 ವರ್ಷದ ವರೆಗೆ ಈ ಹಿಂದೆ ಎಷ್ಟೇ ಬಾರಿ ಪೋಲಿಯೊ ಹನಿ ಹಾಕಿಸಿದ್ದರೂ ಮತ್ತೆ ಹಾಕಿಸಿ ಮಕ್ಕಳನ್ನು ಪೋಲಿಯೊ ರೋಗದಿಂದ ದೂರ ಮಾಡಿ ಅವರು ಅಂಗವಿಕಲರಾಗುವುದನ್ನು ತಡೆಯಬೇಕು ಎಂದು ಮನವಿ ಮಾಡಿದರು.
ರೋಟರಿ ವಲಯ ಪಾಲಕರಾದ ಎಂ.ಎನ್.ಪ್ರಕಾಶ್ ಮಾತನಾಡಿ, ಬರುವ ಡಿಸೆಂಬರ್ 24ರಂದು ದೇಶಾದ್ಯಂತ 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಅಭಿಯಾನ ನಡೆಯಲಿದೆ, ಅಂದು ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಿಸಿ ಅವರನ್ನು ಅಂಗವೈಕಲ್ಯತೆಯಿಂದ ಪಾರುಮಾಡಿ ಎಂದು ಮನವಿ ಮಾಡಿದರು.

ರೋಟರಿ ಸಹಾಯಕ ಪಾಲಕ ಜಿ.ಎನ್.ಮಹೇಶ್, ತುಮಕೂರು ರೋಟರಿ ಅಧ್ಯಕ್ಷೆ ರಾಜೇಶ್ವರಿ ರುದ್ರಪ್ಪ, ರೋಟರಿ ಕಾರ್ಯದರ್ಶಿ ಹೆಬ್ಬೂರು ಶ್ರೀನಿವಾಸಮೂರ್ತಿ ,ರೋಟರಿ ಪ್ರೇರಣಾ ಸಂಸ್ಥೆ ಅಧ್ಯಕ್ಷ ಮಲ್ಲಿಕಾರ್ಜುನ್ ಮೆಳೆಹಳ್ಳಿ, ರೋಟರಿ ಈಸ್ಟ್ ಅಧ್ಯಕ್ಷ ಫಣೀಂದ್ರ ಸುರಭಿ, ರೋಟರಿ ಸಿದ್ಧಗಂಗಾ ಅಧ್ಯಕ್ಷ ನರಸಿಂಹಮೂರ್ತಿ, ರೋಟರಿ ತುಮಕೂರು ಸೆಂಟ್ರಲ್ ಅಧ್ಯಕ್ಷೆ ಸರೋಜಮ್ಮ, ಜಿಲ್ಲಾ ಆಸ್ಪತ್ರೆ ಶಸ್ತ್ರ ಚಿಕಿತ್ಸಕ ಡಾ.ಅಸ್ಗರ್ ಬೇಗ್, ನಗರಪಾಲಿಕೆ ಆರೋಗ್ಯಾಧಿಕಾರಿ ಡಾ.ವೀರೇಶ್ ಕಲ್ಮಠ, ಇನ್ನರ್ ವೀಲ್ ಅಧ್ಯಕ್ಷೆ ಶೀಲಾ ಮಧು, ಕಾರ್ಯದರ್ಶಿ ರೇಖಾ ಕುಮಾರ್, ಉಪಾಧ್ಯಕ್ಷೆ ಮಂಜುಳಾ, ಖಜಾಂಚಿ ಲತಾ ಮಹೇಶ್ ಮೊದಲಾದವರು ಜಾಥಾದ ನೇತೃತ್ವ ವಹಿಸಿದ್ದರು.

ರೋಟರಿ, ಜಿಲ್ಲಾಡಳಿತ, ನಗರಪಾಲಿಕೆ ಆರೋಗ್ಯ ಇಲಾಖೆ ಆಶ್ರಯದಲ್ಲಿ ನಡೆದ ಜಾಗೃತಿ ಜಾಥಾದಲ್ಲಿ ರೋಟರಿ, ಇನ್ನರ್ ವೀಲ್ ಸದಸ್ಯರು, ಸ್ಕೌಟ್ಸ್ ಗೈಡ್ಸ್, ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು, ಬಿಜಿಎಸ್ ವೃತ್ತದಿಂದ ಆರಂಭವಾದ ಜಾಥಾ ಅಶೋಕ ರಸ್ತೆ, ಗುಂಚಿ ವೃತ್ತ, ಜನರಲ್ ಕಾರ್ಯಪ್ಪ ರಸ್ತೆ ಮೂಲಕ ಸಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಸಮಾಪ್ತಿಗೊಂಡಿತು.

Get real time updates directly on you device, subscribe now.

Comments are closed.

error: Content is protected !!