ತುಮಕೂರು: ಸುಪ್ರೀಂ ಕೋರ್ಟ್ನ 2024ರ ಆಗಸ್ಟ್ 01ರ ತೀರ್ಪಿನಂತೆ ಒಳಮೀಸಲಾತಿ ಜಾರಿಗೊಳಿಸಬೇಕು, ಅಲ್ಲಿಯವರೆಗೆ ಸರಕಾರದ ನೇಮಕಾತಿಗಳಿಗೆ ತಡೆಯೊಡ್ಡಬೇಕು ಎಂದು ಆಗ್ರಹಿಸಿ ಮಾದಿಗ ಸಮೂಹಗಳ ಒಕ್ಕೂಟದಿಂದ ಪಕ್ಷಾತೀತವಾಗಿ ಬೃಹತ್ ತಮಟೆ ಚಳವಳಿ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯ ಹತ್ತು ತಾಲೂಕುಗಳಿಂದ ಆಗಮಿಸಿದ್ದ ಮಾದಿಗ ಸಮುದಾಯದ ಬಂಧುಗಳು ನಗರದ ಟೌನ್ಹಾಲ್ ಬಳಿ ಸಮಾವೇಶಗೊಂಡು ಅಲ್ಲಿಂದ ನೂರಾರು ತಮಟೆ ಸದ್ದಿನೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾದಿಗ ದಂಡೋರದ ಪಾವಗಡ ಶ್ರೀರಾಮ್ ಮಾತನಾಡಿ, ಶತ ಶತಮಾನಗಳಿಂದ ಶೋಷಣೆ, ವಂಚನೆಗೆ ಒಳಗಾದ ಮಾದಿಗ ಸಮುದಾಯ ಮಾದಿಗ ದಂಡೋರ ಮತ್ತು ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಹೆಸರಿನಲ್ಲಿ ಸುಮಾರು ಮೂರು ದಶಕಗಳಿಂದ ರಾಜ್ಯಾದ್ಯಂತ ನಡೆಸಿದ ಹಲವು ರೀತಿಯ ವಿಶೇಷ ಹಾಗೂ ಉಗ್ರ ರೀತಿಯ ಪ್ರತಿಭಟನೆ ಪ್ರತಿಫಲವಾಗಿ 2003ರಲ್ಲಿ ಅಂದಿನ ಎಸ್.ಎಂ.ಕೃಷ್ಣ ಸರಕಾರ ಒಳಮೀಸಲಾತಿ ಆಯೋಗ ರಚಿಸಲಾಯಿತು, ಮೂವರು ನ್ಯಾಯಾಧೀಶರ ರಾಜಿನಾಮೆ ನಂತರ ನ್ಯಾ.ಎ.ಜೆ.ಸದಾಶಿವ ಆವರ ನೇತೃತ್ವದ ಆಯೋಗ ಸರಕಾರದ ನೌಕರ ವರ್ಗವನ್ನು ಬಳಸಿಕೊಂಡು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಮಾಹಿತಿ ಸಂಗ್ರಹಿಸಿ 2012ರಲ್ಲಿ ವರದಿ ನೀಡಿದ್ದರೂ ಇದುವರೆಗೂ ವರದಿ ಜಾರಿ ಮಾಡಲು ಸರಕಾರಗಳು ಹಿಂದೇಟು ಹಾಕುತ್ತಾ ಬಂದಿದೆ, ಅಲ್ಲದೆ 2024ರ ಆಗಸ್ಟ್ 01ರ ಸುಪ್ರಿಂ ಕೋರ್ಟ್ ತೀರ್ಪು ಸಹ ಒಳಮೀಸಲಾತಿ ಜಾರಿ ಆಯಾಯ ರಾಜ್ಯಗಳಿಗೆ ಬಿಟ್ಟ ವಿಚಾರ ಎಂದು ಹೇಳಿದೆ, ಹಾಗಾಗಿ ಸರಕಾರ ಕೂಡಲೇ ಒಳ ಮೀಸಲಾತಿ ಜಾರಿ ಮಾಡಬೇಕು, ಅಲ್ಲಿಯ ವರೆಗೆ ನೇಮಕಾತಿಗಳಿಗೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ ಮಾತನಾಡಿ, ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯಲ್ಲಿ ಮಾದಿಗ ಜನಾಂಗವು ಅಧಿಕ ಸಂಖ್ಯೆಯಲ್ಲಿ ಇರುತ್ತದೆ ಎಂಬ ವಿಷಯವನ್ನು ಎಲ್ಲಾ ಆಯೋಗಗಳೂ ತಮ್ಮ ವಸ್ತುನಿಷ್ಠ ವರದಿಗಳಲ್ಲಿ ಸ್ಪಷ್ಟಿಕರಣ ನೀಡಿವೆ, 1976 ರ ಎಲ್.ಜಿ ಹಾವನೂರು ಆಯೋಗವು ತನ್ನ ವರದಿಯಲ್ಲಿ ಪರಿಶಿಷ್ಟ ಜಾತಿಯ ಜನಸಂಖ್ಯೆಯಲ್ಲಿ ಮಾದಿಗ ಜನಾಂಗದ ಜನಸಂಖ್ಯೆ ಶೇ.58 ಇರುತ್ತದೆ ಎಂಬ ವಿಷಯ ಸ್ಪಷ್ಟಪಡಿಸಿದೆ, ನ್ಯಾ.ಹೆಚ್.ಕಾಂತರಾಜ್ ಆಯೋಗವೂ ಸಹ ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಯಲ್ಲಿ ಮಾದಿಗರ ಜನಸಂಖ್ಯೆ ಅಧಿಕವಾಗಿದೆ ಎಂಬ ವಿಷಯ ಸ್ಪಷ್ಟಪಡಿಸಿದೆ, ಆದರೂ ದತ್ತಾಂಶಗಳ ಕೊರತೆಯ ನೆಪವೊಡ್ಡಿ ಸುಪ್ರಿಂಕೋರ್ಟ್ನ ತೀರ್ಪಿನ ನಂತರವೂ ಸರಕಾರ ಒಳಮೀಸ ಲಾತಿ ಜಾರಿಗೆ ಮೀನಾಮೇಷ ಎಣಿಸುತ್ತಿರುವುದು ಖಂಡನೀಯ ಎಂದರು.
ವೈದ್ಯ ಡಾ.ಲಕ್ಷ್ಮಿಕಾಂತ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆಂಚಮಾರಯ್ಯ, ಮಾದಿಗ ದಂಡೋರದ ಕೊಡಿಯಾಲ ಮಹದೇವ, ಹೋರಾಟಗಾರರಾದ ಕೊಟ್ಟ ಶಂಕರ್, ಮಾರುತಿ ಗಂಗಹನುಮಯ್ಯ, ಡಾ.ಬಸವರಾಜು, ಕೇಬಲ ರಘು, ಡಿ.ಟಿ.ವೆಂಕಟೇಶ್, ರಾಜಸಿಂಹ, ನರಸೀಯಪ್ಪ, ನರಸಿಂಹಯ್ಯ, ಎಂ.ವಿ.ರಾಘವೇದ್ರ ಸ್ವಾಮಿ, ಸಿದ್ದೇಶ ನೆಗಲಾಲ್, ನಿವೃತ್ತ ಇಂಜಿನಿಯರ್ ಶಿವಕುಮಾರ್, ಯೋಗೀಶ್, ಮಹಲಿಂಗಯ್ಯ ಇತರರು ಹಾಜರಿದ್ದರು.
Comments are closed.