ನೀರಿನಲ್ಲಿ ಕೊಚ್ಚಿ ಹೋದ್ರೂ ಸಾವು ಗೆದ್ದ ವಿದ್ಯಾರ್ಥಿನಿ

ಸೆಲ್ಫಿ ತೆಗೆದುಕೊಳ್ಳುವಾಗ ಆಕಸ್ಮಿಕವಾಗಿ ಕಾಲು ಜಾರಿ ಅವಘಡ

3

Get real time updates directly on you device, subscribe now.


ತುಮಕೂರು: ತಾಲ್ಲೂಕಿನ ಮೈದಾಳ ಕೆರೆ ಕೋಡಿ ನೀರಿನಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಕೊಚ್ಚಿ ಹೋಗಿದ್ದ ವಿದ್ಯಾರ್ಥಿನಿ ಜೀವಂತವಾಗಿ ಪತ್ತೆಯಾಗುವ ಮೂಲಕ ಸಾವನ್ನೇ ಗೆದ್ದು ಬಂದಿದ್ದಾರೆ.
ನಗರದ ಎಸ್ ಐಟಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಗುಬ್ಬಿ ತಾಲ್ಲೂಕಿನ ಶಿವರಾಂಪುರ ನಿವಾಸಿ ಹಂಸ (19) ಎಂಬಾಕೆಯೇ ಸಾವನ್ನು ಗೆದ್ದು ಬಂದಿರುವ ವಿದ್ಯಾರ್ಥಿನಿ.
ವಿದ್ಯಾರ್ಥಿನಿ ಹಂಸ ಗೆಳತಿಯರ ಜೊತೆ ಮಂದಾರಗಿರಿ ಬೆಟ್ಟದ ವೀಕ್ಷಣೆಗೆ ತೆರಳಿದ್ದರು, ಅಲ್ಲೇ ಸಮೀಪದಲ್ಲಿದ್ದ ಮೈದಾಳ ಕೆರೆ ಕೋಡಿ ಬಳಿ ಹೋಗಿದ್ದಾರೆ, ಕೋಡಿ ನೀರು ಹರಿಯುವುದರಿಂದ ಖುಷಿಯಾದ ವಿದ್ಯಾರ್ಥಿನಿ ಕೋಡಿ ಬಳಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದು, ಆ ಸಂದರ್ಭದಲ್ಲಿ ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.

ಸುದ್ದಿ ತಿಳಿದ ಕೂಡಲೇ ಕ್ಯಾತ್ಸಂದ್ರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ವಿದ್ಯಾರ್ಥಿನಿಗಾಗಿ ತೀವ್ರ ಕಾರ್ಯಾಚರಣೆ ನಡೆಸಿದ್ದರು, ಆದರೆ ಭಾನುವಾರ ರಾತ್ರಿಯಾದರೂ ಸಿಕ್ಕಿರಲಿಲ್ಲ.
ಸೋಮವಾರ ಬೆಳಗ್ಗೆ ಮತ್ತೆ ರಕ್ಷಣಾ ಕಾರ್ಯವನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ಕೈಗೊಂಡಾಗ ಕಲ್ಲಿನ ಪೊಟರೆಯಲ್ಲಿ ವಿದ್ಯಾರ್ಥಿನಿ ಸಿಲುಕಿಕೊಂಡಿರುವುದು ಪತ್ತೆಯಾಗಿದೆ, ಸದ್ಯ ವಿದ್ಯಾರ್ಥಿನಿ ಅಸ್ವಸ್ಥರಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸತತ 12 ಗಂಟೆಗಳ ಕಾಲ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುವ ಮೂಲಕ ವಿದ್ಯಾರ್ಥಿನಿಯನ್ನು ಜೀವಂತವಾಗಿ ರಕ್ಷಿಸಿದ್ದಾರೆ, ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರಿಂದ ಪ್ರಶಂಸೆಯ ಮಹಾಪೂರವೇ ಹರಿದು ಬಂದಿದೆ.
ಭಾನುವಾರ ಸಂಜೆ ಕೋಡಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ವಿದ್ಯಾರ್ಥಿನಿ ಹಂಸ ಇಡೀ ರಾತ್ರಿ ಕಲ್ಲಿನ ಪೊಟರೆಯಲ್ಲಿ ಕಾಲ ಕಳೆದಿದ್ದು, ಪವಾಡ ಎಂಬಂತೆ ಬದುಕುಳಿದು ಬಂದಿರುವುದು ಪೋಷಕರು ಹಾಗೂ ವಿದ್ಯಾರ್ಥಿಗಳ ಖುಷಿಗೆ ಪಾರವೇ ಇಲ್ಲದಂತಾಗಿದೆ.
ವಿದ್ಯಾರ್ಥಿನಿ ಹಂಸ ಜೀವಂತವಾಗಿರುವ ವಿಷಯ ತಿಳಿದ ಕೂಡಲೇ ಎಸ್ ಐಟಿ ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕರ ವೃಂದ ಹಾಗೂ ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ವಿದ್ಯಾರ್ಥಿನಿ ಹಂಸ ಅವರನ್ನು ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿದ ಸುದ್ದಿ ತಿಳಿಯುತ್ತಿದ್ದಂತೆ ಎಸ್ ಐಟಿ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಸ್ನೇಹಿತೆಯನ್ನು ನೋಡಲು ಆಸ್ಪತ್ರೆ ಮುಂಭಾಗ ಜಮಾಯಿಸಿದ್ದ ದೃಶ್ಯ ಕಂಡು ಬಂತು.

ವಿದ್ಯಾರ್ಥಿನಿ ಹೇಳಿಕೆ
ಕಲ್ಲಿನ ಪೊಟರೆಯಲ್ಲಿ ಸಿಲುಕಿ ಹಾಕಿಕೊಂಡು ಇಡೀ ರಾತ್ರಿ ದೇವರು ಹಾಗೂ ನನ್ನ ತಂದೆ- ತಾಯಿ ನೆನಪಿಸಿಕೊಂಡು ಧೈರ್ಯವಾಗಿದ್ದೆ ಎಂದು ಪವಾಡ ರೀತಿಯಲ್ಲಿ ಬದುಕುಳಿದ ವಿದ್ಯಾರ್ಥಿನಿ ಹಂಸ ಹೇಳಿದರು.

ಟಿವಿಗಳಲ್ಲಿ ಇಂತಹ ಕಾರ್ಯಾಚರಣೆ ಮಾಡುವುದನ್ನು ನೋಡಿದ್ದೆ, ಅದೇ ರೀತಿ ಇಲ್ಲೂ ಬರಬಹುದು ಎಂದುಕೊಂಡಿದ್ದೆ, ಅದೇ ರೀತಿ ಇಲ್ಲೂ ಸಹ ಬೆಳಕು ಬಂತು, ಅವರು ಕೂಗಿದ್ದು ನನಗೆ ಕೇಳಿಸಿತು, ಅದಾದ ಬಳಿಕ ನಾನು ಸಹ ಕೂಗಿದೆ, ಬಳಿಕ ಕಾರ್ಯಾಚರಣೆ ನಡೆಸಿ ನನ್ನನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದರು ಎಂದು ಧನ್ಯತಾ ಭಾವದಿಂದ ಹೇಳಿದರು.

ಇನ್ನು ಮುಂದೆ ಯಾವುದೇ ಕಾರಣಕ್ಕೂ ಈ ರೀತಿಯ ಸೆಲ್ಫಿ ಗೀಳಿಗೆ ಯಾರೂ ಸಹ ಮುಂದಾಗಬಾರದು ಎಂದು ಮನವಿ ಮಾಡಿದರು.

Get real time updates directly on you device, subscribe now.

Comments are closed.

error: Content is protected !!