ಗುಬ್ಬಿ: ಅವೈಜ್ಞಾನಿಕ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ತಡೆಯಲು ಲಕ್ಷಾಂತರ ರೈತರೊಂದಿಗೆ ಪಾದಯಾತ್ರೆ ಕೈಗೊಳ್ಳಲಾಗುವುದು ಎಂದು ತುರುವೇಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಟಿ.ಕೃಷ್ಣಪ್ಪ ಕಿಡಿಕಾದರು.
ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಹೇಮಾವತಿ ಲಿಂಕ್ ಕೆನಾಲ್ ವಿರೋಧಿ ಹೋರಾಟ ಸಮಿತಿಯಿಂದ ನಡೆದ ಪೂರ್ವಭಾವಿ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ನೀರಾವರಿ ತಜ್ಞರ ಪ್ರಕಾರ 3 ಅಡಿ ವ್ಯಾಸದ ಪೈಪುಗಳನ್ನು ಹಾಕಬೇಕಾಗಿತ್ತು, ಆದರೆ 12 ಅಡಿ ವ್ಯಾಸದ ಪೈಪುಗಳನ್ನು ಹಾಕಿ ನೀರಾವರಿ ತಜ್ಞರ ವಿರುದ್ಧ ಅವೈಜ್ಞಾನಿಕವಾಗಿ 12 ಅಡಿ ವ್ಯಾಸದ ಪೈಪುಗಳನ್ನು ಹಾಕಲಾಗುತ್ತಿದೆ, ಈ ರೀತಿ ಮುಂದುವರೆದರೆ ತುಮಕೂರು ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ಮರಣ ಶಾಸನವಾಗುತ್ತದೆ, ತಕ್ಷಣವೇ ರೈತರು ಎಚ್ಚೆತ್ತುಕೊಂಡು ಈ ಅವೈಜ್ಞಾನಿಕ ಕಾಮಗಾರಿಯ ವಿರುದ್ಧ ಹೋರಾಟ ಮಾಡಬೇಕಿದೆ, ತುಮಕೂರು ಜಿಲ್ಲೆಗೆ ಹರಿಯುವ ಹೇಮಾವತಿ ನೀರನ್ನು ರಕ್ಷಿಸಬೇಕಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ಮಾಜಿ ಸಚಿವ ಸೊಗಡು ಶಿವಣ್ಣ ಮಾತನಾಡಿ ಹಿಂದೆ ಹೋರಾಟ ಮಾಡಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ನಿಲ್ಲಿಸಲಾಗಿತ್ತು, ಸರ್ಕಾರ ತಾಂತ್ರಿಕ ಸಮಿತಿ ರಚನೆ ಮಾಡಿದ್ದು ತಾಂತ್ರಿಕ ಸಮಿತಿ ವರದಿ ಬರುವ ಮುನ್ನವೇ ಆಗಲೇ ಗುತ್ತಿಗೆದಾರರು ಗುಬ್ಬಿ ತಾಲೂಕಿನ ಗಂಗಸಂದ್ರದ ಬಳಿ 12 ಅಡಿ ವ್ಯಾಸವುಳ್ಳ ಪೈಪುಗಳನ್ನು ಇಳಿಸುತ್ತಿರುವುದು ಗಮನಕ್ಕೆ ಬಂದಿದ್ದು ಗುಬ್ಬಿ ತಾಲೂಕಿನ ಜನರು ಎಚ್ಚೆತ್ತುಕೊಂಡಿದ್ದು ಈ ವಿಚಾರವಾಗಿ ಜಿಲ್ಲಾದ್ಯಂತ ನೀರಾವರಿ ಹೋರಾಟ ಸಮಿತಿ ಮತ್ತು ರೈತರು ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದಾಗಿ ಜಿಲ್ಲೆಯಾದ್ಯಂತ ರೈತರು, ಯುವಕರು, ಸಂಘ ಸಂಸ್ಥೆಗಳು ಹೋರಾಟಕ್ಕೆ ಸಿದ್ಧರಾಗಬೇಕು, ರೈತರಿಗೆ ಹೋರಾಟದ ದಿನಾಂಕ ತಿಳಿಸಲಾಗುವುದು ಎಂದು ತಿಳಿಸಿದರು.
ಮುಖಂಡರಾದ ಎಸ್.ಡಿ.ದಿಲೀಪ್ ಕುಮಾರ್ ಮತ್ತು ಬಿ.ಎಸ್.ನಾಗರಾಜು ಮಾತನಾಡಿ ರಾಜ್ಯ ಸರ್ಕಾರದ ಎಕ್ಸ್ ಪ್ರೆಸ್ ಲಿಂಕ್ ಅವೈಜ್ಞಾನಿಕ ಕಾಮಗಾರಿಯೂ ತುಮಕೂರು ಜಿಲ್ಲೆಗೆ ಮರಣ ಶಾಸನವಾಗಿದೆ, ಜಿಲ್ಲೆಯ ರೈತಾಪಿ ಕುಟುಂಬಗಳು ಹೇಮಾವತಿ ನೀರನ್ನು ನೆಚ್ಚಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ, ಈ ಕಾಮಗಾರಿ ನಡೆದರೆ ರೈತರಿಗೆ ಮರಣ ಶಾಸನವಾಗುತ್ತದೆ, ಎಲ್ಲಾ ರೈತರು ಲಿಂಕ್ ಕೆನಾಲ್ ನಡೆಯುತ್ತಿರುವ ಕಾಮಗಾರಿಯ ಸ್ಥಳದಲ್ಲಿ ಮಲಗುತ್ತೇವೆ ಹಾಗೂ ಜಿಲ್ಲೆಯಾದ್ಯಂತ ರೈತರ ಟ್ರ್ಯಾಕ್ಟರ್ ಗಳನ್ನು ತರಿಸಿ 206 ರಸ್ತೆ ತಡೆಯಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ತಾಲ್ಲೂಕು ರೈತ ಸಂಘದ ಅಧ್ಯಕ್ಷ ವೆಂಕಟೇಗೌಡ, ಹೆಚ್.ಟಿ.ಭೈರಪ್ಪ, ಕಳ್ಳಿಪಾಳ್ಯ ಲೋಕೇಶ್ ಸೇರಿ ನೂರಾರು ರೈತರು ಹಾಜರಿದ್ದರು.
Comments are closed.