ಕುಣಿಗಲ್: ಪುರಸಭೆಯ ಎರಡನೆ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಘೋಷಣೆಯಾಗಿದ್ದರೂ ಚುನಾವಣೆ ನಡೆಸದ ಕಾರಣ ಪುರಸಭೆ ಜನಪ್ರತಿನಿಧಿಗಳಿಗೆ ಸಂವಿಧಾನ ಬದ್ಧವಾಗಿ ಇರುವ ಆಡಳಿತ ಅಧಿಕಾರ ನಡೆಸಲಾಗದೆ ಪರದಾಡುವಂತಾಗಿ ಸದಸ್ಯರು ಒಳಗೊಳಗೆ ವ್ಯವಸ್ಥೆಗೆ ಹಿಡಿ ಶಾಪ ಹಾಕುವಂತಾಗಿದೆ.
ಪುರಸಭೆಯ 23 ವಾರ್ಡ್ಗಳಿಗೆ ಸಾರ್ವತ್ರಿಕ ಚುನಾವಣೆ 2019ರ ಮೇ 29 ರಂದು ನಡೆದು 31 ರಂದು ಫಲಿತಾಂಶ ಪ್ರಕಟಗೊಂಡಿತು, ಪುರಸಭೆ ಸದಸ್ಯರ ಆಯ್ಕೆ ಘೊಷಣೆಯಾದರೂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕ್ರಿಯೆ ವಿಳಂಬವಾದ ಕಾರಣ ಫಲಿತಾಂಶ ಬಂದು 16- 17ತಿಂಗಳ ನಂತರ ಮೊದಲ ಅವಧಿಗೆ ಮೀಸಲಾತಿ ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಬಿಸಿಎಂ(ಬ) ಮಹಿಳೆಗೆ ಘೋಷಣೆ ಮಾಡಿದ ಮೇರೆಗೆ ಅಧ್ಯಕ್ಷ, ಉಪಾಧ್ಯಕ್ಷರ ಅಯ್ಕೆ ನಡೆದು 2020ರ ಡಿಸೆಂಬರ್ 12 ರಂದು ಪುರಸಭೆ ಮೊದಲ ಸಾಮಾನ್ಯ ಸಭೆ ನಡೆಯಿತು, ಮೊದಲ ಅವಧಿಯ ಮೀಸಲಾತಿ ಆಡಳಿತ 30 ತಿಂಗಳು ಪೂರ್ಣಗೊಂಡ ನಂತರ ಎರಡನೆ ಅವಧಿ ಮೀಸಲಾತಿ ಪುನರ್ ರಚನೆ ಪ್ರಕ್ರಿಯೆ ವಿಳಂಬದ ಕಾರಣ 2023ರ ಮೇ- 6 ರಂದು ತುಮಕೂರು ಉಪ ವಿಭಾಗಾಧಿಕಾರಿಗಳನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿತು.
ಆಡಳಿತಾಧಿಕಾರಿ ನೇಮಕವಾಗಿ 16 ತಿಂಗಳ ನಂತರ ಎರಡನೆ ಅವಧಿ ಮೀಸಲಾತಿ ಅಧ್ಯಕ್ಷ ಸ್ಥಾನ- ಸಾಮಾನ್ಯಮಹಿಳೆ, ಉಪಾಧ್ಯಕ್ಷ ಸ್ಥಾನ- ಪ.ಜಾತಿಗೆ ಮೀಸಲು ಮಾಡಲಾಯಿತು, ಇದರನ್ವಯ 2024ರ ಸೆ.9ರ ಸೋಮವಾರ ಮಧ್ಯಾಹ್ನ ಒಂದು ಗಂಟೆಗೆ ಅದ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಯ ವೇಳಾಪಟ್ಟಿಯನ್ನು ಚುನಾವಣಾಧಿಕಾರಿ ತುಮಕೂರು ಉಪ ವಿಭಾಗಾಧಿಕಾರಿ ಪ್ರಕಟಿಸಿದ್ದರು, 2019ರಲ್ಲಿ ನಡೆದಿದ್ದ ಪುರಸಭೆ ಚುನಾವಣೆಯಲ್ಲಿ ಏಳನೇ ವಾರ್ಡ್ ಕೈ ಸದಸ್ಯ ಸಮಿವುಲ್ಲಾ ಆಯ್ಕೆ ಪ್ರಶ್ನಿಸಿ ಎದುರಾಳಿ ಜೆಡಿಎಸ್ ಅಭ್ಯರ್ಥಿ ಅನ್ಸರ್ ಪಾಶ ಚುನಾವಣಾ ತಕಾರರು ಅರ್ಜಿ ಸಲ್ಲಿಸಿ, ಹೈಕೋರ್ಟ್ ಅನ್ಸರ್ ಪಾಶ ಆಯ್ಕೆ ಸಿಂಧುಗೊಳಿಸಿತ್ತು, ಜಿಲ್ಲಾಧಿಕಾರಿ ಸೆ.5ರ ರಾಜ್ಯಪತ್ರದಲ್ಲಿ ಅನ್ಸರ್ ಪಾಶ ಚುನಾಯಿತ ಸದಸ್ಯರೆಂದು ಘೋಷಣೆ ಮಾಡಿದ್ದರು, ಅನ್ಸರ್ ಪಾಶ ಸದಸ್ಯರೆಂದು ಘೋಷಿತಕ್ಕೂ ಮುನ್ನವೆ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ವೇಳಾಪಟ್ಟಿ ಸೆ.9ಕ್ಕೆ ಘೋಷಣೆಯಾಗಿತ್ತು, ನೂತನ ಸದಸ್ಯ ಅನ್ಸರ್ಪಾಶ ತಾವು ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಮತ ಚಲಾಯಿಸುವ ಬಗ್ಗೆ ಬೇಡಿಕೆ ಮಂಡಿಸಿದ್ದರಿಂದ, ಚುನಾವಣಾಧಿಕಾರಿ 2024ರ ಸೆ.9ರ ಸೋಮವಾರ ನಡೆಯಬೇಕಿದ್ದ ಚುನಾವಣೆ ಮುಂದೂಡಿ ಮುಂದೆ ದಿನಾಂಕ ತಿಳಿಸುವುದಾಗಿ ಆದೇಶ ಹೊರಡಿಸಿದ್ದರು, ಏಳನೇ ವಾರ್ಡ್ನ ಕಾಂಗ್ರೆಸ್ ನ ಸದಸ್ಯ ಸಮೀವುಲ್ಲಾ, ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದರಿಂದ ಸುಪ್ರಿಂಕೋರ್ಟ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ ಎನ್ನಲಾಗಿದೆ.
ಪುರಸಭೆಯ ಅಧ್ಯಕ್ಷ,ಉಪಾಧ್ಯಕ್ಷ ಸ್ಥಾನದ ಚುನಾವಣೆ ನಡೆಸದ ಕಾರಣ ಸದಸ್ಯರು ಅಧಿಕಾರ ಇದ್ದರೂ ಅಧಿಕಾರಿಗಳ ಮರ್ಜಿಗೆ ಕಾಯುವಂತಾಗಿದೆ, ಕಳೆದ ನಾಲ್ಕು ತಿಂಗಳಲ್ಲಿ ಮುಖ್ಯಾಧಿಕಾರಿಗಳ ವರ್ಗಾವಣೆ ಜಟಾಪಟಿಯಿಂದಾಗಿ ಕೆಲಸಗಳು ನೆನೆಗುದಿಗೆ ಬೀಳುವಂತಾಗಿದೆ, ಪುರಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಬಹುಮತ ಇದ್ದು, ಅಧ್ಯಕ್ಷ,ಉಪಾಧ್ಯಕ್ಷ ಗಾದಿಗೆ ಚುನಾವಣೆ ನಡೆಸುವಂತೆ ಶಾಸಕರನ್ನು ಕೇಳಿದರೆ ಶಾಸಕ ಡಾ.ರಂಗನಾಥ್, ಚುನಾವಣೆ ನಡೆಸುವುದು ಅಧಿಕಾರಿಗಳ ಕೆಲಸ ಎಂದು ಹೇಳುತ್ತಾರೆ,
ಇನ್ನಾದರೂ ಶಾಸಕರು, ಅಧಿಕಾರಿಗಳು ಎಚ್ಚೆತ್ತು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ ನಡೆಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
Comments are closed.