ಮೂರು ತಿಂಗಳಲ್ಲಿ ಒಳಮೀಸಲಾತಿ ಜಾರಿಯಾಗುತ್ತೆ

ಕೆಲವರು ಜನರಲ್ಲಿ ಗೊಂದಲ ಮೂಡಿಸುವುದು ತರವಲ್ಲ: ವೆಂಕಟೇಶ್

3

Get real time updates directly on you device, subscribe now.


ತುಮಕೂರು: ಆಗಸ್ಟ್ 01ರ ಸುಪ್ರಿಂ ಕೋರ್ಟ್ ತೀರ್ಪಿನ ಅನ್ವಯ ಒಳಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಸರಕಾರ ಏಕವ್ಯಕ್ತಿ ಆಯೋಗ ನೇಮಕ ಮಾಡಿ ಮೂರು ತಿಂಗಳ ಒಳಗೆ ನಿಖರವಾದ ದಾಖಲೆ ಪಡೆಯಲು ಮುಂದಾಗಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದು ಉದ್ಯಮಿ ಡಿ.ಟಿ.ವೆಂಕಟೇಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಲವಕಾಶ ಕೇಳಿರುವುದನ್ನು ನೆಪವಾಗಿಟ್ಟುಕೊಂಡು ಕೆಲವರು, ಸಮುದಾಯದ ಯುವ ಜನರಲ್ಲಿ ಗೊಂದಲ ಉಂಟು ಮಾಡಿ ಅವರನ್ನು ಪ್ರಚೋದನೆಗೊಳಿಸುವ ಮಾತು ಆಡುತ್ತಿರುವುದು ಒಳ್ಳೆಯ ಬೆಳೆವಣಿಯಲ್ಲ, ಇದು ಅತ್ಯಂತ ಸೂಕ್ಷ ವಿಚಾರವಾಗಿರುವುದರಿಂದ ಜನಾಂಗದ ಯುವಕರು ಪ್ರಚೋದನೆಗೆ ಒಳಗಾಗದೆ, ತಾಳ್ಮೆಯಿಂದ ವರ್ತಿಸುವಂತೆ ಮನವಿ ಮಾಡಿದ್ದಾರೆ.

ಒಳ ಮೀಸಲಾತಿಗಾಗಿ ಮೂವತ್ತು ವರ್ಷಗಳಿಂದ ಹೋರಾಟ ನಡೆಸುತ್ತಿರುವ ಸಮುದಾಯ ನ್ಯಾಯಬದ್ದ ದತ್ತಾಂಶಕ್ಕಾಗಿ ಸರಕಾರ ಮೂರು ತಿಂಗಳ ಕಾಲಾವಕಾಶ ತೆಗೆದುಕೊಂಡಿದೆ, ಈಗ ತಾಳ್ಮೆಗೆಟ್ಟು ವರ್ತಿಸುವುದು ಸರಿಯಲ್ಲ, ಕೂಡಲೇ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಏಕ ಸದಸ್ಯ ಸಮಿತಿ ರಚಿಸಿ ಕಾರ್ಯಭಾರ ವಹಿಸಿಕೊಡುವಂತೆ ನಾವೆಲ್ಲರೂ ಸರಕಾರದ ಮೇಲೆ ಒತ್ತಡ ಹಾಕುತಿದ್ದು, ಸರಕಾರ ಸಹ ಒಂದೆರಡು ದಿನದಲ್ಲಿ ಅಯೋಗ ನೇಮಕ ಪ್ರಕ್ರಿಯೆ ಪೂರ್ಣಗೊಳಿಸುವ ಭರವಸೆ ನೀಡಿದೆ, ಮೂರು ತಿಂಗಳ ಒಳಗೆ ಈ ಕಾರ್ಯ ಪೂರ್ಣಗೊಂಡು ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳಿಗೆ ನ್ಯಾಯ ದೊರಕಿಸುವಂತೆ ವರದಿ ಜಾರಿ ಮಾಡಲಿದ್ದಾರೆ ಎಂಬ ಭರವಸೆ ನಮಗಿದೆ, ಒಂದು ವೇಳೆ ಸರಕಾರ ಕೊಟ್ಟ ಮಾತಿಗೆ ತಪ್ಪಿದರೆ ಸಮುದಾಯದ ಹೋರಾಟವನ್ನು ಸರಕಾರ ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಡಿ.ಟಿ.ವೆಂಕಟೇಶ್ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆಂಚಮಾರಯ್ಯ ಮಾತನಾಡಿ, ಒಳ ಮೀಸಲಾತಿ ಜಾರಿ ಎಲ್ಲಾ ಶೋಷಿತ ಸಮುದಾಯಕ್ಕೆ ಅನುಕೂಲವಾಗಲಿದೆ, ಮೂರು ತಿಂಗಳಲ್ಲಿ ಒಳ ಮೀಸಲಾತಿ ಜಾರಿಗೊಳಿಸುವ ಬದ್ಧತೆಯನ್ನು ಸರಕಾರ ತೋರಿದ್ದು, ಇದರ ಭಾಗವಾಗಿಯೇ ಅಕ್ಟೋಬರ್ 28ರ ನಂತರ ಯಾವುದೇ ನೇಮಕಾತಿ ನೊಟೀಪಿಕೇಷನ್ ಇಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟ ಪಡಿಸಿದ್ದಾರೆ, ಸುಪ್ರೀಂ ಕೋರ್ಟ್ ಆದೇಶಕ್ಕೆ ಸಮುದಾಯದ ಹೋರಾಟ ಕಾರಣವೇ ಹೊರತು ಯಾವುದೇ ಪಕ್ಷದಿಂದ ಆದ ಕೆಲಸ ಅಲ್ಲ, ಹರಿಯಾಣ ಮತ್ತು ತೆಲಂಗಾಣದ ಮಾದರಿಯಲ್ಲಿ ಕಾಲಮಿತಿಗೊಳಪಟ್ಟು ರಾಜ್ಯದಲ್ಲಿ ಆಯೋಗ ರಚಿಸಲಾಗಿದ್ದು ಸಿದ್ದರಾಮಯ್ಯ ಅವರಿಗೆ ಬದ್ಧತೆ ಇದ್ದದ್ದರಿಂದಲೇ ಬಡ್ತಿ ಮೀಸಲಾತಿ ಕಾನೂನು ಜಾರಿಗೆ ತಂದರು, ಇಲ್ಲದ ಗೊಂದಲ ಸೃಷ್ಟಿಸುವುದು ತರವಲ್ಲ ಎಂದರು.

ಎ.ನರಸಿಂಹಮೂರ್ತಿ ಮಾತನಾಡಿ, ಸುಪ್ರೀಂಕೋರ್ಟ್ ಆದೇಶದಲ್ಲಿ ನಿಖರವಾದ ದತ್ತಾಂಶದ ಆಧಾರದ ಮೇಲೆ ಒಳ ಮೀಸಲಾತಿ ಜಾರಿಗೊಳಿಸಬೇಕಾಗಿದೆ, ನಿಖರವಾದ ಮಾಹಿತಿ ಇಲ್ಲದೇ ಒಳ ಮೀಸಲಾತಿ ಜಾರಿಗೊಳಿಸಿದರೆ ನ್ಯಾಯಾಲಯ ವಿಮರ್ಶೆಗೆ ಒಳಪಡುವುದರಿಂದ ನಿಖರವಾದ ದತ್ತಾಂಶ ಇಲ್ಲದೇ ಹೋದರೆ ರಾಜ್ಯ ಸರಕಾರ ನೀಡಿದ ಒಳ ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಲಿದೆ, ಒಂದು ವೇಳೆ ಹೀಗಾದರೆ 30 ವರ್ಷಗಳ ಸುಧೀರ್ಘ ಹೋರಾಟ ವ್ಯರ್ಥ ವಾಗಲಿದೆ, ಹಾಗಾಗಲು ಬಿಡದಂತೆ ಎಚ್ಚರಿಕೆ ಹೆಜ್ಜೆ ಇಡಬೇಕಿದೆ ಎಂದರು.
ದಲಿತ ಮುಖಂಡರಾದ ನರಸಿಂಹಯ್ಯ, ನರಸೀಯಪ್ಪ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಹೆತ್ತೇನಹಳ್ಳಿ ಮಂಜುನಾಥ್, ನಟರಾಜಪ್ಪ, ಕೋಡಿಯಾಲ ಮಹದೇವ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!