ತುಮಕೂರು: ಕನ್ನಡ ನಾಡಿನ ಭವ್ಯ ಪರಂಪರೆ, ಸಾಂಸ್ಕೃತಿಕ ಶ್ರೀಮಂತಿಕೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವೆಂದಿಗೂ ಕನ್ನಡಿಗರಾಗಿಯೇ ಉಳಿಯೋಣ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ ತಿಳಿಸಿದರು.
ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಶುಕ್ರವಾರ ನವೆಂಬರ್ 1ರಂದು ಹಮ್ಮಿಕೊಂಡಿದ್ದ 69ನೇ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕನ್ನಡ ನಾಡು ತನ್ನದೇ ಆದ ಸಾಂಸ್ಕೃತಿಕ, ಸಾಹಿತ್ಯಿಕ, ಪಾರಂಪರಿಕ ಹಿನ್ನೆಲೆ ಪಡೆದ ರಾಜ್ಯವಾಗಿದೆ, ನಮ್ಮ ಕರ್ನಾಟಕವು ವೈಜ್ಞಾನಿಕ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕವಾಗಿ ವೈವಿಧ್ಯತೆ ಪಡೆದ ನಾಡಾಗಿದೆ, ನಾಡು ನುಡಿ ಹೆಸರಿನಲ್ಲಿ ವಿಶಾಲ ಕರ್ನಾಟಕದ ಐಕ್ಯತೆಗೆ ಧಕ್ಕೆಯಾಗದಂತೆ ಕಾಪಾಡುವ ಹೊಣೆಗಾರಿಕೆ ನಮ್ಮದಾಗಬೇಕು ಎಂದು ತಿಳಿಸಿದರು.
1956ರಲ್ಲಿ ಕರ್ನಾಟಕ ಏಕೀಕರಣ
1947ರಲ್ಲಿ ಭಾರತ ಸ್ವಾತಂತ್ರ್ಯಗಳಿಸಿದ ತರುವಾಯ 1956ರಲ್ಲಿ ಕರ್ನಾಟಕ ಏಕೀಕರಣಗೊಂಡು ವಿಶಾಲ ಕರ್ನಾಟಕ ಎಂಬ ಹೆಸರಿನಿಂದ ರೂಪ ತಾಳಿತು, ಅನೇಕ ಸಂಸ್ಥಾನಗಳಲ್ಲಿ ಹರಿದು ಹಂಚಿ ಹೋಗಿದ್ದ ಕರ್ನಾಟಕ ಒಂದು ಪ್ರಾಂತ್ಯವಾಗಿ ರೂಪುಗೊಳ್ಳಲು ಅನೇಕ ಮಹನೀಯರು ಹೋರಾಟ ಮಾಡಿದ್ದಾರೆ, ಭಾರತ ಸ್ವತಂತ್ರ ಚಳವಳಿಯ ಜೊತೆ- ಜೊತೆಯಲ್ಲಿಯೇ ಕರ್ನಾಟಕ ಏಕೀಕರಣ ಚಳವಳಿಯೂ ಕರ್ನಾಟಕದಲ್ಲಿ ಆರಂಭವಾಗಿತ್ತು, ಭವ್ಯ ಭಾರತದ ಪ್ರಥಮ ಪ್ರಧಾನಮಂತ್ರಿಗಳಾದ ಜವಾಹರ ಲಾಲ್ ನೆಹರು ಅವರೂ ಕೂಡ ಕರ್ನಾಟಕದ ಏಕೀಕರಣಕ್ಕೆ ಒಲವು ತೋರಿಸಿದ್ದರು ಎಂಬುದನ್ನು ನಾವು ಮರೆಯಬಾರದು ಎಂದು ಹೇಳಿದರು.
ಸಮಾರಂಭದಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಜಿಲ್ಲಾ ಪಂಚಾಯತ್ ಸಿಇಒ ಜಿ.ಪ್ರಭು, ಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ, ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಜಿಲ್ಲೆಯ ಕಲಾವಿದರು, ಸಾಹಿತಿಗಳು, ಕನ್ನಡಾಭಿಮಾನಿಗಳು ಹಾಜರಿದ್ದರು.
Comments are closed.