ತುರುವೇಕೆರೆ: ತಾಲೂಕಿನ ಆನೆಕೆರೆ ಪಿಡಿಓ ಶಿವರಾಜ್ ಲಂಚಬಾಕತನ ಮೇರೆ ಮೀರಿದೆ ಎಂದು ಆರೋಪಿಸಿ ಕೂಡಲೇ ವರ್ಗಾವಣೆ ಮಾಡುವಂತೆ ಆಗ್ರಹಿಸಿ ಅಧ್ಯಕ್ಷ ಶ್ರೀನಿವಾಸ್ಗೌಡ ಹಾಗೂ ಸಹ ಸದಸ್ಯರು ತಾಪಂ ಇಓ ಜೀಪ್ ಅಡ್ಡಗಟ್ಟಿ ಪ್ರತಿಭಟನೆಗೆ ಮುಂದಾದ ಘಟನೆ ತಾಪಂ ಆವರಣದಲ್ಲಿ ನಡೆಯಿತು.
ಈ ಕುರಿತು ಮಾಹಿತಿ ನೀಡಿದ ಗ್ರಾಪಂ ಅಧ್ಯಕ್ಷ ಶ್ರೀನಿವಾಸ್ಗೌಡ, ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದು ಮಾಸಗಳು ಉರುಳಿವೆ, ಆದರೆ ಪಂಚಾಯತ್ ಪಿಡಿಓ ಕರ್ತವ್ಯಕ್ಕೆ ಹಾಜರಾಗದೆ ಮೂಲ ಸೌಕರ್ಯಗಳ ಕೊರತೆ ನಿವಾರಣೆಗೆ ತೊಡಕಾಗಿದೆ, ನರೇಗಾ ಕಾಮಗಾರಿಗಳ ವಿಚಾರದಲ್ಲಿ ಫಲಾನುಭವಿಯಿಂದ ಲಂಚ ಕೇಳುತ್ತಾರೆ, ನರೇಗಾ ಯೋಜನೆಯ ಆಶಯ ಮಣ್ಣು ಪಾಲಾಗುತ್ತಿದೆ, ಈ ಕೂಡಲೇ ಪಿಡಿಓ ಶಿವರಾಜ್ ವರ್ಗಾವಣೆ ಹಾಗೂ ನರೇಗಾ ಎಡಿ ಹುದ್ದೆಯಿಂದ ಇಳಿಸಿದಿದ್ದರೆ 27 ಪಂಚಾಯಿತಿಗಳ ಸದಸ್ಯರನ್ನು ಸಂಘಟಿಸಿ ಬೃಹತ್ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.
ಬೂವನಹಳ್ಳಿ ವಾರ್ಡ್ ಸದಸ್ಯ ಪುನೀತ್ ಮಾತನಾಡಿ, ಆನೇಕೆರೆ ಪಿಡಿಓ ಆಗಿರುವ ಶಿವರಾಜ್ ಈ ಹಿಂದೆ ಕರ್ತವ್ಯ ಲೋಪದ ಕಾರಣದಿಂದಾಗಿ ಅಮಾನತಾಗಿದ್ದರು, ಇವರನ್ನೆ ಆನೇಕೆರೆ, ಹುಲ್ಲೇಕೆರೆ ಎರಡು ಗ್ರಾಪಂಗಳಿಗೆ ಪಿಡಿಓ ಆಗಿ ನೇಮಿಸಲಾಗಿದೆ, ಮಾತ್ರವಲ್ಲದೆ ಪ್ರಬಾರಿಯಾಗಿ ನರೇಗಾ ಸಹಾಯಕ ನಿರ್ದೇಶಕನ ಹುದ್ದೆ ನೀಡಲಾಗಿದೆ, ಇಓ ಅವರಿಗೆ ಹಫ್ತಾ ವಸೂಲಿ ಮಾಡಿ ಕೊಡುವ ಶಿವರಾಜ್ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆಂದು ದೂರಿದರು.
ಗ್ರಾಪಂ ಅಧ್ಯಕ್ಷರು, ಸದಸ್ಯರು ಹಾಗೂ ನಾಗರಿಕರು ಪಿಡಿಓ ಶಿವರಾಜ್ ವಿರುದ್ಧ ಆರೋಪಗಳ ಸರಮಾಲೆಯನ್ನು ಇಓ ಮುಂದೆ ಇರಿಸಿದರು. ಒಂದು ಹಂತದಲ್ಲಿ ಶಿವರಾಜ್ ಭ್ರಷ್ಟಾಚಾರಕ್ಕೆ ಇಓ ಜಯಕುಮಾರ್ ಪೋಷಣೆ ನೀಡುತ್ತಿದ್ದಾರೆಂದು ಆರೋಪಿಸಿ ತೀವ್ರ ವಾಗ್ದಾಳಿ ನಡೆಸಿದರು. ನಾಗರಿಕರ ಪ್ರಶ್ನೆಗೆ ಉತ್ತರಿಸದೆ ಇಓ ಕಚೇರಿಯಿಂದ ಹೊರ ನಡೆದು ಜೀಪ್ ಹತ್ತಿದರು, ಈ ವೇಳೆ ಜೀಪ್ ಅಡ್ಡಗಟ್ಟಿದ ಜನತೆ ಸ್ಥಳಕ್ಕೆ ಪಿಡಿಓ ಶಿವರಾಜ್ ಕರೆಸುವಂತೆ ತಾಕೀತು ಮಾಡಿದ ಹಿನ್ನಲೆಯಲ್ಲಿ ಕಚೇರಿಯನ್ನು ಮರು ಪ್ರವೇಶಿಸುವಂತಾಯಿತು.
ಅಧ್ಯಕ್ಷರು ಹಾಗೂ ಸದಸ್ಯರ ಅಹವಾಲು ಆಲಿಸಿದ ಇಓ ಆನೇಕೆರೆ ಪಂಚಾಯಿತಿಗೆ ಪಿಡಿಓ ಶಿವರಾಜ್ ಬದಲಿಗೆ ಕಾರ್ಯದರ್ಶಿ ನೇಮಕ ಮಾಡುವ ನಿರ್ಧಾರ ಪ್ರಕಟಿಸಿದರು. ಇಓ ನಿರ್ಧಾರವನ್ನು ತಾತ್ಕಾಲಿಕವಾಗಿ ಸಮ್ಮತಿಸಿದ ಗ್ರಾಪಂ ಅಧ್ಯಕ್ಷರು, ಸದಸ್ಯರು ಹಾಗೂ ನಾಗರಿಕರು ಪ್ರತಿಭಟನೆ ವಾಪಸ್ ಪಡೆದರು.
ಈ ವೇಳೆ ಗ್ರಾಪಂ ಸದಸ್ಯರಾದ ರಂಗಪ್ಪ, ನಂದೀಶ್, ಮೋಹನ್, ರಾಮಕೃಷ್ಣ, ಮಾಜಿ ಅಧ್ಯಕ್ಷ ರವಿಗೌಡ, ಮಾಜಿ ಸದಸ್ಯ ದೇವರಾಜ್, ಶಿವನಂಜಪ್ಪ ಮತ್ತಿತರರಿದ್ದರು.
ಪಿಡಿಓ ಭ್ರಷ್ಟಾಚಾರಕ್ಕೆ ಆಕ್ರೋಶ- ಅಧ್ಯಕ್ಷ, ಸದಸ್ಯರಿಂದ ಇಓಗೆ ತರಾಟೆ
Get real time updates directly on you device, subscribe now.
Comments are closed.