ಕುಣಿಗಲ್: ವಿಶೇಷ ಚೇತನರ ಬಳಕೆಗೆ ನೀಡಲಾದ 4 ಚಕ್ರ ಮೋಟಾರ್ ಬೈಕ್ ನ ದುರ್ಬಳಕೆ ಮಾಡಿಕೊಳ್ಳುತ್ತಿರುವ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಸಂಬಂಧಪಟ್ಟ ಇಲಾಖೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.
ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆವತಿಯಿಂದ ವಿಕಲಚೇತನರಿಗೆ 4 ಚಕ್ರದ ಬೈಕ್ ವಿತರಣೆಗೆ ಇಲಾಖೆ ಕ್ರಮ ಕೈಗೊಂಡಿದ್ದು, ನವೆಂಬರ್ 1ರ ರಾಜ್ಯೋತ್ಸವ ಸಮಾರಂಭದಲ್ಲಿ ತಾಲೂಕಿನ ವಿವಿಧೆಡೆಯಿಂದ ಆಯ್ಕೆಯಾದ ಒಟ್ಟು 20 ಫಲಾನುಭವಿಗಳಿಗೆ ಶಾಸಕ ಡಾ.ರಂಗನಾಥ್ ಬೈಕ್ ವಿತರಿಸಿದ್ದರು, ಅರ್ಜಿ ಪ್ರಕ್ರಿಯೆ ಆನ್ ಲೈನ್ ನಲ್ಲೆ ನಡೆದಿದ್ದು ಈ ಬಗ್ಗೆ ತಾಲೂಕಿನಲ್ಲಿ ಸಂಬಂಧಪಟ್ಟ ಇಲಾಖಾಧಿಕಾರಿಗಳು ಸರಿಯಾಗಿ ಅರಿವು ಮೂಡಿಸದ ಕಾರಣ ಬಹಳಷ್ಟು ಮಂದಿ ಅರ್ಜಿ ಸಲ್ಲಿಸಲಾಗಿಲ್ಲ ಎಂದು ಪುರಸಭೆ ಮಾಜಿ ಉಪಾಧ್ಯಕ್ಷ ಅಬ್ದುಲ್ ಹಮೀದ್ ಆರೋಪದ ನಡುವೆಯೂ ಇಲಾಖೆಯ ಮೂಲಗಳ ಪ್ರಕಾರ ತಾಲೂಕಿನಲ್ಲಿ ಒಟ್ಟಾರೆ 30 ಮಂದಿ ಆನ್ ಲೈನ್ ನಲ್ಲೆ ಅರ್ಜಿ ಸಲ್ಲಿಸಿದ್ದು, ಅರ್ಹ ದಾಖಲೆಗಳನ್ನು ಜಿಪಂ ಸಿಇಒ ನೇತೃತ್ವದ ಸಮಿತಿ ಹಾಗೂ ಶಾಸಕರ ಅನುಮೋದನೆ ಮೇರೆಗೆ ಅಂತಿಮವಾಗಿ 20 ಮಂದಿಗೆ 4 ಚಕ್ರದ ಬೈಕ್ ವಿತರಿಸಲಾಗಿದೆ, ಅಂದಾಜು ಒಂದು ಬೈಕ್ ಗೆ ಸುಮಾರು 1.25 ಲಕ್ಷ ರೂ. ವೆಚ್ಚವಾಗಲಿದೆ ಎನ್ನಲಾಗುತ್ತಿದೆ.
ಒಟ್ಟಾರೆ ಐದು ಲಕ್ಷ ರೂ. ವ್ಯಯ ಮಾಡಿ ವಿಶೇಷ ಚೇತನರಿಗೆ ಬೈಕ್ ನೀಡಿದ್ದರೆ, ಕೆಲವರು ವಿಶೇಷಚೇತನರ ಬೈಕ್ ಗೆ ಅಳವಡಿಸುವ ಪ್ರತ್ಯೇಕ ಎರಡು ಚಕ್ರದ ಸ್ಟಾಂಡ್ ತೆರವುಗೊಳಿಸಿ, ವಾಹನ ಚಾಲನೆ ಮಾಡುತ್ತಿರುವುದು ಸಾಮಾಜಿಕ ಜಾಲತಾಣವಾದ ಫೇಸ್ ಬುಕ್, ವಾಟ್ಸಪ್ ನಲ್ಲಿ ಹರಿದಾಡಿದೆ, ಬಹುತೇಕ ಮಂದಿ ಇಂತಹ ಕೃತ್ಯ ಖಂಡಿಸಿದ್ದು, ವಿಶೇಷ ಚೇತನರಿಗೆ ನೀಡಲಾಗುವ ಸವಲತ್ತು ಅದೆ ವರ್ಗದವರು ಬಳಸಿಕೊಂಡು ಅವರೂ ಸಬಲರಾಗಬೇಕು, ಆದರೆ ವಿಶೇಷಚೇತನರು ಬೈಕ್ ಒಡಿಸಲು ಅನುಕೂಲವಾಗುವಂತೆ ಅಳವಡಿಸುವ ಎರಡು ಚಕ್ರದ ಸ್ಟಾಂಡ್ ತೆರವುಗೊಳಿಸಿ ಸಾಮಾನ್ಯಬೈಕ್ ನಂತೆ ಬಳಕೆ ಮಾಡುವ ಹಿಂದೆ ಕೆಲ ಪಟ್ಟ ಭದ್ರ ಹಿತಾಸಕ್ತಿಗಳ ಕೈವಾಡ ಇದ್ದು ಇಲಾಖೆಯ ಅಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮ ವಹಿಸಿ ಯೋಜನೆಯ ದುರುಪಯೋಗ ಪಡಿಸಿಕೊಂಡವರಿಂದ ವಾಹನ ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ಸರ್ಕಾರ ವಿಶೇಷ ಚೇತನರ ಸಬಲೀಕರಣಕ್ಕೆ ಲಕ್ಷಾಂತರ ರೂ. ವ್ಯಯ ಮಾಡುತ್ತಿದ್ದು ಈ ನಿಟ್ಟಿನಲ್ಲಿ ಅನುದಾನ ಸದ್ಬಳಕೆ ಆಗಬೇಕಿದೆ, ಇಲಾಖೆಯ ಕೆಳ ಹಂತದಲ್ಲಿ ಸಿಬ್ಬಂದಿ ಕೊರತೆಯಿಂದ ಯೋಜನೆ ಸದ್ಬಳಕೆ ಆಗುತ್ತಿದೆಯೆ ಇಲ್ಲವೆ ಎಂದು ನೋಡಲು ಹೊರಗುತ್ತಿಗೆ ಆಧಾರದಲ್ಲಿ ನೇಮಕವಾಗಿರುವ ಅಗತ್ಯ ಸಿಬ್ಬಂದಿ ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ಮಾಡಿ ಯೋಜನೆಯ ಸದ್ಬಳಕೆಗೆ ಶ್ರಮ ವಹಿಸುತ್ತಾರೆಯೆ ಎಂದು ಕಾದು ನೋಡಬೇಕಿದೆ.
Comments are closed.