ತುಮಕೂರು: ದೀರ್ಘ ಕಾಲಿನ ನೋವುಗಳಿಂದ ಬಳಲುತ್ತಿರುವ ಸಾರ್ವಜನಿಕರಿಗೆ ಶಸ್ತ್ರಚಿಕಿತ್ಸೆ ಇಲ್ಲದೆ ಕೇವಲ ಔಷಧೋಪಚಾರಗಳಿಂದ ಚೇತರಿಕೆ ಹೊಂದುವಂತೆ ಮಾಡಬಲ್ಲ ನೋವು ನಿರ್ವಹಣಾ ವಿಭಾಗ (ಪೈನ್ ಕ್ಲಿನಿಕ್)ವನ್ನು ಸಿದ್ಧಗಂಗಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಅರವಳಿಕೆ ಶಾಸ್ತ್ರ ವಿಭಾಗದ ಅಡಿಯಲ್ಲಿ ಆರಂಭಗೊಂಡಿದೆ.
ಪ್ರತಿ ಸೋಮವಾರ ಹಾಗೂ ಬುಧವಾರ ಬೆಳಗ್ಗೆ 11 ರಿಂದ 1 ಗಂಟೆ ವರೆಗೆ ಕಾರ್ಯ ನಿರ್ವಹಿಸುವ ಕ್ಲಿನಿಕ್ಗೆ ಸಿದ್ಧಗಂಗಾ ವೈದ್ಯಕೀಯ ವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಎಸ್.ಪರಮೇಶ್ ಚಾಲನೆ ನೀಡಿ ಮಾತನಾಡಿ ಕ್ರಾನಿಕ್ ಪೈನ್ ಗಳ ಜೊತೆಗೆ ಬೆನ್ನು ನೋವು, ಮಂಡಿನೋವು, ಭುಜ ಹಾಗೂ ಕುತ್ತಿಗೆ ನೋವು, ತಲೆ ನೋವು, ಕ್ಯಾನ್ಸರ್ ಸಂಬಂಧಿತ ನೋವುಗಳಿಂದ ಹೊರಬರಲಾಗದೆ ಸಂಕಟ ಪಡುತ್ತಿರುವವರಿಗೆ ಈ ವಿಭಾಗ ಉಪಶಮನ ನೀಡಲಿದ್ದು ಚಿಕಿತ್ಸಾ ವಿಭಾಗದಲ್ಲಿ ಹೊಸ ಮೈಲುಗಲ್ಲಾಗಲಿದೆ ಎಂದರು.
ವೈದ್ಯಕೀಯ ವಿದ್ಯಾಲಯದ ಕಾರ್ಯಕಾರಿ ನಿರ್ದೇಶಕ ಡಾ.ಸಚ್ಚಿದಾನಂದ್.ಎಸ್. ಮಾತನಾಡಿ, ಪೈನ್ ಕ್ಲಿನಿಕ್ ನ ಅಡಿಯಲ್ಲಿ ಎಲ್ಲಾ ಸ್ಪೆಷಾಲಿಟಿ ಹಾಗೂ ಸೂಪರ್ ಸ್ಪೆಷಾಲಿಟಿ ವಿಭಾಗದ ವೈದ್ಯರೂ ಕೂಡ ಸಹಕಾರ ದೊರೆಯಲಿದೆ, ಔಷಧ, ಇಂಟರ್ವೆನ್ಷನಲ್ ಪ್ರಸೀಜರ್, ಥೆರಪಿ, ಕಾಂಪ್ಲಿಮೆಂಟರಿ ಮೆಡಿಸಿನ್ ಸೇರಿದಂತೆ ವ್ಯಕ್ತಿಯ ಖಾಯಿಲೆಗೆ ಅನುಗುಣವಾಗಿ ವಿವಿಧ ಆಯಾಮಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂದರು.
ವೈದ್ಯಕೀಯ ವಿದ್ಯಾಲಯದ ಪ್ರಚಾರ್ಯರಾದ ಡಾ.ಶಾಲಿನಿ ಮಾತನಾಡಿ, ಮುಂದುವರೆದ ಎಲ್ಲಾ ವೈದ್ಯಕೀಯ ವಿಭಾಗಗಳನ್ನು ಆರಂಭಿಸಿ ಎಲ್ಲಾ ವರ್ಗದ ಜನರಿಗೆ ಚಿಕಿತ್ಸೆ ನೀಡುವ ಉದ್ದೇಶ ಹೊಂದಿರುವ ಸಿದ್ಧಗಂಗಾ ಆಸ್ಪತ್ರೆಗೆ ನೋವು ನಿರ್ವಹಣಾ ವಿಭಾಗ ಶಕ್ತಿ ನೀಡಲಿದ್ದು, ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ವೈದ್ಯಕೀಯ ಅಧೀಕ್ಷಕ ಡಾ.ನಿರಂಜನಮೂರ್ತಿ, ನರ್ಸಿಂಗ್ ವಿಭಾಗದ ಮುಖ್ಯಸ್ಥ ನಾಗಣ್ಣ, ಸಿಇಓ ಡಾ.ಸಂಜೀವ್ ಕುಮಾರ್, ಪೈನ್ ಸ್ಪೆಷಲಿಸ್ಟ್ ಡಾ.ಹಿತೈಷ್, ಅರವಳಿಕೆ ತಜ್ಞರಾದ ಡಾ.ಮಧು, ಡಾ.ಶಶಿಕಿರಣ್, ಡಾ.ಸಾಗರ್, ಡಾ.ಶೃತಿ, ಡಾ.ಸುಮಂತ್ ಮುಂತಾದವರಿದ್ದರು.
Comments are closed.