ಶಿರಾ: ಪುರ್ಲೆಹಳ್ಳಿ ಭೂತಪ್ಪ ದೇವಸ್ಥಾನ ಹತ್ತಿರ ಸಿಎಲ್ 7 ಬಾರ್ ಅಂಡ್ ರೆಸ್ಟೋರೆಂಟ್ ಬೇಡವೇ ಬೇಡ, ದೇವಸ್ಥಾನದ ಕೂಗಳತೆ ದೂರದಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್ ಮುಚ್ಚುವಂತೆ ದೇವಸ್ಥಾನದ ಸಮಿತಿಯ ಸದಸ್ಯರು ಹಾಗೂ ಭಕ್ತಾದಿಳಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಭೂತಪ್ಪ ಸ್ವಾಮಿ ದೇವಸ್ಥಾನದ ಹಿತರಕ್ಷಣ ಸಮಿತಿಯ ಅಧ್ಯಕ್ಷ ಸದಾನಂದ ಗೌಡ ಅವರು ತಾಲೂಕಿನ ಗೌಡಗೆರೆ ಹೋಬಳಿಯ ಪ್ರಸಿದ್ಧ ಪುರಲೆಹಳ್ಳಿ ಭೂತಪ್ಪ ಸ್ವಾಮಿ ದೇವಸ್ಥಾನದ ಹತ್ತಿರ ನಿರ್ಮಾಣವಾಗಿರುವ ಸಿಎಲ್ 7 ಬಾರ್ ಅಂಡ್ ರೆಸ್ಟೋರೆಂಟ್ ಸ್ಥಾಪನೆಯಾಗುತ್ತಿದ್ದು ಭೂತಪ್ಪ ಸ್ವಾಮಿ ದೇವಸ್ಥಾನಕ್ಕೆ ಬರುವ ಲಕ್ಷಾಂತರ ಭಕ್ತರ ಭಾವನೆಗಳಿಗೆ ಧಕ್ಕೆಯಾಗಿದೆ, ನೂರಾರು ಹೆಣ್ಣು ಮಕ್ಕಳ ಭಕ್ತವೃಂದ ಪ್ರತಿ ಶನಿವಾರ, ಭಾನುವಾರ ಹಾಗೂ ಅಮವಾಸೆ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂಜೆ ಸಲ್ಲಿಸುತ್ತಾರೆ, ಆದ್ದರಿಂದ ಸಹಸ್ರಾರು ಭಕ್ತರ ರಕ್ಷಣೆಗಾಗಿ ತಕ್ಷಣ ಈ ಬಾರ್ ಲೈಸೆನ್ಸ್ ರದ್ದು ಪಡಿಸುವಂತೆ ಒತ್ತಾಯಿಸಿದರು.
ಗ್ರಾಮಸ್ಥರಾದ ಪಾರ್ವತಮ್ಮ ಮಾತನಾಡಿ ಪುರ್ಲೆಹಳ್ಳಿ ಭೂತಪ್ಪ ದೇವಸ್ಥಾನ ಹಲವಾರು ವರ್ಷಗಳಿಂದ ತನ್ನದೇ ಆದ ಪಾತಿವ್ರತೆ ಉಳಿಸಿಕೊಂಡು ಬಂದಿದೆ, ಇಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಪ್ರಾರಂಭವಾದರೆ ಇಲ್ಲಿ ಕುಡುಕರ ಹಾವಳಿ ಹೆಚ್ಚಾಗಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ತೊಂದರೆಯಾಗುತ್ತದೆ, ಆದ್ದರಿಂದ ಯಾವುದೇ ಕಾರಣಕ್ಕೂ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಬಾರದು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಈಶ್ವರಪ್ಪ, ಶಿವಣ್ಣ , ಮನೋಹರ್ ನಾಯಕ ತಾವರೆಕೆರೆ, ಕೆ.ರಂಗನಹಳ್ಳಿ ಬಲರಾಮಣ್ಣ , ಉಗ್ರಪ್ಪ, ಮೊಸರುಕುಂಟೆ ನಾಗಣ್ಣ, ಪುರ್ಲೆಹಳ್ಳಿ ಮರ್ಡಪ್ಪ, ಬೋರಕ್ಕ ರಂಗನಹಳ್ಳಿ ಸೇರಿದಂತೆ ಭಕ್ತರು ಹಾಜರಿದ್ದರು.
Comments are closed.