ತುಮಕೂರು: ಜಿಲ್ಲಾಡಳಿತ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ನವೆಂಬರ್ 7 ರಿಂದ 10ರ ವರೆಗೆ ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ ನಡೆಯಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಡಾ.ಬಾಲ ಗುರುಮೂರ್ತಿ ತಿಳಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ 10 ವರ್ಷಗಳ ನಂತರ ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಕ್ರೀಡಾಕೂಟ ಆಯೋಜಿಸಲಾಗುತ್ತಿದ್ದು, ಕ್ರೀಡಾಕೂಟದಲ್ಲಿ ಬಾಲಕ ಮತ್ತು ಬಾಲಕಿಯರ ವಿಭಾಗದಿಂದ 19 ವರ್ಷದೊಳಗಿನ 3000 ವಿದ್ಯಾರ್ಥಿಗಳು ರಾಜ್ಯದ ವಿವಿಧ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳಿಂದ ಆಗಮಿಸಲಿದ್ದಾರೆ, ಕ್ರೀಡಾಕೂಟದ ನಿರ್ಣಾಯಕರಾಗಿ 100 ಅಥ್ಲೆಟಿಕ್ಸ್ ಪರಿಣಿತ ತಾಂತ್ರಿಕ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ನವೆಂಬರ್ 7ರಂದು ಕ್ರೀಡಾಕೂಟದ ಉದ್ಘಾಟನೆ ನಡೆಯಲಿದ್ದು, ಉದ್ಘಾಟನೆ ನಂತರ 1,500 ಮೀಟರ್ ಓಟದ ಸ್ಪರ್ಧೆ ಏರ್ಪಡಿಸಲಾಗಿದೆ, ನಂತರ ನವೆಂಬರ್ 9ರ ಬೆಳಗ್ಗೆ 6 ಗಂಟೆಗೆ ನಗರದ ಹೊರ ವಲಯದ ಊರ್ಡಿಗೆರೆ ರಸ್ತೆ ಸಿದ್ದಗಂಗಾ ಕ್ರಾಸ್ ನಿಂದ ಬಾಲಕಿಯರಿಗೆ 4 ಕಿ.ಮೀ. ಮತ್ತು ಬಾಲಕರಿಗೆ 6 ಕಿ.ಮೀ ಕಂಟ್ರಿ (ಗುಡ್ಡಗಾಡು ಓಟ) ಸ್ಪರ್ಧೆ ನಡೆಯಲಿದೆ.
ಕ್ರೀಡಾಕೂಟದಲ್ಲಿ ಭಾಗವಹಿಸುವ ತಂಡಗಳಿಗೆ ಉಚಿತ ವಸತಿ ಮತ್ತು ಊಟದ ವ್ಯವಸ್ಥೆ ಕಲ್ಪಿಸಲಾಗುವುದು, ಜಿಲ್ಲಾ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಬಾಲಕಿಯರಿಗೆ ಹಾಗೂ ಚೈತನ್ಯ ಪದವಿಪೂರ್ವ ಕಾಲೇಜು, ಮಹೇಶ್ ಪದವಿ ಪೂರ್ವ ಕಾಲೇಜು, ಸರ್ವೋದಯ ಪದವಿಪೂರ್ವ ಕಾಲೇಜು, ಸಿದ್ದಗಂಗಾ ಪದವಿಪೂರ್ವ ಕಾಲೇಜು, ಸಿದ್ದಗಂಗಾ ಮಹಿಳಾ ಪದವಿ ಪೂರ್ವ ಕಾಲೇಜು, ಎಂಪ್ರೆಸ್ ಬಾಲಕಿಯರ ಪದವಿ ಪೂರ್ವ ಕಾಲೇಜುಗಳಲ್ಲಿ ಬಾಲಕರಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ, ಕ್ರೀಡಾಕೂಟದ ಸಂದರ್ಭದಲ್ಲಿ ಮುನ್ನಚ್ಚರಿಕಾ ಕ್ರಮವಾಗಿ ಆರೋಗ್ಯ ಸಿಬ್ಬಂದಿ ನೇಮಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಕ್ರೀಡಾ ಶಾಖೆ ಸಂಚಾಲಕ ಟಿ.ಆರ್. ಬಸವರಾಜು, ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಪ್ರಭಾಕರ್ ರೆಡ್ಡಿ, ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಮಹಾಲಿಂಗೇಶ್ ಮತ್ತಿತರರು ಹಾಜರಿದ್ದರು.
Comments are closed.