ತುಮಕೂರು: ಸಂಶೋಧನೆಯಲ್ಲಿ ಗುಣಮಟ್ಟದ ಕೊರತೆಯಿದೆ, ಸಂಶೋಧನಾ ಗುಣಮಟ್ಟ ಹೆಚ್ಚಿಸುವುದು ವಿಶ್ವ ವಿದ್ಯಾಲಯಗಳ ಆದ್ಯತೆಯಾಗಬೇಕು ಎಂದು ಶಿವಮೊಗ್ಗ ಕುವೆಂಪು ವಿವಿಯ ಅನ್ವಯಿಕ ಭೂ ವಿಜ್ಞಾನ ವಿಭಾಗದ ಹಿರಿಯ ಪ್ರಾಧ್ಯಾಪಕ ಸೈಯದ್ ಅಶ್ಫಾಕ್ ಅಹಮದ್ ತಿಳಿಸಿದರು.
ತುಮಕೂರು ವಿವಿಯ ಯೋಜನೆ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಂಡಳಿಗಳು ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶದ ವತಿಯಿಂದ ಆಯೋಜಿಸಿದ್ದ ಶೈಕ್ಷಣಿಕ ವ್ಯಕ್ತಿ ವಿವರಗಳನ್ನು ಬಳಸುವ ಮೂಲಕ ಸಂಶೋಧನ ಗೋಚರತೆ ಹೆಚ್ಚಿಸುವಿಕೆ ಕುರಿತ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಉನ್ನತ ಸಂಶೋಧನಾ ನಿಯತ ಕಾಲಿಕೆಗಳಲ್ಲಿ ಪ್ರಬಂಧ ಪ್ರಕಟಿಸುವುದು ಆಯಾ ಸಂಶೋಧನಾರ್ಥಿಯ ವಿವೇಚನೆಗೆ ಬಿಟ್ಟದ್ದು ಎಂದು ಯುಜಿಸಿಯು ಹೊಸ ಮಾರ್ಗಸೂಚಿ ಹೊರಡಿಸಿದೆ, ಈ ಹಿಂದೆ ಕಡ್ಡಾಯವಾಗಿ ಎರಡು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸುವ ಮಾರ್ಗಸೂಚಿಯಿತ್ತು, ಹೊಸ ನಿಯಮಗಳು ಸಂಶೋಧನೆಯ ಮಟ್ಟವನ್ನು ಎಲ್ಲಿಗೆ ಕೊಂಡೊಯ್ಯುತ್ತಿವೆ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ ಎಂದರು.
ಧನ ಸಹಾಯ ಆಯೋಗಗಳು ಹಾಗೂ ಉದ್ಯೋಗ ಸಂಸ್ಥೆಗಳು ಬಯಸುವುದು ಗುಣಮಟ್ಟದ ಸಂಶೋಧನಾ ಪ್ರಬಂಧಗಳನ್ನು ಉನ್ನತ ಸಂಶೋಧನಾ ನಿಯತಕಾಲಿಕೆಗಳಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸುವುದರಿಂದ ಮಾತ್ರ ಪಿಎಚ್ ಡಿಗೆ ಬೆಲೆ ಬರುವುದು, ಯುಜಿಸಿಯಿಂದ ಮಾನ್ಯತೆ ಪಡೆದ ನಿಯತಕಾಲಿಕೆಗಳಲ್ಲಷ್ಟೇ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಬೇಕು, ಹಣ ಪಡೆಯುವ ನಕಲಿ ನಿಯತಕಾಲಿಕೆಗಳನ್ನು ನಂಬಬಾರದು ಎಂದು ತಿಳಿಸಿದರು.
ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಪಟ್ಟಿಯಲ್ಲಿ ಉತ್ತಮ ಸ್ಥಾನ ಪಡೆಯಲು ಹಾಗೂ ನ್ಯಾಕ್ ಮಾನ್ಯತೆಯಲ್ಲಿ ಎ+ ಶ್ರೇಣಿಗಳಿಸಲು ಗುಣಮಟ್ಟದ ಸಂಶೋಧನೆ ಕೈಗೊಳ್ಳಬೇಕು, ಜಾಗತಿಕ ಮಟ್ಟದ ಸಂಶೋಧನೆಗಳಾಗಬೇಕು, ಸಂಶೋಧನೆಗಳೇ ವಿಶ್ವ ವಿದ್ಯಾಲಯಗಳ ಭವಿಷ್ಯ, ಇದನ್ನು ಸಾಧಿಸಲು ಸ್ವಯಂ ಶಿಸ್ತು ಬಹಳ ಮುಖ್ಯ ಎಂದು ಹೇಳಿದರು.
ಕುಲಸಚಿವೆ ನಾಹಿದಾ ಜಮ್ ಜಮ್, ಯೋಜನೆ, ಮೇಲ್ವಿಚಾರಣೆ ಮತ್ತು ಮೌಲ್ಯ ಮಾಪನ ಮಂಡಳಿಗಳ ನಿರ್ದೇಶಕ ಪ್ರೊ.ಬಿ.ಟಿ.ಸಂಪತ್ ಕುಮಾರ್, ಆಂತರಿಕ ಗುಣಮಟ್ಟ ಭರವಸೆ ಕೋಶದ ನಿರ್ದೇಶಕ ಪ್ರೊ.ರಮೇಶ್.ಬಿ, ಸಹ ಪ್ರಾಧ್ಯಾಪಕ ಡಾ.ರೂಪೇಶ್ ಕುಮಾರ್.ಎ. ಹಾಜರಿದ್ದರು.
Comments are closed.