ಜಿಲ್ಲೆಯಲ್ಲಿ ದಾಳಿಂಬೆ ಬೆಳೆಗಾರರಿಂದ ಪಕ್ಷಿಗಳಿಗೆ ಆಪತ್ತು- ನಿಸರ್ಗ ಸಂಸ್ಥೆ ಖಂಡನೆ

470

Get real time updates directly on you device, subscribe now.

ತುಮಕೂರು: ಜಿಲ್ಲೆಯಲ್ಲಿ ದಾಳಿಂಬೆ,ಪಪ್ಪಾಯ,ಟೊಮ್ಯಾಟೊದಂತಹ ಹಣ್ಣನ್ನುತಿನ್ನಲು ಬರುವ ಬಾವಲಿ, ಪಕ್ಷಿಗಳಿಂದ ರಕ್ಷಿಸಲು ಬಲೆ ಹಾಕಿ ಸಾವಿರಾರು ಪಕ್ಷಿಗಳ ಸಾವಿಗೆ ಕಾರಣವಾದ ರೈತರ ಕ್ರಮವನ್ನು ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆಯ ಅಧ್ಯಕ್ಷ ಬಿ.ವಿ.ಗುಂಡಪ್ಪ ಖಂಡಿಸಿದ್ದಾರೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಶಿರಾ, ಪಾವಗಡ, ಮಧುಗಿರಿ, ಕೊರಟಗೆರೆ, ಗುಬ್ಬಿ ತಾಲ್ಲೂಕುಗಳಲ್ಲಿ ಆರ್ಥಿಕ ಬೆಳೆಯಾದ ದಾಳಿಂಬೆ ಬೆಳೆಯನ್ನು ವ್ಯಾಪಕವಾಗಿ ಬೆಳೆಯುತ್ತಾರೆ. ಬೆಳೆದಂತಹ ಹಣ್ಣುಗಳನ್ನು ತಿನ್ನಲು ಬರುವ ಪಕ್ಷಿಗಳನ್ನು ಹಿಮ್ಮೆಟ್ಟಿಸಲು ಇಡಿ ದಾಳಿಂಬೆ ತೋಟದ ಸುತ್ತ ಮತ್ತು ಮೇಲ್ಬಾಗದಲ್ಲಿ ಬಲೆ ಹರಡಿ ಪಕ್ಷಿಗಳು ಬಲೆಯಲ್ಲಿ ಸಿಕ್ಕಿ ಬೀಳುವಂತೆ ಮಾಡಿ ಸಾವಿರಾರು ಪಕ್ಷಿಗಳ ಸಾವಿಗೆ ಕಾರಣರಾಗಿದ್ದಾರೆ.
ಪಕ್ಷಿಗಳನ್ನು ಹಿಮ್ಮೆಟಿಸಲು ಯಾಂತ್ರಿಕ ವಿಧಾನಗಳಾದ ಬೆದರು ಗೊಂಬೆಗಳನ್ನು ಅಳವಡಿಸುವುದು, ಡಬ್ಬಗಳಿಂದ ಶಬ್ದ ಮಾಡುವುದು, ಇತ್ತೀಚಿನ ದಿನಗಳಲ್ಲಿ ಮನುಷ್ಯ ಕೂಗುವ ರೀತಿಯಲ್ಲಿ ಸಂಗೀತದ ಹಾರ್ನ್ಗಳನ್ನು ಅಳವಡಿಸಿ ಪಕ್ಷಿಗಳನ್ನು ಹಿಮ್ಮೆಟಿಸುತ್ತಿದ್ದಾರೆ, ಆದರೆ ಹೆಚ್ಚಿನ ರೈತರು ಇಡಿ ತೋಟಕ್ಕೆ ಬಲೆಯನ್ನು ಹರಡಿ ಅಪರೂಪದ ಪಕ್ಷಿಗಳು, ನಿಶಾಚರಿ ಬಾವಲಿಗಳ ಸಾವಿಗೆ ಕಾರಣರಾಗಿದ್ದಾರೆ.
ಜಿಲ್ಲೆಯಾದ್ಯಂತ ಕಾಡಿನ ಪ್ರಮಾಣ ಕಡಿಮೆಯಾಗಿದೆ, ರೈತರ ಹೊಲಗಳ ಜಮೀನಿನಲ್ಲಿದ್ದ ಮಾವು, ನೇರಳೆ, ಹಲಸು, ಪೇರಲದಂತಹ ಹಣ್ಣಿನ ಗಿಡಮರಗಳ ಪ್ರಮಾಣ ಕಡಿಮೆಯಾಗಿ ಪಕ್ಷಿಗಳಿಗೆ ಆಹಾರದ ಅಭಾವ ಹೆಚ್ಚಾಗಿದೆ, ಆಹಾರಕ್ಕೊಸ್ಕರ ಪಕ್ಷಿಗಳು ರೈತರ ಜಮೀನಿಗೆ ಬರುವುದು ಸಹಜ ಆದರೆ ನಿರ್ದಾಕ್ಷಿಣ್ಯವಾಗಿ ಬಲೆ ಹಾಕಿ, ಬಲೆಯಲ್ಲಿ ನರಳಿ, ನರಳಿ ಸಾವನ್ನಪ್ಪಿರುವ ಪಕ್ಷಿಗಳ ಕಳೆ ಬರಗಳನ್ನು ನೋಡಿದರೆ ಮನುಷ್ಯ ಅದೆಷ್ಟು ಕ್ರೂರಿ ಎನ್ನುವುದು ಸ್ಪಷ್ಟವಾಗುತ್ತದೆ.
ಗುಬ್ಬಿ ತಾಲ್ಲೂಕಿನ ಅಂಕಸಂದ್ರ ಸಮೀಪದ ವಿಎಲ್ ಪಾರ್ಮ್ನ ದಾಳಿಂಬೆ ತೋಟದಲ್ಲಿ ಹಾಕಿರುವ ಬಲೆಯಲ್ಲಿ 65 ಗಿಳಿಗಳು 3 ಕೋಗಿಲೆ, 2 ಬುಲ್ ಬುಲ್, 1 ಮಿಂಚುಳ್ಳಿ, 1 ಮರಕುಟಿಗ, 1 ಬೆಳ್ಳಕ್ಕಿ, 1 ಗೂಬೆ ಸಿಕ್ಕಿ ಬಿದ್ದು ನರಳಿ ಸಾವನ್ನಪ್ಪಿದ್ದು ಅವುಗಳ ಅಸ್ಥಿಪಂಜರ ತೋಟದಸುತ್ತ ಒಡಾಡಿದರೆ ಕಂಡು ಬರುತ್ತದೆ. ಇದೇ ರೀತಿಯ ಪರಿಸ್ಥಿತಿ ದಾಳಿಂಬೆ ಬೆಳೆಯುವ ಎಲ್ಲಾ ಹಳ್ಳಿಗಳಲ್ಲೂ ಕಂಡು ಬರುತ್ತದೆ.
ಆದ್ದರಿಂದ ಜಿಲ್ಲೆಯಲ್ಲಿ ಬಲೆ ಹಾಕುವುದನ್ನು ಸಂಪೂರ್ಣ ನಿಷೇಧಿಸಲು ಜಿಲ್ಲಾಧಿಕಾರಿ ಕಠಿಣ ಕ್ರಮ ತೆಗೆದು ಕೊಳ್ಳಲು ಕೃಷಿ ಸಹಾಯಕರಿಗೆ ಆದೇಶಿಸಬೇಕು ಹಾಗೂ ಅರಣ್ಯ ಇಲಾಖೆ ಅಂತಹವರ ವಿರುದ್ಧ ವನ್ಯಜೀವಿ ಕಾಯ್ದೆ 1972ರ ಅಡಿಯಲ್ಲಿ ಕಾನೂನು ಕ್ರಮ ತೆಗೆದುಕೊಂಡು ವಿನಾಶದ ಅಂಚಿನಲ್ಲಿರುವ ಪಕ್ಷಿಗಳನ್ನು ಸಂರಕ್ಷಿಸಬೇಕೆಂದು ನಿಸರ್ಗ ಸಂಸ್ಥೆಯ ಅಧ್ಯಕ್ಷ ಬಿ.ವಿ.ಗುಂಡಪ್ಪ ಒತ್ತಾಯಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!