ಒನಕೆ ಓಬವ್ವ ಹೆಣ್ಣು ಮಕ್ಕಳಿಗೆ ಸ್ಪೂರ್ತಿಯಾಗಲಿ

11

Get real time updates directly on you device, subscribe now.


ಗುಬ್ಬಿ: ವೀರ ವನಿತೆ ಒನಕೆ ಓಬವ್ವ ಅವರ ಸಮಯ ಪ್ರಜ್ಞೆ, ಧೈರ್ಯ ಮತ್ತು ಸಾಹಸ ನಾಡಿನ ಹೆಣ್ಣು ಮಕ್ಕಳಿಗೆ ಸ್ಪೂರ್ತಿಯಾಗುತ್ತದೆ ಎಂದು ತಹಶೀಲ್ದಾರ್ ಆರತಿ.ಬಿ. ತಿಳಿಸಿದರು.
ತಾಲೂಕು ಕಚೇರಿಯ ಕಂದಾಯ ಭವನದ ಆವರಣದಲ್ಲಿ ಕಾರ್ಯಕ್ರಮದಲ್ಲಿ ಒನಕೆ ಓಬವ್ವ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, 18ನೇ ಶತಮಾನದ ಚಿತ್ರದುರ್ಗದ ಕೋಟೆಯ ಪಾಳೆಗಾರನಾಗಿದ್ದ ಮದಕರಿ ನಾಯಕನ ಕೋಟೆಯ ಕಾವಲುಗಾರ ಕಹಳೆ ಮದ್ದಹನುಮಪ್ಪನ ಹೆಂಡತಿ, ಕನ್ನಡ ನಾಡಿನ ವೀರ ವನಿತೆಯರಾದ ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕ್ಕರ ಸಾಲಿನಲ್ಲಿ ಇರುವ ವೀರ ವನಿತೆ ಒನಕೆ ಓಬವ್ವ ತನ್ನ ಜನರು ಮತ್ತು ಸಂಸ್ಕೃತಿ ರಕ್ಷಿಸಲು ಅವರು ತೋರಿದ ಧೈರ್ಯ ಎಂದಿಗೂ ಯಾರೂ ಮರೆಯಲು ಸಾಧ್ಯವಿಲ್ಲ, ಅವರು ನಾರಿಶಕ್ತಿಯ ಪ್ರತೀಕವಾಗಿ ನಮಗೆ ಸ್ಫೂರ್ತಿಯಾಗಿದ್ದಾರೆ ಎಂದರು.

ಕಸಾಪ ಅಧ್ಯಕ್ಷ ಯತೀಶ್ ಕುಮಾರ್ ಮಾತನಾಡಿ, 18ನೇ ಶತಮಾನದ ಪಾಳೆಗಾರ ವೀರ ಮದಕರಿ ನಾಯಕನ ಆಡಳಿತದಲ್ಲಿ ಚಿತ್ರದುರ್ಗ ಕೋಟೆಯ ಕಾವಲುಗಾರನಾಗಿದ್ದ ಕಹಳೆ ಮದ್ದಹನುಮಪ್ಪನ ಪತ್ನಿ ಒನಕೆ ಓಬವ್ವನ ಸಾಹಸ ಇತಿಹಾಸದಲ್ಲಿ ಸದಾ ಹಸಿರು, ದಾಳಿ ಮಾಡಲು ಕಳ್ಳತನದಲ್ಲಿ ನುಗ್ಗಿದ ಹೈದರಲಿ ಸೈನಿಕರನ್ನು ತನ್ನ ಒನಕೆಯಲ್ಲೇ ಕೊಂದು ಕೊನೆಗೆ ವೀರ ಮರಣವನ್ನಪ್ಪಿದ ಧೀರ ಮಹಿಳೆ ವೀರ ವನಿತೆ ಒನಕೆ ಓಬವ್ವ, ಇಂದು ಇಂತಹ ವೀರ ಮಹಿಳೆಯರ ಆದರ್ಶವನ್ನು ಪ್ರತಿಯೊಬ್ಬ ಮಹಿಳೆಯರು ಅಳವಡಿಸಿಕೊಳ್ಳುವ ಜೊತೆಗೆ ತಮಗೆ ಎದುರಾಗುವ ಸಮಸ್ಯೆ, ಕಷ್ಟ ಎದುರಿಸಿ ಮೆಟ್ಟಿ ನಿಂತಾಗ ಎದುರಾಳಿಗಳನ್ನು ಮಣಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ವೀರ ವನಿತೆ ಒನಕೆ ಓಬವ್ವ ಜಯಂತಿ ಹಿನ್ನೆಲೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ವೈದ್ಯಾ ಡಾ.ಬಿಂದು ಮಾಧವ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ವೀಣಾ, ಒಬಿಸಿ ಇಲಾಖೆ ಸಹಾಯಕ ನಿರ್ದೇಶಕಿ ಪವಿತ್ರಾ, ಎಇ ನಂದಾ, ಛಲವಾದಿ ಮಹಾಸಭಾದ ಅಧ್ಯಕ್ಷ ಟಿ.ಇ.ಈರಣ್ಣ, ಗೌರವಾಧ್ಯಕ್ಷ ಬಿ.ಲೋಕೇಶ್, ಜಿ.ಮಧು, ಕಿಟ್ಟದಗುಪ್ಪೆ ನಾಗರಾಜ್, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಛಲವಾದಿ ಮಹಾ ಸಭಾದ ಪದಾಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!