ವಿಶ್ವಕ್ಕೆ ವಿಶ್ವಕರ್ಮ ಸಮಾಜದ ಕೋಡುಗೆ ಅಪಾರ

ಬಾಲರಾಮ ಮೂರ್ತಿ ಶಿಲ್ಪಿ ಡಾ.ಅರುಣ್ ಯೋಗಿರಾಜ್ ಗೆ ಗೌರವ

6

Get real time updates directly on you device, subscribe now.


ತುಮಕೂರು: ವಿಶ್ವಕರ್ಮ ಸಮುದಾಯದವರ ಕಲಾ ಪರಂಪರೆಗೆ ಭವ್ಯವಾದ ಇತಿಹಾಸವಿದೆ, ಇವರ ವಿಗ್ರಹ ಕಲಾ ಪರಂಪರೆಯಿಂದ ನಮ್ಮ ಪ್ರಾಚೀನ ಇತಿಹಾಸ, ನಾಗರಿಕತೆ ಗುರುತಿಸುವಂತಾಗಿದೆ, ಈ ಮೂಲಕ ಭಾರತದ ನಾಗರಿಕತೆ ಕಾಲದ ಬದಲಾವಣೆಯನ್ನು ವಿಶ್ವಕರ್ಮ ಸಮುದಾಯದ ಕಲಾಕೃತಿಗಳು ದಾಖಲಿಸುತ್ತಾ ಇತಿಹಾಸಕ್ಕೆ ದೊಡ್ಡ ಕೊಡುಗೆ ನೀಡಿವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಚಿನ್ನ- ಬೆಳ್ಳಿ ಕೆಲಸಗಾರರ ಸಂಘ, ಗೋಲ್ಡ್ ಅಂಡ್ ಸಿಲ್ವರ್ ವರ್ಕರ್ಸ್ ಅಸೋಸಿಯೇಷನ್ ಮಂಗಳವಾರ ನಗರದ ಡಾ.ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಏರ್ಪಡಿಸಿದ್ದ ಸಂಘಕ್ಕೆ 25 ವರ್ಷದ ತುಂಬಿದ ಸಂದರ್ಭದ ರಜತ ಮಹೋತ್ಸವದ ಸಮ್ಮಿಲನ ಹಾಗೂ ಅಯೋಧ್ಯೆ ಶ್ರೀಬಾಲರಾಮನ ಮೂರ್ತಿಯ ಪ್ರಧಾನ ಶಿಲ್ಪಿ ಡಾ.ಅರುಣ್ ಯೋಗಿರಾಜ್ ಅವರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ದೇಶದ ವಿಶಿಷ್ಟ ಕಲೆ, ಪರಂಪರೆ, ಸಂಸ್ಕೃತಿಗೆ ವಿಶ್ವಕರ್ಮ ಸಮುದಾಯ ನೀಡಿದ ಕೊಡುಗೆ ಅಪಾರ ಎಂದು ಶ್ಲಾಸಿದರು.
ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ವಿಶ್ವಕರ್ಮ ಸಮಾಜದವರು ಸಂಘಟಿತರಾಗಬೇಕು, ಅಸೂಯೆಯಿಂದ ದೂರ ಉಳಿಯಬಾರದು, ರಾಜಕೀಯವಾಗಿ ಅಧಿಕಾರ ಪಡೆಯುವ ಹೋರಾಟ ರೂಢಿಸಿಕೊಳ್ಳಬೇಕು, ಕುಶಲಕರ್ಮಿಗಳಿಗೆ ಸರ್ಕಾರದಿಂದ ತರಬೇತಿ ಸಂಸ್ಥೆ ಆರಂಭಿಸಲು ತಾವು ಪ್ರಯತ್ನಿಸಿ ಮುಂದಿನ ಬಜೆಟ್ ನಲ್ಲಿ ಘೋಷಣೆ ಮಾಡಿಸುವ ಪ್ರಯತ್ನ ಮಾಡುವುದಾಗಿ ಹೇಳಿದರು.

ವಿಶ್ವಕರ್ಮ ಸಮಾಜದವರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು, ಶಿಕ್ಷಣದಿಂದ ಹಣ, ಸಾಮಾಜಿಕ ಗೌರವ, ಸ್ಥಾನಮಾನ ದೊರೆಯುತ್ತದೆ, ಶಿಕ್ಷಣದ ಜೊತೆ ತಮ್ಮ ಕಸುಬುಗಳನ್ನೂ ಮುಂದುವರೆಸಲು ಅವಕಾಶವಿದೆ, ಅಯೋಧ್ಯೆ ಬಾಲರಾಮಮೂರ್ತಿಯ ಶಿಲ್ಪಿ ಅರುಣ್ ಯೋಗಿರಾಜ್ ಅವರು ನಮ್ಮ ಕಲಾ ಸಂಸ್ಕೃತಿಯನ್ನು ಎತ್ತರಕ್ಕೆ ಕೊಂಡೊಯ್ದು ಕೀರ್ತಿ ತಂದಿದ್ದಾರೆ ಎಂದರು.
ಸಮಾರಂಭದ ಸಾನಿಧ್ಯ ವಹಿಸಿದ್ದ ಅರಕಲಗೂಡು ಅರೇಮಾದನಹಳ್ಳಿ ಸುಜ್ಞಾನಪ್ರಭು ಪೀಠದ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಮಾತನಾಡಿ, ಶಿಲಾಯುಗದಿಂದ ಇಂದಿನ ವರೆಗೆ, ಅಂದಿನ ಜಕಣಾಚಾರಿಯಿಂದ ಇಂದಿನ ಅರುಣ್ ಯೋಗಿರಾಜ್ ವರೆಗೆ ವಿಶ್ವಕರ್ಮ ಸಮಾಜದವರು ಈ ನೆಲದ ಸೇವೆ ಮಾಡುತ್ತಿದ್ದಾರೆ, ಎಲ್ಲಾ ಧರ್ಮಗಳ ಧಾರ್ಮಿಕ ಮಂದಿರ, ಮೂರ್ತಿಗಳ ನಿರ್ಮಾಣದಲ್ಲಿ ವಿಶ್ವಕರ್ಮ ಸಮಾಜ ನೆರವಾಗಿದೆ ಎಂಬುದು ಹೆಮ್ಮೆಯ ವಿಚಾರ ಎಂದರು.

ಇಂದು ಪಂಚಶಿಲ್ಪ ಕಲಾ ವೃತ್ತಿ ಅಸ್ತಿತ್ವ ಕಳೆದುಕೊಳ್ಳುತ್ತಿದೆ, ಹಿಂದಿನ ರಾಜ ಮಹಾರಾಜರು ಶಿಲ್ಪಿಗಳಿಗೆ ಪ್ರೋತ್ಸಾಹ ನೀಡುತ್ತಿದ್ದ ರೀತಿ ಈಗ ಸರ್ಕಾರಗಳು ಪ್ರೋತ್ಸಾಹ ನೀಡಬೇಕು, ಪಂಚಶಿಲ್ಪ ಸಂಬಂಧಿ ತರಬೇತಿ ಸಂಸ್ಥೆ ಸ್ಥಾಪನೆ ಮಾಡಬೇಕು, ಇದಕ್ಕಾಗಿ ಸರ್ಕಾರ 25 ಎಕರೆ ಜಾಗ ಹಾಗೂ ಅಗತ್ಯ ಸೌಲಭ್ಯ ಒದಗಿಸಬೇಕು, ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ 150 ಕೋಟಿ ರೂ. ಅನುದಾನ ನೀಡಬೇಕು ಎಂದು ಸ್ವಾಮೀಜಿ ಹೇಳಿದರು.

ಅಯೋಧ್ಯೆ ಬಾಲರಾಮ ಮೂರ್ತಿಯ ಪ್ರಧಾನ ಶಿಲ್ಪಿ ಡಾ.ಅರುಣ್ಣ ಯೋಗಿರಾಜ್ ಅವರಿಗೆ ಅಮರಶಿಲ್ಪಿ ಜಕಣಾಚಾರಿ ಬಿರುದು ನೀಡಿ ಸನ್ಮಾನಿಸಲಾಯಿತು, ನಂತರ ಮಾತನಾಡಿದ ಶಿಲ್ಪಿ ಡಾ.ಅರುಣ್, ಬಾಲರಾಮ ಮೂರ್ತಿ ನಿರ್ಮಾಣದಲ್ಲಿ ತಮಗೆ ಸಿಕ್ಕ ಅವಕಾಶವನ್ನು ಶ್ರದ್ಧೆಯಿಂದ ಮಾಡಿದೆ, ನಮ್ಮ ತಲೆಮಾರಿನಿಂದ ಮುಂದುವರೆದ 150 ವರ್ಷಗಳ ಮುಂದುವರೆದ ಜ್ಞಾನದಿಂದ ಈ ಕಾರ್ಯ ಸಾಧ್ಯವಾಯಿತು, ತಕ್ಕ ಪ್ರತಿಫಲವೂ ದೊರೆಯಿತು, ದೇವರ ಮೂರ್ತಿ ಕೆತ್ತನೆ ಮಾಡಿದ ಮಾತ್ರಕ್ಕೆ ನಾನು ದೇವಶಿಲ್ಪಿಯಾಗಲಾರೆ, ಸಾಮಾನ್ಯ ಶಿಲ್ಪಿಯಾಗಿ ನನ್ನ ಕೆಲಸ ಮುಂದುವರೆಸುತ್ತೇನೆ ಎಂದರು.
ಈಗಿನ ಯುವಜನ ಶಿಲ್ಪ ಕಲೆ ಬಗ್ಗೆ ಆಸಕ್ತಿ ತೋರುತ್ತಿಲ್ಲ, ನಮ್ಮ ಪರಂಪರೆ ಉಳಿಸಿಬೆಳೆಸಲು ಕಲೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು, ಶಿಲ್ಪ ಕಲೆ ದೊಡ್ಡ ಗೌರವ ತಂದುಕೊಡುತ್ತದೆ, ಸತ್ತಮೇಲೂ ಬದುಕುವ ಅವಕಾಶ ಕಲ್ಪಿಸುತ್ತದೆ, ಈ ಕಲಾ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೂ ತೆಗೆದುಕೊಂಡು ಹೋಗಬೇಕು ಎಂಬ ಆಶಯ ತಮಗಿದೆ ಎಂದು ಹೇಳಿದರು.

ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ರಾಮಕೃಷ್ಣ ವಿವೇಕಾನಂದ ಆಶ್ರಮದ ಡಾ. ಸ್ವಾಮಿ ವೀರೇಶಾನಂದ ಸರಸ್ವತಿ, ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಜಿಲ್ಲಾ ವಿಶ್ವಕರ್ಮ ಸೇವಾ ಸಮಿತಿ ಅಧ್ಯಕ್ಷ ಹೆಚ್.ಪಿ.ನಾಗರಾಜಾ ಚಾರ್, ಪತ್ರಕರ್ತ ಎಸ್.ನಾಗಣ್ಣ, ಶಿಲ್ಪಿ ಅರುಣ್ ಅವರ ತಾಯಿ ಸರಸ್ವತಿ, ವಿಶ್ವಕರ್ಮ ಸೇವಾ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಡಾ.ಎಂ.ಬಿ.ಉಮೇಶ್ ಕುಮಾರ್, ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಕೆ.ಬಿ.ಗಜೇಂದ್ರ ಕುಮಾರ್, ಮುಖಂಡರಾದ ಎಸ್.ಪಿ.ಚಿದಾನಂದ್, ಟಿ.ಎನ್.ಮಧುಕರ್, ಧನಿಯಾಕುಮಾರ್, ಮಲ್ಲಸಂದ್ರ ಶಿವಣ್ಣ, ಟಿ.ಎಂ.ಮಹೇಶ್, ಮಲ್ಲಿಕಾರ್ಜುನಯ್ಯ, ಲೋಕೇಶ್, ಪತ್ರಕರ್ತ ಹರೀಶ್ ಆಚಾರ್ಯ, ಜಗದಾಂಬ ನಂಜಪ್ಪ, ವೆಂಕಟೇಶಾಚಾರ್, ಚಂದ್ರಶೇಖರಾ ಚಾರ್, ಕಾಂತರಾಜು, ವೆಂಕಟರಮಣಾ ಚಾರ್ ಸೇರಿದಂತೆ ವಿವಿಧ ತಾಲ್ಲೂಕುಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ವಿವಿಧ ಸಂಘ ಸಂಸ್ಥೆಗಳ ಮುಖಂಡರು ಶಿಲ್ಪಿ ಅರುಣ್ ಯೋಗಿರಾಜ್ ಅವರನ್ನು ಸನ್ಮಾನಿಸಿ ಗೌರವಿಸಿದರು.

Get real time updates directly on you device, subscribe now.

Comments are closed.

error: Content is protected !!