ತುಮಕೂರು: ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಡಿ ನಡೆಯುತ್ತಿರುವ ವಿದ್ಯಾರ್ಥಿ ನಿಲಯಗಳ ವ್ಯವಸ್ಥೆ ತೀರಾ ಹದಗೆಟ್ಟ ಪರಿಸ್ಥಿತಿಯಲ್ಲಿದ್ದು, ಯಾರೂ ಹೇಳೋರು, ಕೇಳೋರಿಲ್ಲದಂತಾಗಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಮಂಗಳವಾರ ನಡೆದ ಮುಖ್ಯಮಂತ್ರಿಗಳ ಭೇಟಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಇತ್ತೀಚೆಗಷ್ಟೇ ಕೊರಟಗೆರೆ ತಾಲ್ಲೂಕು ಬಜ್ಜನಹಳ್ಳಿ ಏಕಲವ್ಯ ವಸತಿ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬ ಸಾವಿಗೀಡಾಗಿರುವುದು ಅಧಿಕಾರಿಗಳ ವೈಫಲ್ಯ ಎದ್ದು ಕಾಣುತ್ತಿದೆ, ಕಚೇರಿಯಲ್ಲಿ ಕುಳಿತು ಪತ್ರಗಳಿಗೆ ಸಹಿ ಹಾಕಲಷ್ಟೇ ತಮ್ಮ ಕರ್ತವ್ಯ ಸೀಮಿತಗೊಳಿಸದೆ ಶಾಲಾ- ಕಾಲೇಜು, ಆಸ್ಪತ್ರೆ, ವಿದ್ಯಾರ್ಥಿ ನಿಲಯಗಳಿಗೆ ತಿಂಗಳಿಗೊಮ್ಮೆಯಾದರೂ ಭೇಟಿ ನೀಡಿ ಪರಿಶೀಲಿಸಬೇಕು, ಅವ್ಯವಸ್ಥೆ ಕಂಡು ಬಂದರೆ ಕೂಡಲೇ ಸರಿಪಡಿಸಲು ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಮಾತಿನ ಚಾಟಿ ಬೀಸಿದರು.
ವಿದ್ಯಾರ್ಥಿ ನಿಲಯಗಳಲ್ಲಿರುವ ಶೌಚಾಲಯಗಳಿಗೆ ಬಾಗಿಲುಗಳೇ ಇಲ್ಲ, ವಿದ್ಯಾರ್ಥಿನಿಯರು ವ್ಯಾಸಂಗ ಮಾಡುವ ಸ್ಥಳದಲ್ಲಿ ಇಂತಹ ಅವ್ಯವಸ್ಥೆ ನಾನು ಸಹಿಸುವುದಿಲ್ಲ, ಕೂಡಲೇ ವಸತಿ ನಿಲಯಗಳಿಗೆ ಅಗತ್ಯ ಮೂಲ ಸೌಕರ್ಯ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು, ಅಸಡ್ಡೆ ತೋರಿದ ಅಧಿಕಾರಿಗಳು ಅಮಾನತ್ತಿನ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ರಾಜಣ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಉಪ ವಿಭಾಗಾಧಿಕಾರಿಗಳಾದ ಗೋಟೂರು ಶಿವಪ್ಪ, ಸಪ್ತಶ್ರೀ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
Comments are closed.