ಕುಣಿಗಲ್: ಇಲಾಖೆಯಿಂದ ಹಂಚಿಕೆಯಾಗಿದ್ದ ಜಮೀನು ಅಳತೆ ಮಾಡಲು ಹೋಗಿದ್ದ ಪರವಾನಗಿ ಪಡೆದ ಭೂ ಮಾಪಕರ ಮೇಲೆ ಎಫ್ ಐ ಆರ್ ದಾಖಲು ಮಾಡಿರುವುದನ್ನು ಖಂಡಿಸಿ ಪರವಾನಗಿ ಪಡೆದ ಭೂ ಮಾಪಕರು ಪ್ರತಿಭಟನೆ ನಡೆಸಿ ಸಿಪಿಐ ಹಾಗೂ ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು.
ತಾಲೂಕಿನ ಕಸಬಾ ಹೋಬಳಿಯ ಮಲ್ಲಾಘಟ್ಟ ಗ್ರಾಮದ ಖಾಸಗಿ ವ್ಯಕ್ತಿಯ ಜಮೀನು ಅಳತೆ ಮಾಡಲು ಆನ್ ಲೈನ್ ನಲ್ಲಿ ಪರವಾನಗಿ ಪಡೆದ ಭೂ ಮಾಪಕ ಗಜೇಂದ್ರ ಇವರಿಗೆ ಹಂಚಿಕೆಯಾಗಿದ್ದು ನಿಯಮಾನುಸಾರ ಅಕ್ಕಪಕ್ಕದವರಿಗೆ ನೋಟಿಸ್ ನೀಡಿ ಅಳತೆ ಕಾರ್ಯ ನೆರವೇರಿಸುವಾಗ ಜಮೀನಿನ ಅಕ್ಕಪಕ್ಕದವರು ಗಲಾಟೆ ಮಾಡಿಕೊಂಡರು, ನಂತರ ಮಮತಾ ಎಂಬಾಕೆ ಗಲಾಟೆ ವಿಷಯವಾಗಿ ಪೊಲೀಸರಿಗೆ ನ.6 ರಂದು ದೂರು ನೀಡಿದ್ದು ದೂರಿನಲ್ಲಿ ಗಜೇಂದ್ರ ಹಾಗೂ ಅವರ ಜೊತೆಯಲ್ಲಿದ್ದ ಇನ್ನೊಬ್ಬ ಭೂ ಮಾಪಕ ಕುಮಾರ್ ಅವರನ್ನು ಸೇರಿಸಿದ್ದರು, ಈ ಹಿನ್ನೆಲೆಯಲ್ಲಿ ಪೊಲೀಸರು ಇಬ್ಬರೂ ಭೂ ಮಾಪಕರ ಮೇಲೆ ಪ್ರಕರಣ ದಾಖಲಿಸಿದ್ದರು, ಜಮೀನಿನವರು ಗಲಾಟೆ ಮಾಡಿಕೊಂಡಿದ್ದ ಪರವಾನಗಿ ಪಡೆದ ಭೂ ಮಾಪಕರ ಮೇಲೆ ಎಫ್ ಐ ಆರ್ ದಾಖಲಿಸಿದ್ದನ್ನು ಖಂಡಿಸಿದ ಪರವಾನಗಿ ಪಡೆದ 40ಕ್ಕೂ ಹೆಚ್ಚು ಭೂ ಮಾಪಕರು ಪೊಲೀಸರ ಕ್ರಮ ಖಂಡಿಸಿ ಬುಧವಾರ ಪ್ರತಿಭಟನೆ ನಡೆಸಿದರು.
ಪೊಲೀಸ್ ಠಾಣೆಗೆ ತೆರಳಿ ಎಫ್ ಐ ಆರ್ ದಾಖಲಿಸುವಾಗ ಸಂಬಂಧಿಸಿದ ಭೂ ಮಾಪಕರೊಂದಿಗೆ ಚರ್ಚಿಸಿಲ್ಲ, ಅಲ್ಲದೆ ಇಲಾಖೆಯ ಹಿರಿಯಾಧಿಕಾರಿಗಳ ಗಮನಕ್ಕೆ ತಾರದೆ ಏಕಾಏಕಿ ಎಫ್ ಐ ಆರ್ ದಾಖಲಿಸಿದ್ದು ಖಂಡನೀಯ, ಕೂಡಲೆ ಭೂ ಮಾಪಕರ ಹೆಸರು ಕೈ ಬಿಡಬೇಕು, ಮುಂದಿನ ದಿನಗಳಲ್ಲಿ ಇಂತಹ ಕೃತ್ಯ ಮರುಕಳಿಸದ ಹಾಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಸಿಪಿಐ ನವೀನ್ ಗೌಡ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು, ತಹಶೀಲ್ದಾರ್ ಕಚೇರಿ ಮುಂದೆ ಜಮಾವಣೆಗೊಂಡ ಪರವಾನಗಿ ಭೂ ಮಾಪಕರು, ಪೊಲೀಸರು ಪ್ರಕರಣದಲ್ಲಿ ಭೂ ಮಾಪಕರ ಹೆಸರು ಕೈ ಬಿಡಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದು ಇದರಿಂದ ಭೂ ಮಾಪಕರು ತಾಲೂಕಿನಲ್ಲಿ ಕೆಲಸ ಮಾಡಲು ಆಗದ ಸ್ಥಿತಿ ನಿರ್ಮಾಣವಾಗಿದೆ, ಪೊಲೀಸರು ದಾಖಲಿಸುವ ಎಫ್ ಐ ಆರ್ ನಲ್ಲಿ ಭೂ ಮಾಪಕರ ಹೆಸರು ಕೈ ಬಿಟ್ಟು ಮುಂದಿನ ದಿನಗಳಲ್ಲಿ ಇಂತಹ ಕ್ರಮ ಮರುಕಳಿಸದ ರೀತಿಯಲ್ಲಿ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬೇಕು, ಅಲ್ಲಿಯವರೆಗೂ ಪರವಾನಗಿ ಭೂಮಾಪಕರು ಇಲಾಖೆ ಕೆಲಸಗಳಾದ ಮೋಜಿಣಿ, ಆಕಾರ್ ಬಂದ್, ಗಣಕೀಕೃತ ಕಾರ್ಯ, ಪೋಡಿಮುಕ್ತ, ಹಿಸ್ಸಾ ಅಪ್ಲೋಡ್, ಸ್ವಾಮಿತ್ವ ಸೇರಿದಂತೆ ಎಲ್ಲಾ ಕೆಲಸ ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ ಎಂದು ಮನವಿ ಪತ್ರವನ್ನು ಎಡಿಎಲ್ ಆರ್ ತೋಂಟಾರಾದ್ಯ ರಿಗೆ ಸಲ್ಲಿಸಿದರು. ಪರವಾನಗಿ ಭೂ ಮಾಪಕರಾದ ಜಯರಾಜ್, ಗಂಗಾಧರ, ಶ್ರೀನಿವಾಸ್, ಸಿದ್ದಗಂಗಯ್ಯ ಇತರರು ಇದ್ದರು.
Comments are closed.