ಗುಬ್ಬಿ: ಶ್ರೀರಾಮನ ದೇವಾಲಯ ಕಟ್ಟುವುದಕ್ಕೆ ನೂರಾರು ವಿಜ್ಞಾ ಗಳು ಬಂದು ರೈತರ ಭೂಮಿ, ಮಠ ಮಾನ್ಯಗಳು, ದೇವಾಲಯಗಳ ಭೂಮಿಯನ್ನ ವಕ್ಫ್ ಕಮಿಟಿ ಕಬಳಿಸುತ್ತಿರುವುದು ದುರಂತ ಎಂದು ಬೆಳ್ಳಾವಿ ಮಠದ ಕಾರದ ವೀರಬಸವ ಮಹಾ ಸ್ವಾಮೀಜಿ ಕಿಡಿ ಕಾರಿದರು.
ತಾಲೂಕಿನ ತಿಪ್ಪೂರು ಗ್ರಾಮದಲ್ಲಿ ಶ್ರೀಕೋಡಿ ಕೆಂಪಮ್ಮ ದೇವಿಯವರ ನೂತನ ದೇವಾಲಯ ಪ್ರವೇಶ, ಮೂಲ ವಿಗ್ರಹ ಪ್ರತಿಷ್ಠಾಪನೆ ನೂತನ ವಿಮಾನ ಗೋಪುರ ಕಳಶ ರೋಹಣ ಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಿಂದೂ ದೇಶದಲ್ಲಿ ಹಿಂದುಗಳಿಗೆ ಉಳಿಗಾಲವಿಲ್ಲದಂತಹ ಸ್ಥಿತಿ ನಿರ್ಮಾಣವಾಗಿರುವುದು ನೋಡಿದಾಗ ಮುಂದಿನ ದಿನದಲ್ಲಿ ಈ ದೇಶದ ಕಥೆ ಏನು ಎಂಬುದರ ಬಗ್ಗೆ ತಾವೆಲ್ಲರೂ ಕೂಡ ಯೋಚಿಸಬೇಕಾಗಿದೆ, ಈಗಾಗಲೇ ಎಲ್ಲಾ ಶ್ರೀಗಳು ಸಹ ಇದರ ವಿರುದ್ಧ ಹೋರಾಟಕ್ಕೆ ನಿಂತಿದ್ದು, ಮಠಮಾನ್ಯಗಳು, ದೇವಾಲಯಗಳು ನೂರಾರು ವರ್ಷಗಳಿಂದ ಭೂಮಿ ಉಳುಮೆ ಮಾಡುತ್ತಿರುವ ರೈತರ ಭೂಮಿ ಕಬಳಿಸಲು ಮುಂದಾದರೆ ರಕ್ತ ಕೊಟ್ಟರು ನಮ್ಮ ಭೂಮಿ ಬಿಡುವುದಿಲ್ಲ ಎಂಬುದರ ಬಗ್ಗೆ ಈಗಾಗಲೇ ತಿಳಿಸಿದ್ದೇವೆ, ನಾವೆಲ್ಲರೂ ಒಟ್ಟಾಗಿರಬೇಕು, ಇಲ್ಲದೆ ಹೋದರೆ ಈ ದೇಶ ನಮ್ಮದು ಎಂಬುದನ್ನ ನೀವೆಲ್ಲರೂ ಮರೆಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗೊಲ್ಲಹಳ್ಳಿಯ ವಿಭವ ವಿದ್ಯಾಶಂಕರ ದೇಶಿ ಕೇಂದ್ರ ಮಹಾ ಸ್ವಾಮಿಜಿ ಮಾತನಾಡಿ, ಪ್ರತಿಯೊಂದು ಗ್ರಾಮದಲ್ಲಿ ದೇವಾಲಯಗಳು ನಿರ್ಮಾಣವಾದಾಗ ಶಾಂತಿ ಸಹಬಾಳ್ವೆ, ನಮ್ಮ ಸಂಸ್ಕೃತಿ ಸಂಸ್ಕಾರ ಬೆಳೆಯಬೇಕು, ದೇವಾಲಯ ನಿರ್ಮಾಣವಾದಾಗ ಇರುವಂತಹ ಹುಮ್ಮಸ್ಸು ನಂತರ ತಮಗೆ ಇರುವುದಿಲ್ಲ, ಇದು ಖಂಡಿತ ಆಗಬಾರದು, ದೇವಾಲಯ ನಿರ್ಮಾಣವಾದ ನಂತರವೂ ಪ್ರತಿನಿತ್ಯ ದೇವರಿಗೆ ತಾವು ಅರ್ಪಣೆ ಯಾಗಬೇಕು, ಆಗ ಮಾತ್ರ ನೆಮ್ಮದಿ ಸಾಧ್ಯ ಎಂದು ತಿಳಿಸಿದರು.
ಗೋಡೆಕೆರೆ ಮಠದ ಮೃತ್ಯುಂಜಯ ದೇಶೀ ಕೇಂದ್ರ ಮಹಾ ಸ್ವಾಮೀಜಿ ಮಾತನಾಡಿ, ದೇವಾಲಯಗಳಿಗೆ ನಾವು ತೆರಳುವ ಸಂದರ್ಭದಲ್ಲಿ ಸ್ವಾರ್ಥ ಮನೋಭಾವನೆ ಬಿಟ್ಟು ನಿಸ್ವಾರ್ಥದಿಂದ ಕೇಳಿದಾಗ ಖಂಡಿತವಾಗಿಯೂ ಭಗವಂತ ಎಲ್ಲವನ್ನು ನೀಡುತ್ತಾನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಮ್ಮಡಿಹಳ್ಳಿ ಮಠದ ಡಾ.ಅಭಿನವ ಮಲ್ಲಿಕಾರ್ಜುನ ದೇಶಿ ಕೇಂದ್ರ ಮಹಾ ಸ್ವಾಮೀಜಿ, ಶಿಡ್ಲಹಳ್ಳಿ ಮಠದ ಇಮ್ಮಡಿ ಕರಿಬಸವ ದೇಶಕೇಂದ್ರ ಮಹಾ ಸ್ವಾಮೀಜಿ, ಬೆಟ್ಟದಹಳ್ಳಿಯ ಚಂದ್ರಶೇಖರ ಮಹಾ ಸ್ವಾಮೀಜಿ, ಕರಡಿ ಗವಿಮಠದ ಶಿವಶಂಕರ ಶಿವಯೋಗಿ ಮಹಾ ಸ್ವಾಮೀಜಿ, ಶ್ರೀಕೋಡಿ ಕೆಂಪಮ್ಮ ದೇವಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪಟೇಲ್ ಟಿ.ಎಂ.ರಾಜಶೇಖರಯ್ಯ, ಪಣಗಾರ್ ಭಕ್ತವತ್ಸಲಾ, ಶಂಕರಪ್ಪ, ಟಿ.ಪಿ.ಶಶಿಧರ್, ಲೀಲಾವತಿ, ಸಿದ್ದಲಿಂಗ ಮೂರ್ತಿ, ಕರಿಯಣ್ಣ ಅರಿವೇಸಂದ್ರ, ವೀರೇಶ್ ತಿಪ್ಪೂರು ಪಾಳ್ಯ, ವಕೀಲ ಉಮಾ ಕಾಂತ್, ರಘು ಕೋಡಿಯಾಲ, ರಂಗಸ್ವಾಮಿ ಕೊಡಿಯಾಲ, ಚಿಕ್ಕೇಗೌಡ, ಅರ್ಚಕರಾದ ಕೆಂಪಯ್ಯ, ಸಿದ್ದಯ್ಯ, ಶಿಲ್ಪಿ ರಾಘವೇಂದ್ರ ಸೇರಿದಂತೆ ಗ್ರಾಮಸ್ಥರು, ಅಕ್ಕಪಕ್ಕದ ಗ್ರಾಮಸ್ಥರು ಭಕ್ತಾದಿಗಳು ಆಗಮಿಸಿದ್ದರು.
Comments are closed.