ತುಮಕೂರು: ಜಿಲ್ಲೆಯ ಶಿರಾ ತಾಲ್ಲೂಕು ಪಟ್ಟನಾಯಕನಹಳ್ಳಿಯಲ್ಲಿ 2025ರ ಜನವರಿ 13 ರಿಂದ 26ರ ವರೆಗೆ ನಡೆಯಲಿರುವ ಶ್ರೀಗುರುಗುಂಡ ಬ್ರಹ್ಮೇಶ್ವರ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನವನ್ನು ವೈಶಿಷ್ಟ್ಯವಾಗಿ ಏರ್ಪಡಿಸಲು ಜಿಲ್ಲಾ ಪಂಚಾಯತ್ ಮುಖ್ಯ ಸಿಇಒ ಜಿ.ಪ್ರಭು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಕಚೇರಿ ಮಿನಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಸಿ ಮಾತನಾಡಿ, ಜಾತ್ರಾ ಮಹೋತ್ಸವ ಅಂಗವಾಗಿ 2025ರ ಜನವರಿ 19 ರಿಂದ 25ರ ವರೆಗೆ ವಿಶೇಷ ಕೃಷಿ ಮತ್ತು ಕೈಗಾರಿಕಾ ಪ್ರದರ್ಶನ ಏರ್ಪಡಿಸಬೇಕು, ಪಟ್ಟನಾಯಕನ ಹಳ್ಳಿ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವುದರಿಂದ ವಸ್ತು ಪ್ರದರ್ಶನ ಮಾಹಿತಿ ಪೂರ್ಣವಾಗಿರಬೇಕು ಎಂದು ತಿಳಿಸಿದರು.
ವಸ್ತು ಪ್ರದರ್ಶನದಲ್ಲಿ ತೆರೆಯುವ ಮಳಿಗೆಗಳು ಕೃಷಿ ಮತ್ತು ಕೈಗಾರಿಕೆಗಳಿಗೆ ಉತ್ತೇಜನ ನೀಡುವಂತಿರಬೇಕಲ್ಲದೆ ಸರ್ಕಾರದಿಂದ ರೈತರಿಗೆ ದೊರೆಯುವ ವಿವಿಧ ಕೃಷಿ ಪರಿಕರ, ಸವಲತ್ತುಗಳ ಮಾಹಿತಿ ಒಳಗೊಂಡಿರಬೇಕು, ಜಿಲ್ಲಾ ಕೈಗಾರಿಕಾ ಕೇಂದ್ರ, ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಿಕ್ಷಣ, ಸಮಾಜ ಕಲ್ಯಾಣ, ಅರಣ್ಯ, ಆರೋಗ್ಯ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳು, ತಾಲ್ಲೂಕು ಪಂಚಾಯತಿ ಅನುಷ್ಠಾನಗೊಳಿಸುವ ನರೇಗಾ, ಎನ್ ಆರ್ ಎಲ್ ಎಂ, ಸ್ವಚ್ಛ ಭಾರತ್ ಮಿಷನ್ ಹಾಗೂ ಜಲ್ ಜೀವನ್ ಮಿಷನ್ ಯೋಜನೆಗೆ ಸಂಬಂಧಿಸಿದ ಪ್ರಾತ್ಯಕ್ಷಿಕೆ ಸಹಿತ ಯೋಜನೆಗಳ ಸಂಪೂರ್ಣ ಮಾಹಿತಿ ಜನ ಸಾಮಾನ್ಯರಿಗೆ ತಿಳಿಯುವಂತಿರಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಶಿರಾ ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಹರೀಶ್, ಶ್ರೀಗುರುಗುಂಡ ಬ್ರಹ್ಮೇಶ್ವರಸ್ವಾಮಿ ಮಠದ ಪದಾಧಿಕಾರಿಗಳು, ವಿವಿಧ ಇಲಾಖಾಧಿಕಾರಿಗಳು ಹಾಜರಿದ್ದರು.
Comments are closed.