ಕುಣಿಗಲ್: ತಾಲೂಕಿನ ಬೇಗೂರು ಕೆರೆಗೆ ಹೇಮಾವತಿ ನೀರು ಹರಿಸುವ ಕ್ರಮದಿಂದಾಗಿ ಸಿಟಿಪಾಳ್ಯ, ಗೊಟ್ಟಿಕೆರೆ, ಕಲ್ಲನಾಯ್ಕ ಹಳ್ಳಿ, ಗೊಟ್ಟಿಕೆರೆ ಹಂತ ಗ್ರಾಮದ ರೈತರ ನೂರಾರು ಎಕೆರೆ ಬೆಳೆ ನಾಶವಾಗುತ್ತಿದ್ದು ಬೆಳೆ ಪರಿಹಾರ ನೀಡುವಂತೆ ಒತ್ತಾಯಿಸಿ ರೈತರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ತಾಲೂಕಿನ ಕಸಬಾ ಗ್ರಾಮದ ಬೇಗೂರು ಕೆರೆಗೆ ಹೇಮಾವತಿ ನಾಲೆಯಿಂದ ತೊರೆಗೆ ನೀರು ಹರಿಸಿ ಅಲ್ಲಿಂದ ಬೇಗೂರು ಕೆರೆ ತುಂಬಿಸುತ್ತಿದ್ದು, ಕೆರೆಗೆ ಹೊಂದಿಕೊಂಡಂತೆ ಇರುವ ಸಿಟಿಪಾಳ್ಯ, ಗೊಟ್ಟಿಕೆರೆ ಹಂತ, ಗೊಟ್ಟಿಕೆರೆ, ಕಲ್ಲನಾಯ್ಕನ ಹಳ್ಳಿ ಗ್ರಾಮಗಳ ವಿವಿಧ ರೈತರ ಜಮೀನಿನಲ್ಲಿ ಕೆರೆಗೆ ಹರಿಸಲಾದ ನೀರು ತುಂಬಿ ರೈತರ ಜಮೀನಿನಲ್ಲಿ ನಿಂತಿದೆ, ಇದರಿಂದ ಕೈಗೆ ಬಂದ ಬೆಳೆ ನೀರಿನಲ್ಲೆ ಕೊಳೆಯುವಂತಾಗಿದೆ ಎಂದು ಅಚ್ಚುಕಟ್ಟು ಪ್ರದೇಶದ ರೈತರ ಪರವಾಗಿ ಹೊನ್ನಪ್ಪ ಮಾತನಾಡಿ ಸಮಸ್ಯೆ ಬಿಚ್ಚಿಟ್ಟರು. ನಾಲೆಯಲ್ಲಿ ಹರಿಸುವ ನೀರು ನಿಲ್ಲಿಸಿ ರೈತರ ಬೆಳೆ ಕಟಾವು ಮಾಡಿಕೊಳ್ಳಲು ಸಹಕರಿಸುವಂತೆ ನಾಲಾ ವಲಯದ ಎಇಇ, ಶಾಸಕರಿಗೆ ಮನವಿ ಮಾಡಿದರೂ ಯಾರೊಬ್ಬರೂ ಸ್ಪಂದಿಸದ ಕಾರಣ ನಾಲ್ಕು ಗ್ರಾಮಗಳ ರೈತರ ಸುಮಾರು 45ಕ್ಕೂ ಹೆಚ್ಚು ಸರ್ವೇ ನಂಬರ್ ಗೆ ಸೇರಿದ ನುರಾರು ಎಕೆರೆ ರಾಗಿ ಬೆಳೆ ಕಟಾವಿಗೆ ಬಂದು ನಾಶವಾಗಿದೆ, ಸರ್ಕಾರ ರಾಗಿಬೆಳೆಗೆ ಕ್ವಿಂಟಾಲ್ ಗೆ 4200 ರೂ. ನೀಡುತ್ತಿದ್ದು ಒಂದು ಎಕರೆಗೆ 15 ಕ್ವಿಂಟಾಲ್ ರಾಗಿ ಬೆಳೆ ಸುಮಾರು 65 ಸಾವಿರ, ಹುಲ್ಲು 35 ಸಾವಿರ ಒಟ್ಟಾರೆ ಒಂದು ಲಕ್ಷ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ರೈತರ ಪ್ರತಿಭಟನೆಗೆ ಸ್ಥಳೀಯ ಕೆ ಆರ್ ಎಸ್ ಪಕ್ಷದ ಕಾರ್ಯಕರ್ತರು ಬೆಂಬಲಿಸಿ ರೈತರ ವಿಷಯದಲ್ಲಿ ನಿರ್ಲಕ್ಷ್ಯ ತೋರಿದ ಶಾಸಕರ, ನಾಲಾ ವಲಯದ ಅಧಿಕಾರಿಗಳ ಕ್ರಮ ಖಂಡಿಸಿದು, ತಹಶೀಲ್ದಾರ್ ಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ರೈತರಾದ ಮುರುಳಿ, ರಮೇಶ, ಉಮೇಶ, ರೇಣುಕಯ್ಯ, ರಂಗಪ್ಪ, ನಾಗರಾಜ, ಗಂಗಣ್ಣ ಇತರರು ಇದ್ದರು.
Comments are closed.