ಕೊರೊನಾ ವ್ಯಾಕ್ಸಿನ್ ಪಡೆದ ಸಂಸದ ಜಿಎಸ್ಬಿ

115

Get real time updates directly on you device, subscribe now.

ತುಮಕೂರು: ನಗರದ ಜಿಲ್ಲಾಸ್ಪತ್ರೆಯಲ್ಲಿ ಸಂಸದ ಜಿ.ಎಸ್.ಬಸವರಾಜು ಅವರು 2ನೇ ಬಾರಿಗೆ ಕೊರೊನಾ ಲಸಿಕೆ ಪಡೆದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗೇಂದ್ರಪ್ಪ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸುರೇಶ್ಬಾಬು ಅವರ ಸಮ್ಮುಖದಲ್ಲಿ ಕೊರೊನಾ ಲಸಿಕೆ ಪಡೆದ ನಂತರ ಮಾತನಾಡಿದ ಜಿ.ಎಸ್.ಬಸವರಾಜು, ಜನರಲ್ಲಿ ಕೊರೊನಾ ಮಹಾಮಾರಿಯ ಬಗ್ಗೆ ಅರಿವು ಮೂಡಿಸುತ್ತಿದ್ದರೂ ಸಹ ಕೆಲವು ಜನ ಗುಂಪು ಸೇರುತ್ತಿರುವುದರಿಂದ ಈ ಮಹಾಮಾರಿ ಹರಡುತ್ತಿದೆ. ಪ್ರತಿಯೊಬ್ಬರೂ ಮಾಸ್ಕನ್ನು ಕಡ್ಡಾಯವಾಗಿ ಧರಿಸಬೇಕು. ಆಗಿಂದಾಗ್ಗೆ ಕೈಗಳಿಗೆ ಸ್ಯಾನಿಟೈಸರ್ ಹಾಕಿಕೊಂಡು ಸ್ವಚ್ಚಗೊಳಿಸಿಕೊಳ್ಳಬೇಕು. ಮನೆಯೊಳಗೂ ಸಹ ಬಹಳ ಹುಷಾರಾಗಿ ಇರಬೇಕು ಎಂದರು.
ಕೊರೊನಾ ಸೋಂಕು ಗಾಳಿಯಿಂದಲೂ ಹರಡುತ್ತಿದೆ ಎಂಬುದನ್ನು ವೈದ್ಯರು ಹೇಳುತ್ತಿದ್ದಾರೆ. ಹಾಗಾಗಿ ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದರು.
ಹೋಟೆಲ್, ಚಿತ್ರಮಂದಿರ, ಕಲ್ಯಾಣ ಮಂಟಪಗಳಲ್ಲಿ ಜನಸಂದಣಿ ಸೇರುತ್ತಿದೆ. ಜನ ಹೆಚ್ಚು ಸೇರಿದಷ್ಟು ಸೋಂಕು ವೇಗವಾಗಿ ಹರಡಲು ಕಾರಣವಾಗುತ್ತಿದೆ. ಇಂತಹ ಕಡೆಗಳಲ್ಲಿ ಆದಷ್ಟು ಜನ ಸೇರುವುದು ಕಡಿಮೆಯಾಗಬೇಕು ಎಂದು ಅವರು ಹೇಳಿದರು.
ಕೊರೊನಾ ನಿರ್ವಹಣೆ ಸಂಬಂಧ ವಿರೋಧ ಪಕ್ಷದ ನಾಯಕರಿಗೆ ರಾಜ್ಯ ಸರ್ಕಾರವನ್ನು ಟೀಕೆ ಮಾಡುವುದು ಬಿಟ್ಟರೆ ಬೇರೆ ಕೆಲಸ ಇಲ್ಲ. ವಿನಾ ಕಾರಣ ಟೀಕೆ ಮಾಡುವುದನ್ನು ಬಿಟ್ಟು ಸರ್ಕಾರಕ್ಕೆ ಅಗತ್ಯ ಸಲಹೆ-ಸೂಚನೆಗಳನ್ನು ನೀಡಲಿ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಡಿಹೆಚ್ಓ ನಾಗೇಂದ್ರಪ್ಪ, ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕು ಹೆಚ್ಚಳವಾಗುತ್ತಿದ್ದು, ಪ್ರತಿದಿನ ಸೋಂಕಿತರ ಸಂಖ್ಯೆ 500 ದಾಟುತ್ತಿದೆ. ಸೋಂಕು ನಿಯಂತ್ರಿಸಲು ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರ ಜತೆಗೆ ಸ್ಯಾನಿಟೈಸರ್ನ್ನು ಬಳಸಬೇಕು ಎಂದು ಮನವಿ ಮಾಡಿದರು.
ಸಾರ್ವಜನಿಕರು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡದೆ ಒಟ್ಟುಗೂಡುವುದು, ಸಭೆ ಸಮಾರಂಭಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ಸೋಂಕು ಹೆಚ್ಚಳಕ್ಕೆ ಪ್ರಮುಖ ಕಾರಣವಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಈಗಾಗಲೇ ಜಿಲ್ಲೆಯಲ್ಲಿ 3 ಸಾವಿರ ಸೋಂಕು ಪ್ರಕರಣಗಳು ವರದಿಯಾಗಿವೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲೀಗ 2500 ಸೋಂಕು ಪ್ರಕರಣಗಳಿದ್ದು, ಈ ಪೈಕಿ ಶೇ. 80 ರಷ್ಟು ಎ ಸಿಂಪ್ಟಮ್ಯಾಟಿಕ್ ಲಕ್ಷಣವುಳ್ಳ ರೋಗಿಗಳಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ 185 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಹೊರಗಿನ ಆಸ್ಪತ್ರೆಗಳಲ್ಲಿ 600 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.
ಸದ್ಯದ ಪರಿಸ್ಥಿತಿಯಲ್ಲಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಮತ್ತು ಐಸಿಯು ಕೊರತೆಯಿಲ್ಲ ಎಂದು ಅವರು ಹೇಳಿದರು.
ಈಗಾಗಲೇ ಸರ್ಕಾರದ ಮಾರ್ಗಸೂಚಿ ಅನ್ವಯ ಹಾಗೂ ಆದೇಶದ ಮೇರೆಗೆ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುತ್ತಿದ್ದು, ಇದುವರೆಗೆ ಜಿಲ್ಲೆಯಾದ್ಯಂತ ಸುಮಾರು 2.50 ಲಕ್ಷ ಮಂದಿಗೆ ಲಸಿಕೆ ಹಾಕಲಾಗಿದೆ. ಲಸಿಕೆ ಅಭಿಯಾನವನ್ನು ಇನ್ನು ಮುಂದುವರೆಸಲಾಗುತ್ತದೆ. 45 ವರ್ಷ ಮೇಲ್ಪಟ್ಟವರು ಸ್ವಯಂ ಪ್ರೇರಿತರಾಗಿ ಬಂದು ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಸಾರ್ವಜನಿಕರು ತಮ್ಮಲ್ಲಿರುವ ರೋಗ ಲಕ್ಷಣಗಳನ್ನು ಮರೆ ಮಾಚುತ್ತಿರುವುದರಿಂದ ಸೋಂಕು ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಆದ್ದರಿಂದ ಜನಸಾಮಾನ್ಯರು ತಮ್ಮಲ್ಲಿ ಯಾವುದೇ ರೀತಿಯ ರೋಗ ಲಕ್ಷಣಗಳು ಇದ್ದರೂ ಮರೆ ಮಾಚದೆ ಆಸ್ಪತ್ರೆಗಳಿಗೆ ಬಂದು ಪರೀಕ್ಷಿಸಿಕೊಂಡು ಚಿಕಿತ್ಸೆ ಪಡೆಯಬೇಕು ಎಂದರು.
ಕೊರೊನಾ ಸೋಂಕು ನಿಯಂತ್ರಿಸಲು ಪ್ರತಿಯೊಬ್ಬರೂ 3 ಸೂತ್ರಗಳಾದ ಮಾಸ್ಕ್ ಧರಿಸುವುದು, ಆಗಿಂದಾಗ್ಗೆ ಸ್ಯಾನಿಟೈಸರ್ನಿಂದ ಕೈ ಸ್ವಚ್ಚಗೊಳಿಸುವುದು ಹಾಗೂ ಗುಂಪುಗೂಡದೆ ಸಾಮಾಜಿಕ ಅಂತರ ಕಾಪಾಡುವುದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅವರು ತಿಳಿಸಿದರು.
ಜನಸಾಮಾನ್ಯರು ಇನ್ನು ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಕಠಿಣ ಸವಾಲು ಮತ್ತು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದಕ್ಕೆ ಅವಕಾಶ ನೀಡದೆ ಸ್ವಯಂ ಪ್ರೇರಿತರಾಗಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಮುಂದಾಗಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ ಶಕುಂತಲಾ ಬಸವರಾಜು, ಗುರುಸಿದ್ದಪ್ಪ, ಸುಧಾ, ಹೊನ್ನುಡಿಕೆ ಲೋಕೇಶ್ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!