ತುಮಕೂರು: ಜಿಲ್ಲಾಸ್ಪತ್ರೆಯು ಹಳೆಯ ಕಟ್ಟಡವಾಗಿರುವುದರಿಂದ ಯಾವುದೇ ರೀತಿಯ ಅಗ್ನಿ ಅವಘಡಗಳಾಗದಂತೆ ಸುರಕ್ಷತಾ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಅಸ್ಗರ್ ಬೇಗ್ಗೆ ಸೂಚನೆ ನೀಡಿದರು.
ಶುಕ್ರವಾರ ರಾತ್ರಿ ಉತ್ತರ ಪ್ರದೇಶದ ಝಾನ್ಸಿ ಮಹಾರಾಣಿ ಲಕ್ಷ್ಮಿಬಾಯಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 10 ನವಜಾತ ಶಿಶುಗಳು ಮೃತಪಟ್ಟಿರುವ ಬಗ್ಗೆ ವರದಿಯಾಗಿರುವ ಹಿನ್ನೆಲೆಯಲ್ಲಿ ಶನಿವಾರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.
ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕ, ಹೆರಿಗೆ ವಾರ್ಡ್, ಡೆಂಗ್ಯು ರೋಗಿಗಳ ವಾರ್ಡ್, ಟ್ರಯೇಜ್ ಕೊಠಡಿ, ಹೊರ ರೋಗಿ ಚೀಟಿ ವಿಭಾಗಳಿಗೆ ಭೇಟಿ ನೀಡಿದ ಅವರು ವಿದ್ಯುತ್ ಶಾರ್ಟ್ ಸರ್ಕ್ಯುಟ್ ವಿದ್ಯುತ್ ವೈರ್ ಪರಿಶೀಲಿಸಬೇಕು, ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿ ಹೊಗೆ ತುಂಬಿಕೊಂಡಲ್ಲಿ ಎಚ್ಚರಿಕೆ ನೀಡಲು ಫೈರ್ ಡಿಟೆಕ್ಟರ್ ಅನ್ನು ಅಳವಡಿಸಬೇಕು ಎಂದು ನಿರ್ದೇಶನ ನೀಡಿದರು.
ಅಗ್ನಿ ಅವಘಡಗಳು ಸಂಭವಿಸಿದಾಗ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಆಸ್ಪತ್ರೆ ಸಿಬ್ಬಂದಿಗೆ ಅಣುಕು ಪ್ರದರ್ಶನ ಏರ್ಪಡಿಸಬೇಕೆಂದು ಹಾಗೂ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಹಳೆ ಕಟ್ಟಡಗಳಲ್ಲಿ ಪರಿಶೋಧನೆ ಕೈಗೊಂಡು ವರದಿ ನೀಡಬೇಕೆಂದು ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಕೆ.ಪಿ.ಶಶಿಧರ್ ಅವರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮಕ್ಕಳ ತಜ್ಞ ಡಾ.ಶ್ರೀನಿವಾಸ್ ಪ್ರಸಾದ್, ಸಹಾಯಕ ಆಡಳಿತ ಅಧಿಕಾರಿ ರವಿ, ಸ್ಥಾನಿಕ ವೈದ್ಯಾಧಿಕಾರಿ ಡಾ.ಚೇತನ್ ಹಾಜರಿದ್ದರು.
Comments are closed.