ತುಮಕೂರು: ನಿಮ್ಮ ಭವಿಷ್ಯದ ಜೀವನ ರೂಪಿಸುವವರು ನಿಮ್ಮ ತಂದೆ, ತಾಯಿ ಮಾತ್ರ, ನಿಮ್ಮ ಅಪ್ಪ, ಅಮ್ಮ ಯಾವತ್ತೂ ನಿಮ್ಮ ಹಿತಚಿಂತಕರಾಗಿರುತ್ತಾರೆ, ನೀವು ಮಾಡುವ ಎಲ್ಲಾ ತಪ್ಪುಗಳನ್ನು ಕ್ಷಮಿಸಿ ನಿಮ್ಮನ್ನು ಅಪ್ಪಿಕೊಳ್ಳುತ್ತಾರೆ, ತಂದೆ, ತಾಯಿ ವಯಸ್ಸಾದಾಗ, ತುಂಬಾ ಅಶಕ್ತರಾದ ಮೇಲೆ ಅವರನ್ನು ವೃದ್ಧಾಶ್ರಮಕ್ಕೆ ಸೇರಿಸುವ ನಕಾರಾತ್ಮಕ ಚಿಂತನೆಗಳನ್ನು ಮನಸ್ಸಿನಿಂದ ತೆಗೆದು ಹಾಕಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ತುಮಕೂರಿನ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ ಅವರು ಶಾಲಾ ಮಕ್ಕಳಿಗೆ ಕಿವಿಮಾತು ಹೇಳಿದರು.
ರೋಟರಿ ತುಮಕೂರು, ಕಲಾ ಬೆಂಗಳೂರು ಹಾಗೂ ತುಮಕೂರಿನ ರೀಡ್ ಬುಕ್ ಫೌಂಡೇಷನ್ ಸಂಸ್ಥೆಗಳ ಸಹಯೋಗದಲ್ಲಿ ಎಂಪ್ರೆಸ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮಕ್ಕಳ ದಿನಾಚರಣೆ, ಅಂತಾರಾಷ್ಟ್ರೀಯ ಮಧುಮೇಹ ದಿನಾಚರಣೆ ಹಾಗೂ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ 1500 ಶಾಲಾ ಮಕ್ಕಳಿಗೆ ಅರಿವು ಕಾರ್ಯಕ್ರಮ ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ವೃದ್ಧಾಶ್ರಮಗಳು ಹೆಚ್ಚಾಗುವುದು ಸಂತೋಷ ಪಡುವ ವಿಚಾರವಲ್ಲ, ಬದಲಿಗೆ ನಾಚಿಕೆಯಿಂದ ತಲೆ ತಗ್ಗಿಸಬೇಕಾಗಿದೆ, ಮಕ್ಕಳೇ ವೃದ್ಧಾಶ್ರಮಗಳಿಗೆ, ಅನಾಥಾಶ್ರಮಗಳಿಗೆ ಭೇಟಿ ನೀಡಿ ಅಲ್ಲಿರುವವರ ಜೀವನದ ನೋವು ಸಂಕಟಗಳನ್ನು ತಿಳಿದುಕೊಳ್ಳಿ, ಜೀವನದ ವಾಸ್ತವ ವಿಚಾರಗಳು ನಿಮಗೆ ಗೊತ್ತಾಗುತ್ತೆ, ಜೊತೆಗೆ ಇನ್ನೊಂದು ಅಪ್ಪ, ಅಮ್ಮ ವೃದ್ಧಾಶ್ರಮಕ್ಕೆ ಸೇರಿಸುವುದನ್ನು ತಪ್ಪಿಸುವ ಗುರುತರ ಜವಾಬ್ದಾರಿ ನಿಮಗೆ ಬರುತ್ತದೆ, ನಿಮಗೆ ಯಾರಾದರೂ ಮಕ್ಕಳಿಂದ ನಿರ್ಲಕ್ಷ್ಯಕ್ಕೆ ಒಳಗಾದ ವೃದ್ಧರು ಕಂಡರೆ ನಮ್ಮ ಕಾನೂನು ಸೇವಾ ಪ್ರಾಧಿಕಾರದ ಗಮನಕ್ಕೆ ತನ್ನಿ ಎಂದರು.
ಸಮಾರಂಭದಲ್ಲಿ ಸಾನಿಧ್ಯ ವಹಿಸಿದ್ದ ಬೆಳ್ಳಾವಿಯ ಕಾರದ ಮಠದ ಪೀಠಾಧ್ಯಕ್ಷ ಕಾರದ ವೀರಬಸವ ಸ್ವಾಮಿ ಮಾತನಾಡಿ, ನಾವು ಈ ಜಗತ್ತಿನಲ್ಲಿ ಬುದ್ಧಿವಂತರಾಗಿ ಸಣ್ಣ ವ್ಯಕ್ತಿಗಳಾಗಿ ದೊಡ್ಡತನವನ್ನು ತೋರಿಸುವ ವ್ಯಕ್ತಿಗಳಾಗಿ ಬಾಳಬೇಕು, ಆಗ ಮಾತ್ರ ಈ ಸಮಾಜಕ್ಕೆ ಏನನ್ನಾದರೂ ಕೊಡಬಹುದು, ಮುಂದೆ ನಿಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಟ್ಟು ಬೆಳೆಸಿದರೆ ಯಾರೂ ವೃದ್ಧಾಶ್ರಮಕ್ಕೆ ಹೋಗುವ ಸಂದರ್ಭ ಬರುವುದಿಲ್ಲ, ಜಗತ್ತಿಗೆ ಕೊಡುಗೆ ಕೊಟ್ಟು ಹೋದ ಅಕ್ಕಮಹಾದೇವಿ, ಬಸವಣ್ಣ, ಸ್ವಾಮಿ ವಿವೇಕಾನಂದ, ಎಪಿಜೆ ಅಬ್ದುಲ್ ಕಲಾಂ ತರಹ ನೀವು ಆಗಿ, ನಮ್ಮ ರಾಜ್ಯವನ್ನು ಕಟ್ಟುವ ಹೆಣ್ಣುಮಕ್ಕಳಾಗಿ ಎಂದು ಹೇಳಿದರು.
ತುಮಕೂರಿನ ರೀಡ್ ಬುಕ್ ಫೌಂಡೇಷನ್ನಿನ ಅಧ್ಯಕ್ಷ ಡಾ.ಶಿವಶಂಕರ್ ಕಾಡದೇವರ ಮಠ ಮಾತನಾಡಿ, ಹುಟ್ಟು ಸಿಂಪಲ್ಲಾಗಿರಬೇಕು, ಸಾವು ತುಂಬಾ ಗ್ರ್ಯಾಂಡ್ ಆಗಿರಬೇಕು, ಅದಕ್ಕೆ ಉದಾಹರಣೆ ಡಾ.ಶಿವಕುಮಾರ ಮಹಾಸ್ವಾಮಿ ಹಾಗೂ ಬಿಜಾಪುರದ ಸಿದ್ಧೇಶ್ವರ ಸ್ವಾಮಿಗಳು ಮರಣ ಹೊಂದಿದಾಗ ಇಡೀ ವಿಶ್ವ ಇವರತ್ತ ನೋಡುತ್ತಿತ್ತು, ಕಾರಣ ಇವರ ಹುಟ್ಟು ಮತ್ತು ಮರಣದ ನಡುವಿನ ಸಾಧನೆಗಳು ಎಂದು ಹೇಳಿದರು.
ತುಮಕೂರು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ, ಬೆಂಗಳೂರಿನ ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದ ಅಧ್ಯಕ್ಷ ಡಾ.ಎಂ.ಕೃಷ್ಣಮೂರ್ತಿ, ತುಮಕೂರು ಮಹಾ ನಗರ ಪಾಲಿಕೆಯ ಆರೋಗ್ಯಾಧಿಕಾರಿ ಡಾ.ವೀರೇಶ್ ಕಲ್ಮಠ್, ರೋಟರಿ ತುಮಕೂರಿನ ಪ್ರಪ್ರಥಮ ಮಹಿಳಾ ಅಧ್ಯಕ್ಷೆ ರಾಜೇಶ್ವರಿ ರುದ್ರಪ್ಪ, ಎಂಪ್ರೆಸ್ ಬಾಲಕಿಯರ ಪ.ಪೂ.ಕಾಲೇಜಿನ ಪ್ರಾಂಶುಪಾಲ ಎಸ್. ಪ್ರಕಾಶ್, ಉಪ ಪ್ರಾಂಶುಪಾಲರಾದ ಎಂ.ಮಂಜುಳ ಇತರರು ಇದ್ದರು.
Comments are closed.