ಕುಣಿಗಲ್: ಮಕ್ಕಳು ದೇವರಿಗೆ ಸಮಾನ, ಅವರಲ್ಲಿ ಭೇದಭಾವ ಇಲ್ಲದಂತೆ ಸಮಾನವಾಗಿ, ಸಂತೋಷದಾಯಕ ವಾತಾವರಣದಲ್ಲಿ ಬೆಳೆಯಲು ಎಲ್ಲರೂ ಕೊಡುಗೆ ನೀಡಬೇಕಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಚೇತನ್ ಕುಮಾರ್ ಹೇಳಿದರು.
ತಾಲೂಕಿನ ಕೊತ್ತಗೆರೆ ಹೋಬಳಿಯ ವಾಣಗೆರೆಯಲ್ಲಿನ ದಯಾಭವನ ಸಮೂಹ ಸಂಸ್ಥೆಗಳ ಆವರಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಅನಾಥಾಶ್ರಮ ಹಾಗೂ ವಿಶೇಷ ಮಕ್ಕಳ ಕುಟೀರಗಳ ಸಾಂಸ್ಕೃತಿಕ ವೇದಿಕೆ ಕಲರವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಲರವ ಕಾರ್ಯಕ್ರಮ ತುಮಕೂರು ಜಿಲ್ಲೆಯಲ್ಲಿ ಮಾತ್ರವಲ್ಲದೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಮಕ್ಕಳನ್ನು ಕರೆಯಿಸಿ ಇದನ್ನು ರಾಜ್ಯ ಮಟ್ಟದ ಉತ್ಸವವನ್ನಾಗಿ ಆಚರಿಸಿ ವಿವಿಧೆಡೆಯ ಮಕ್ಕಳು ಒಂದೆಡೆ ಕೂಡಿದಾಗ ಮಕ್ಕಳಲ್ಲಿ ಸ್ನೇಹಮಯ ವಾತಾವರಣ ನಿರ್ಮಾಣವಾಗಿ ಮಕ್ಕಳಲ್ಲಿ ಸಾಮಾಜಿಕ ಪ್ರಜ್ಞೆ ಬೆಳೆಯಲು ಸಹಕಾರಿಯಾಗುತ್ತದೆ ಎಂದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದಿನೇಶ್ ಮಾತನಾಡಿ, ಮಕ್ಕಳು ದೊರೆಯುತ್ತಿರುವ ಸೌಲಭ್ಯವನ್ನು ಉತ್ತಮವಾಗಿ ಬಳಸಿಕೊಂಡು ಸಮಾಜದ ಅತ್ಯುತ್ತಮ ವ್ಯಕ್ತಿಯಾಗಿ ಎತ್ತರಕ್ಕೆ ಬೆಳೆಯಬೇಕೆಂದರು.
ಕಾರ್ಯಕ್ರಮದ ಸಾನಿಧ್ಯವನ್ನು ಸಂಸ್ಥೆಯ ಗುರುಗಳಾದ ಅಬ್ರಹಾಂ ರಂಭಾನ್ ವಹಿಸಿ, ಸಂಸ್ಥೆಯ ವತಿಯಿಂದ ಮಕ್ಕಳಿಗೆ ಸಾಧ್ಯವಿರುವ ಎಲ್ಲಾ ಸವಲತ್ತು ವಿತರಿಸಿ ಮಕ್ಕಳಲ್ಲಿ ಸ್ವಾವಲಂಬನೆ, ಆತ್ಮವಿಶ್ವಾಸ ವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ ಎಂದರು. ಸಂಸ್ಥೆಯ ಸಂಯೋಜಕ ರಮೇಶ್ ಮಾತನಾಡಿ, ವರ್ಷಕ್ಕೊಮ್ಮೆ ನಡೆಯುವ ಈ ಕಾರ್ಯಕ್ರಮ ಮಕ್ಕಳಲ್ಲಿ ನಾವೆಲ್ಲರೂ ಒಂದೇ ಹಾಗೂ ನಮಗೂ ಸಹ ಬೇರೆಯವರಂತೆ ಘನತೆಯಿಂದ ಬದುಕುವ ಹಕ್ಕು, ಜೀವನ ಕಟ್ಟಿಕೊಳ್ಳುವ ಅರ್ಹತೆ ಇದೆ ಎಂದು ತೋರಿಸಿಕೊಡುವ ಜೊತೆಯಲ್ಲಿ ಈ ಮಕ್ಕಳಲ್ಲಿ ವಿಶೇಷ ಚೇತನವನ್ನು ತುಂಬುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು ಮಕ್ಕಳೊಟ್ಟಿಗೆ ನೃತ್ಯ ಮಾಡಿ ಮಕ್ಕಳನ್ನು ಹುರಿದುಂಬಿಸಿದರು, ತುಮಕೂರು ನಗರದ ಶಿಶು ಅಭಿವೃದ್ಧಿ ಅಧಿಕಾರಿ ನಾಗರಾಜ್, ತುರುವೇಕೆರೆ ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿ ವೆಂಕಟಪ್ಪ, ಸಂಸ್ಥೆಯ ವೈದ್ಯಾಧಿಕಾರಿ ಡಾ.ಲಿಸಿ, ಸಂಸ್ಥೆಯ ಖಜಾಂಚಿ ಸತ್ಯಂ, ತುಮಕೂರು ಜಿಲ್ಲೆಯ ಎಲ್ಲಾ ಮಕ್ಕಳ ಮನೆಯ ಮಕ್ಕಳು, ಮುಖ್ಯಸ್ಥರು ಭಾಗಿಯಾಗಿದ್ದರು, ಅಂಧ ಮಕ್ಕಳು, ಕಿವುಡ ಮೂಕ ಮಕ್ಕಳು ಸೇರಿದಂತೆ ವಿಶೇಷ ಚೇತನ ಮಕ್ಕಳು ಈ ವೇದಿಕೆಯಲ್ಲಿ ಅತ್ಯುತ್ಸಾಹದಿಂದ ನೃತ್ಯ ಮಾಡಿ ಸಂತಸ ಪಟ್ಟರು.
Comments are closed.