ಕುಣಿಗಲ್: ಸಮರ್ಪಕ ಬಸ್ ವ್ಯವಸ್ಥೆಗೆ ಆಗ್ರಹಿಸಿ ವಿದ್ಯಾರ್ಥಿಗಳು ತುಮಕೂರು ಕಡೆಗೆ ಹೊರಟಿದ್ದ ಸಾರಿಗೆ ಸಂಸ್ಥೆ ಬಸ್ ಗಳನ್ನು ತಡೆದು ಪ್ರತಿಭಟನೆ ನಡೆಸಿ ಸೂಕ್ತ ಬಸ್ ವ್ಯವಸ್ಥೆಗೆ ಆಗ್ರಹಿಸಿದರು.
ಮಂಗಳವಾರ ಬೆಳಗ್ಗೆ ಸಂಘಟಿತರಾದ ವಿದ್ಯಾರ್ಥಿಗಳು, ಕುಣಿಗಲ್ ಪಟ್ಟಣದಿಂದ ತುಮಕೂರು ಕಡೆಗೆ ವಿದ್ಯಾಭ್ಯಾಸಕ್ಕಾಗಿ ದಿನವೂ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಯಾಣ ಮಾಡುತ್ತಿದ್ದು, ಇವರ ಜೊತೆಯಲ್ಲಿ ವಿವಿಧ ಉದ್ಯೋಗಸ್ಥರು ಸಹ ಪ್ರಯಾಣಿಸುತ್ತಿದ್ದಾರೆ, ದಿನ ಬೆಳಗ್ಗೆ ಏಳು ಗಂಟೆಯಿಂದ ಒಂಬತ್ತು ಗಂಟೆವರೆಗೂ ಕೆಲವೇ ಬಸ್ ಗಳಿದ್ದು ವಿದ್ಯಾರ್ಥಿಗಳು ಹೋಗಲು ಅನಾನುಕೂಲವಾಗುತ್ತಿದೆ, ಈ ಬಗ್ಗೆ ಸಾರಿಗೆ ಸಂಸ್ಥೆ ಅಧಿಕಾರಿಗಳನ್ನು ಕೇಳಿದರೆ ಬಸ್ ಬರುತ್ತದೆ ಎಂದು ಸಬೂಬು ಹೇಳಿಕೊಂಡು ಕಾಲ ತಳ್ಳುತ್ತಾರೆ, ಶಾಸಕರು ವಿದ್ಯಾರ್ಥಿಗಳ ಒತ್ತಡಕ್ಕೆ ಮೂರು ಬಸ್ ಬಿಟ್ಟಿದ್ದು, ಆ ಬಸ್ ಗಳು ಕಾರ್ಯಾಚರಣೆ ಮಾಡಿ ಕೆಲವೇ ದಿನಗಳ ನಂತರ ನಿಂತು ಹೋದವು ಎಂದು ಅಖಿಲ ಕರ್ನಾಟಕ ವಿದ್ಯಾರ್ಥಿ ಪರಿಷತ್ ಪ್ರಮುಖ ಪ್ರಜ್ವಲ್ ಆರೋಪಿಸಿದರು.
ಸಮರ್ಪ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿಗಳಿಗೂ ಇತರ ಜನಕ್ಕೂ ತೀವ್ರ ತೊಂದರೆಯಾಗುತ್ತಿದೆ ಹಾಗೂ ತುಮಕೂರು ಕಡೆಯಿಂದ ಕುಣಿಗಲ್ ಗೆ ಬರಲು ಮಂಡ್ಯ, ಮೈಸೂರು ಘಟಕದ ಸಿಬ್ಬಂದಿ ವಿದ್ಯಾರ್ಥಿಗಳೊಂದಿಗೆ ಅನುಚಿತವಾಗಿ ವರ್ತಿಸುವುದಲ್ಲದೆ ವಿದ್ಯಾರ್ಥಿಗಳನ್ನು ಬಸ್ ಹತ್ತಲು ಬಿಡುವುದಿಲ್ಲ, ತುಮಕೂರಿನ ಮರಳೂರು ಸಮೀಪ ಬೈಪಾಸ್ ರಸ್ತೆಯಲ್ಲಿ ಕಾಲೇಜಿಗೆ ಹೋಗಲು ನಿಲುಗಡೆ ಕೊಡುವುದಿಲ್ಲ, ಭಕ್ತರಹಳ್ಳಿ, ಬಳ್ಳಗೆರೆ ಬಳಿ ನಿಕುಗಡೆ ನೀಡುವುದಿಲ್ಲ, ಸಾಕಷ್ಟು ಸಮಸ್ಯೆಯಾಗುತ್ತಿದ್ದರು ಸಾರಿಗೆ ಸಂಸ್ಥೆಯ ಅಧಿಕಾರಗಳ ಗಮನಕ್ಕೆ ತಂದರು ಪ್ರಯೋಜನವಾಗುತ್ತಿಲ್ಲ ಎಂದು ಆರೋಪಿಸಿ, ಸ್ಥಳಕ್ಕೆ ಆಗಮಿಸಿದ ಕುಣಿಗಲ್ ಸಾರಿಗೆ ಸಂಸ್ಥೆ ಘಟಕ ವ್ಯವಸ್ಥಾಪಕ ಪ್ರತ್ಯಕ್ಷರಾವ್ ಅವರೊಂದಿಗೆ ವಾಗ್ವಾದ ನಡೆಸಿದರು.
ಸಿಪಿಐ ನವೀನ್ ಗೌಡ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಸಾರಿಗೆ ಸಂಸ್ಥೆಯ ದಾಖಲೆಗಳನ್ನು ಪರಿಶೀಲಿಸಿ ಏಳು ಗಂಟೆಯಿಂದ ಎಂಟು ಗಂಟೆ ಅವಧಿಯಲ್ಲಿ 10ಕ್ಕೂ ಹೆಚ್ಚು ಬಸ್ ತುಮಕೂರು ಕಡೆ ಸಂಚಾರ ಮಾಡಿದ್ದು, ಬೆಳಗಿನ ಜಾವ ವಿದ್ಯಾರ್ಥಿಗಳ ದಟ್ಟಣೆ ಸಮಯದಲ್ಲಿ ಸೂಕ್ತ ಬಸ್ ವ್ಯವಸ್ಥೆ ಮಾಡಿಸುವಂತೆ ಘಟಕ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು.
ವಿದ್ಯಾರ್ಥಿಗಳ ಪ್ರತಿಭಟನೆ ಸಮಯದಲ್ಲೇ ನಾಲ್ಕು ಹೆಚ್ಚು ಬಸ್ ತುಮಕೂರು ಕಡೆಗೆ ಬಂದಿದ್ದು ಬಹುತೇಕ ವಿದ್ಯಾರ್ಥಿಗಳು ತೆರಳಿದರು, ಕೆಲವು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದಾಗ ಮಾತ್ರ ಬಸ್ ವ್ಯವಸ್ಥೆ ಮಾಡದೆ ನಿತ್ಯವೂ ಸಮರ್ಪಕ ಬಸ್ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿ ಘಟಕದ ವ್ಯವಸ್ಥಾಪಕರಿಗೆ ಮನವಿ ನೀಡಿದರು. ವಿದ್ಯಾರ್ಥಿಗಳಾದ ಭರತ್, ಚೇತನ್, ದರ್ಶನ್, ಸಂತೋಷ್, ಲೋಕೇಶ್ ಇತರರು ಇದ್ದರು.
Comments are closed.