ವಿದ್ಯಾವಾಹಿನಿ ಪ್ರದೀಪ್ ಗೆ ಅಭಿನಂದನೆ ಸಲ್ಲಿಕೆ

0

Get real time updates directly on you device, subscribe now.


ತುಮಕೂರು: ನಗರದ ಮುಂಜಾನೆ ಗೆಳೆಯರ ಬಳಗದ ವತಿಯಿಂದ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ದೇಹದಾರ್ಢ್ಯ ಪಟು ಶ್ರೀಹರಿ ಮತ್ತು ಹೈಜಂಪ್ ಕ್ರೀಡಾಳು ದರ್ಶನ್ ಹಾಗೂ ರಾಜೋತ್ಸವ ಪ್ರಶಸ್ತಿ ಪಡೆದ ವಿದ್ಯಾವಾಹಿನಿ ಪ್ರದೀಪ್ ಕುಮಾರ್ ಅವರನ್ನು ಅಭಿನಂದಿಸಲಾಯಿತು.
ಇತ್ತೀಚೆಗೆ ಥೈಲಾಂಡ್ ನಲ್ಲಿ ನಡೆದ ವಿಶ್ವ ದೇಹದಾರ್ಢ್ಯ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಕಂಚಿನ ಪದಕ ಪಡೆದ ಶ್ರೀಹರಿ, ರಾಜ್ಯಮಟ್ಟದ ಪಿಯು ಅಥ್ಲೆಟಿಕ್ಸ್ ಕ್ರೀಡಾಕೂಟದ ಹೈಜಂಪ್ ವಿಭಾಗದಲ್ಲಿ 1.91 ಮೀಟರ್ ಎತ್ತರ ಜಿಗಿದು ಚಿನ್ನದ ಪದಕ ತನ್ನದಾಗಿಸಿಕೊಂಡ ಗ್ರಾಮೀಣ ಪ್ರತಿಭೆ ದರ್ಶನ್ ಹಾಗೂ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿದ್ಯಾವಾಹಿನಿ, ವಿದ್ಯಾನಿಧಿ ಶಿಕ್ಷಣ ಸಂಸ್ಥೆಯ ಪ್ರದೀಪ್ ಕುಮಾರ್ ಅವರನ್ನು ಅಂತಾರಾಷ್ಟ್ರೀಯ ಕ್ರೀಡಾಪಟು ಟಿ.ಕೆ.ಆನಂದ್ ನೇತೃತ್ವದಲ್ಲಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಕ್ರೀಡಾಪಟು ಟಿ.ಕೆ.ಆನಂದ್, ಹೊಸದುರ್ಗ ತಾಲ್ಲೂಕಿನ ಒಂದು ಕುಗ್ರಾಮದಲ್ಲಿ ಹುಟ್ಟಿ ಸಮರ್ಪಕ ಪರಿಕರಗಳಿಲ್ಲದಿದ್ದರೂ ಹೈಜಂಪ್ ನಂತಹ ಕ್ರೀಡೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು, ರಾಷ್ಟ್ರಮಟ್ಟದಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ, ಹಾಗೆಯೇ ಶ್ರೀಹರಿ ಕೂಡ ತನ್ನ ಸ್ವಂತ ಪರಿಶ್ರಮದಿಂದ ವಿಶ್ವ ದೇಹದಾರ್ಡ್ಯ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದು ದೇಶಕ್ಕೆ ಕೀರ್ತಿ ತಂದಿದ್ದಾರೆ, ಇವರ ಸಾಧನೆ ಇತರರಿಗೆ ಮಾದರಿ, ಹಾಗೆಯೇ ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಮಾಡಿರುವ ವಿದ್ಯಾವಾಹಿನಿ ಸಂಸ್ಥೆಯ ಕಾರ್ಯದರ್ಶಿ ಪ್ರದೀಪ್ ಅವರ ಸಾಧನೆ ಗುರುತಿಸಿ ಜಿಲ್ಲಾಡಳಿತ ರಾಜೋತ್ಸವ ಪ್ರಶಸ್ತಿ ನೀಡುವ ಮೂಲಕ ಪ್ರಶಸ್ತಿಯ ಘನತೆ ಹೆಚ್ಚಿದೆ ಎಂದರು.

ಕನ್ಬಡಸೇನೆಯ ಅಧ್ಯಕ್ಷ ಧನಿಯ ಕುಮಾರ್ ಮಾತನಾಡಿ, ತುಮಕೂರು ಶಿಕ್ಷಣದ ಜತೆಗೆ ಕ್ರೀಡೆಯಲ್ಲಿ ಸಹ ಹೆಸರು ಮಾಡುತ್ತಿದೆ, ಕಲ್ಪತರು ನಾಡು ಶಿಕ್ಷಣ ಕಾಶಿಯಾಗಿ ಬದಲಾಗುತ್ತಿದೆ, ಟಿ.ಕೆ.ಆನಂದ್ ಅವರಂತಹ ಕ್ರೀಡಾಪಟುಗಳು ಎಲೆಮರೆಯ ಕಾಯಿಯಂತಹ ಸಾಧಕರನ್ನು ಗುರುತಿಸಿ ಗೌರವಿಸುವ ಮೂಲಕ ಇತರರು ಸಾಧನೆ ಮಾಡಲು ಪ್ರೇರಣೆ ನೀಡುತ್ತಿದ್ದಾರೆ ಎಂದರು.
ಚೆಸ್ ಅಕಾಡೆಮಿ ರಾಜ್ಯಾಧ್ಯಕ್ಷ ಟಿ.ಎನ್.ಮಧುಕರ್ ಮಾತನಾಡಿ, ಟಿ.ಕೆ.ಆನಂದ್ ಅವರು ಒಂದು ರೀತಿ ಕ್ರೀಡಾ ರಾಯಭಾರಿಯಂತೆ, ಹಿರಿಯ, ಕಿರಿಯ ಕ್ರೀಡಾಪಟುಗಳನ್ನು ಬೆಸೆಯುವ ಕೆಲಸ ಮಾಡುತ್ತಿದ್ದಾರೆ, ಅಥ್ಲೆಟಿಕ್ಸ್ ದೈಹಿಕ ಶ್ರಮದ ಕ್ರೀಡೆಯಾದರೆ, ಚೆಸ್ ಮೈಂಡ್ ಗೇಮ್ ಆಗಿದೆ, ಮಕ್ಕಳು ಚೆಸ್ ಕಡೆ ಗಮನ ಹರಿಸಬೇಕು ಎಂದರು.

ಜಿಲ್ಲಾಡಳಿತ ವಿದ್ಯಾವಾಹಿನಿಯ ಪ್ರದೀಪ್ ಕುಮಾರ್ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡುವ ಮೂಲಕ ಪ್ರಶಸ್ತಿಗೆ ನ್ಯಾಯ ಒದಗಿಸಿದೆ ಎಂದರು.
ಕ್ರೀಡಾಪಟುಗಳಿಗೆ ಶಿಸ್ತು ಮುಖ್ಯ, ರಾಜ್ಯ ಮತ್ತು ರಾಷ್ಟ್ರೀಯ ಕೂಟಗಳಲ್ಲಿ ಭಾಗವಹಿಸುವ ಸಂದರ್ಭದಲ್ಲಿ ಸ್ವಚ್ಛತೆಯ ಜೊತೆಗೆ ಪರಿಕರಗಳನ್ನು ಹಾಳು ಮಾಡದೆ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಮಾಜ ಸೇವಕ ಹೆಚ್.ಎನ್.ಚಂದ್ರಶೇಖರ್ ಮಾತನಾಡಿ, ಸಾಧಕರನ್ನು ಗುರುತಿಸಿ ಪ್ರೋತ್ಸಾಹ ನೀಡುವುದು, ಮತ್ತಷ್ಟು ಜನರು ಸಾಧನೆ ಮಾಡಲು ಪ್ರೇರಣೆಯಾಗುತ್ತದೆ, ಈ ನಿಟ್ಟಿನಲ್ಲಿ ಮುಂಜಾನೆ ಗೆಳೆಯರ ಬಳಗ ಮುಂಚೂಣಿಯಲ್ಲಿದೆ ಎಂದರು.
ಅಭಿನಂದನೆ ಸ್ವೀಕರಿಸಿದ ಹೈಜಂಪ್ ಆಟಗಾರ ದರ್ಶನ್ ಮಾತನಾಡಿ, ಗ್ರಾಮೀಣ ಭಾಗದ ನನಗೆ ಅಭ್ಯಾಸಕ್ಕೆ ಸೂಕ್ತ ಜಾಗವಿಲ್ಲದಿದ್ದರೂ ನಿರಂತರ ಪರಿಶ್ರಮದ ಫಲವಾಗಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಒಲಂಪಿಕ್ಸ್ ನಲ್ಲಿ ಸ್ವರ್ಧೆ ಮಾಡಿ ಪದಕ ಪಡೆಯಬೇಕೆಂಬ ಆಸೆಯಿದೆ, ಆ ನಿಟ್ಟಿನಲ್ಲಿ ಪ್ರಯತ್ನ ಮುಂದುವರೆಯಲಿದೆ ಎಂದರು.

ದೇಹದಾರ್ಢ್ಯಪಟು ಶ್ರೀಹರಿ ಮಾತನಾಡಿ, ಒಂದೆಡೆ ಪಿಹೆಚ್ಡಿ ಪದವಿಗೆ ಅಭ್ಯಾಸದ ಜತೆಗೆ ವಿಶ್ವ ಚಾಂಪಿಯನ್ ಶಿಪ್ ಗೆ ತಯಾರು ಆರಂಭಿಸಿದ್ದು, ಕಂಚಿನ ಪದಕ ಪಡೆದಿದ್ದೇನೆ, ಚಿನ್ನದ ಪದಕ ಪಡೆಯುವ ಗುರಿ ಇದೆ, ಸಾಧನೆಗೆ ಅಡ್ಡದಾರಿಗಳಿಲ್ಲ ಎಂಬುದಕ್ಕೆ ವಿಶ್ವ ದೇಹದಾರ್ಢ್ಯ ಸ್ವರ್ಧೆಯೇ ಉದಾಹರಣೆ ಎಂದು ಸ್ವರ್ಧೆಯ ವೇಳೆ ನಡೆದ ಘಟನೆ ಉದಾಹರಿಸಿದರು.
ಈ ಸಂದರ್ಭದಲ್ಲಿ ಕ್ರೀಡಾ ತರಬೇತುದಾರರಾದ ಶಿವಪ್ರಸಾದ್, ಮುಖಂಡರಾದ ನಟರಾಜಶೆಟ್ಟಿ, ವೆಂಕಟಾಚಲ, ರಮೇಶ್, ಬಾಲರಾಜ್, ಕೃಷ್ಣಮೂರ್ತಿ ಸೇರಿದಂತೆ ಮುಂಜಾನೆ ಗೆಳೆಯರ ಬಳಗದ ಪದಾಧಿಕಾರಿಗಳು, ಕ್ರೀಡಾಪಟುಗಳು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!