ಏಕತೆ ಮೂಡಿಸುವ ಶಕ್ತಿ ಭಾರತ ಸಂವಿಧಾನಕ್ಕಿದೆ

2

Get real time updates directly on you device, subscribe now.


ಶಿರಾ: ಭಾರತ ದೇಶದಲ್ಲಿ ಅನೇಕ ಜಾತಿ, ಧರ್ಮ, ಭಾಷೆ, ಸಂಸ್ಕೃತಿ ಇದ್ದರೂ ಎಲ್ಲರೂ ಒಗ್ಗೂಡಿ ಏಕತೆ ಇರಲು ಪ್ರಮುಖ ಕಾರಣ ನಮ್ಮ ಸಂವಿಧಾನ, ಭಾರತ ಸಂವಿಧಾನ ವಿಶ್ವದ ಶ್ರೇಷ್ಠ ಸಂವಿಧಾನವಾಗಿದೆ. ವಿವಿಧತೆಯಲ್ಲಿ ಏಕತೆ ಮೂಡಿಸುವ ಶಕ್ತಿ ಸಂವಿಧಾನಕ್ಕಿದೆ ಎಂದು ತಹಶೀಲ್ದಾರ್ ಸಚ್ಚಿದಾನಂದ ಕುಚನೂರ ಹೇಳಿದರು.

ನಗರದ ಮಿನಿವಿಧಾನಸೌಧದಲ್ಲಿ ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆಯಲ್ಲಿ ಭಾಗವಹಿಸಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ, ಭಾರತ ದೇಶ ಸುಭದ್ರವಾಗಿರಲು ಬೆನ್ನೆಲುಬಾಗಿರುವುದು ಭಾರತದ ಸಂವಿಧಾನ, ದೇಶದ ಅಭಿವೃದ್ಧಿ ಮತ್ತು ಜನರ ಹಿತಾಸಕ್ತಿಯೇ ಸಂವಿಧಾನದ ಧ್ಯೇಯ, ಸಂವಿಧಾನದ ಮುಂದೆ ಎಲ್ಲರೂ ಸಮಾನರು, ದೇಶದಲ್ಲಿ ಎಲ್ಲರೂ ಭ್ರಾತೃತ್ವದಿಂದ ಹೋಗಬೇಕು, ಸಂವಿಧಾನ ಅರ್ಥ ಮಾಡಿಕೊಂಡು ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯೋಣ ಎಂದರು.
ನಗರಸಭಾ ಅಧ್ಯಕ್ಷರಾದ ಜೀಷಾನ್ ಮೊಹಮದ್ ಮಾತನಾಡಿ ಭಾರತದ ಸಂವಿಧಾನ ಜಗತ್ತಿಗೆ ಮಾದರಿಯಾಗಿದೆ, ದೇಶದ ಸಮಸ್ತ ನಾಗರಿಕರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ, ವಿಚಾರ, ಅಭಿವ್ಯಕ್ತಿ, ಮತ್ತು ಉಪಾಸನಾ ಸ್ವಾತಂತ್ರ್ಯ ಸ್ಥಾನಮಾನ ಮತ್ತು ಅವಕಾಶಗಳಲ್ಲಿ ಸಮಾನತೆ ಎಲ್ಲರಿಗೂ ದೊರೆಯುವಂತೆ ಸಂವಿಧಾನದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು.

ನಗರಸಭಾ ಉಪಾಧ್ಯಕ್ಷ ಲಕ್ಷ್ಮೀಕಾಂತ್ ಮಾತನಾಡಿ ಸಂವಿಧಾನ ಅರ್ಪಣೆ ಮಾಡಿಕೊಂಡ ದಿನವಾಗಿದೆ, ಅಂಬೇಡ್ಕರ್ ಅವರು ಈ ದೇಶಕ್ಕೆ ಸಂವಿಧಾನ ನೀಡದಿದ್ದರೆ ಈ ರಾಷ್ಟ್ರ ರಾಜ ಮಹಾರಾಜರ ಕೈಯಲ್ಲಿ ಇರುತ್ತಿತ್ತು, ಉಳಿದವರು ಗುಲಾಮಗಿರಿಯಲ್ಲಿ ಬದುಕಬೇಕಾದ ಪರಿಸ್ಥಿತಿ ಇರುತ್ತಿತ್ತು, ಇದನ್ನು ಅರಿತ ಅಂಬೇಡ್ಕರ್ ಅವರು ದೇಶಕ್ಕೆ ಪವಿತ್ರ ಸಂವಿಧಾನ ನೀಡಿದ್ದಾರೆ, ಎಲ್ಲರೂ ಸಮಾನವಾಗಿ ಬದುಕಲು ಅವಕಾಶ ನೀಡಿದ್ದಾರೆ ಎಂದರು.

ಕಸಾಪ ಮಾಜಿ ಖಜಾಂಚಿಗಳು ಹಾಗೂ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಅಬ್ದುಲ್ಲಾ ಖಾನ್ ಮಾತನಾಡಿ ದೇಶದಲ್ಲಿ ಎಲ್ಲರೂ ಸ್ವತಂತ್ರವಾಗಿ ಬದುಕಲು ಕಾರಣ ಭಾರತ ಸಂವಿಧಾನ, ಈ ಸಂವಿಧಾನ ನಾವು ಉಳಿಸಿಕೊಳ್ಳಬೇಕು, ಯಾವುದೇ ಕಾರಣಕ್ಕೂ ಬದಲಾವಣೆಗೂ ಅವಕಾಶ ನೀಡಬಾರದು, ಅಂತಹ ಸಂದರ್ಭ ಬಂದರೆ ಎಲ್ಲರೂ ಒಗ್ಗೂಡಿ ಹೋರಾಟ ಮಾಡೋಣ ಎಂದರು.

ತಾಪಂ ಕಾರ್ಯ ನಿರ್ವಹಣಾಧಿಕಾರಿ ಹರೀಶ್ ಮಾತನಾಡಿ, ಭಾರತದ ಸಂವಿಧಾನದಲ್ಲಿ ಭಾರತೀಯರ ಅಸ್ಮಿತೆ ಇದೆ, ಭಾರತದಲ್ಲಿ ಬದುಕುವ ಪ್ರತಿಯೊಬ್ಬರಿಗೂ ಎಲ್ಲಾ ವಿಧದಲ್ಲೂ ಸಮಾನತೆ ಇದೆ, ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ನ್ಯಾಯ ಪಡೆಯುವ ಅವಕಾಶ ಸಂವಿಧಾನದಲ್ಲಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ವಿ.ಕೆ.ಬಡಿಗೇರ, ಬಿಇಓ ಸಿ.ಎನ್.ಕೃಷ್ಣಪ್ಪ, ಪೂಜಾರ ಮುದ್ದನಹಳ್ಳಿಯ ಚಿದಾನಂದ ಭಾರತಿ ಸ್ವಾಮೀಜಿ, ಡಿವೈಎಸ್ ಪಿ ಶೇಖರ್, ಪೌರಾಯುಕ್ತ ರುದ್ರೇಶ್, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರಪ್ಪ.ಡಿ, ನಗರಸಭಾ ಸದಸ್ಯರಾದ ಅಜಯ್ ಕುಮಾರ್, ದಸಂಸ ಸಂಚಾಲಕ ಟೈರ್ ರಂಗನಾಥ್, ಭಾರತೀಯ ದಲಿತ ಸಂಘರ್ಷ ಸಮಿತಿಯ ಸಂಚಾಲಕ ರವಿಕುಮಾರ್, ಗಜಮಾರನಹಳ್ಳಿ ನಾಗರಾಜು, ಮಾದಿಗ ದಂಡೋರ ಕಾರ್ಯದರ್ಶಿ ಮೋಗೋಡು ಯೋಗಾನಂದ್, ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಧರಣಿಕುಮಾರ್, ಉಪನ್ಯಾಸಕ ಗಂಗಾಧರ್, ಎಸ್.ಜಿ.ರುದ್ರಾಚಾರ್, ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಅಧೀಕ್ಷಕರಾದ ಪ್ರಮೀಳ, ಸಿಬ್ಬಂದಿ ಹನುಮಂತರಾಯಪ್ಪ, ಹೇಮಾ, ನಿಲಯ ಪಾಲಕರಾದ ಶ್ರೀಶೈಲ ಕೊಂಡಗೂಳಿ, ಗಿರೀಶ್ ಸೇರಿದಂತೆ ಹಲವರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!