ಗುಬ್ಬಿ: ಹೇಮಾವತಿ ಲಿಂಕ್ ಕ್ಯಾನಲ್ ಕಾಮಗಾರಿ ವಿರೋಧಿಸಿ ಡಿಸೆಂಬರ್ 7 ರಂದು ಗುಬ್ಬಿ ತಾಲೂಕಿನ ಸಾಗರ ಹಳ್ಳಿ ಗೇಟ್ ನಿಂದ ತುಮಕೂರು ಜಿಲ್ಲಾಧಿಕಾರಿ ಕಚೇರಿ ವರೆಗೆ ಪಾದಯಾತ್ರೆ ಮಾಡಲಾಗುತ್ತದೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ವೆಂಕಟೇಗೌಡ ತಿಳಿಸಿದರು.
ಡಿಸೆಂಬರ್ 7 ರಂದು ತಾಲೂಕಿನ ರೈತಾಪಿ ವರ್ಗದವರು ಸೇರಿದಂತೆ ಮಾಡು ಇಲ್ಲವೇ ಮಡಿ ಹೋರಾಟಕ್ಕೆ ತಾವೆಲ್ಲರೂ ಭಾಗಿಯಾಗಬೇಕು ಎಂದು ಕರೆ ನೀಡಿದರು.
ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ, ಬೆಳಗಾವಿ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಹೋರಾಟವನ್ನು ಡಿಸೆಂಬರ್ 7 ಮತ್ತು 8 ರಂದು ಬೃಹತ್ ಮಟ್ಟದಲ್ಲಿ ಮಾಡುವ ಮೂಲಕ ನಮ್ಮೆಲ್ಲಾ ಜಿಲ್ಲೆಯ ಶಾಸಕರು ಯಾವುದೇ ಕಾರಣಕ್ಕೂ ತುಮಕೂರು ಜಿಲ್ಲೆಯಿಂದ ಹೇಮಾವತಿ ನೀರು ರಾಮನಗರಕ್ಕೆ ಹರಿಸದಂತೆ ಒತ್ತಾಯ ಮಾಡಬೇಕಾಗಿದ್ದು ಗುಬ್ಬಿ ತುಮಕೂರು ಗ್ರಾಮಾಂತರ ಸೇರಿದಂತೆ ವಿವಿಧ ತಾಲೂಕಿನ ರೈತರು ಸಾವಿರಾರು ಸಂಖ್ಯೆಯಲ್ಲಿ ಬಂದು ಪ್ರತಿಭಟನೆ ಮಾಡಬೇಕು ಎಂದು ಮನವಿ ಮಾಡಿದರು.
ನೀರಾವರಿ ಹೋರಾಟದ ಮುಖಂಡ ಬಿ.ಎಸ್.ನಾಗರಾಜು ಮಾತನಾಡಿ, ಪಕ್ಷತೀತವಾಗಿ, ಜಾತ್ಯತೀತವಾಗಿ ಇಡೀ ಜಿಲ್ಲೆಯ ಜನ ಈ ಬಾರಿ ಒಗ್ಗಟ್ಟಿನಿಂದ ಹೋರಾಟವನ್ನು ನಾವೆಲ್ಲರೂ ಮಾಡಬೇಕು, ಆಗ ಮಾತ್ರ ನಮ್ಮ ನೀರನ್ನು ನಾವು ಉಳಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ಮುಖಂಡ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ, ಎರಡು ದಿನಗಳ ಕಾಲ ನಡೆಯುವ ಈ ಹೋರಾಟದಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಟ್ರಾಕ್ಟರ್, ಎತ್ತಿನ ಗಾಡಿ ಸೇರಿದಂತೆ ಎಲ್ಲಾ ರೈತರು ಒಗ್ಗಟ್ಟಿನಿಂದ ಆಗಮಿಸಿ ಹೋರಾಟ ನಡೆಸೋಣ ಎಂದು ತಿಳಿಸಿದರು.
ಮುಖಂಡ ಚಂದ್ರಶೇಖರ ಬಾಬು ಮಾತನಾಡಿ ಪ್ರತಿಯೊಂದು ಗ್ರಾಮದಿಂದಲೂ ನೂರಾರು ರೈತರು ಆಗಮಿಸಬೇಕು, ಇದರಿಂದ ನಾವು ಜಯ ಪಡೆಯಬಹುದು, 07 ರಂದು ಆರಂಭವಾಗುವ ಹೋರಾಟಕ್ಕೆ ತಮ್ಮೆಲ್ಲರ ಬೆಂಬಲ ಬೇಕು ಎಂದು ತಿಳಿಸಿದರು.
ಮುಖಂಡರಾದ ಜಿ.ಎನ್.ಬೆಟ್ಟಸ್ವಾಮಿ, ಭೈರಪ್ಪ, ಪಂಚಾಕ್ಷರಿ, ಯೋಗಾನಂದ ಮೂರ್ತಿ, ಸಾಗರನಹಳ್ಳಿ ವಿಜಯ್ ಕುಮಾರ್, ಅಣ್ಣಪ್ಪ ಸ್ವಾಮಿ, ಕೃಷ್ಣಮೂರ್ತಿ ಇತರರು ಹಾಜರಿದ್ದರು.
Comments are closed.