ತುಮಕೂರು: ಜನಪದ ಇತಿಹಾಸದ ಮೇಲ್ಪದರವನ್ನಷ್ಟೇ ತಿಳಿದು ಸ್ವಂತ ಚಿಂತನೆಯ ನೆಲೆಯಿಲ್ಲದೆ ಮೂಢನಂಬಿಕೆಗಳ ನೆರಳಲ್ಲಿ ಈಗಲೂ ಸಮಾಜ ಬದುಕುತ್ತಿರುವುದು ವಿಪರ್ಯಾಸ, ಸತ್ಯದ ಆಳ ಅರಿಯಲು ಸಂಶೋಧನೆಗಳಾಬೇಕಿದೆ ಎಂದು ಮೈಸೂರು ವಿವಿಯ ಮಹಾರಾಜ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಪ್ರೊ.ಕೆ.ತಿಮ್ಮಯ್ಯಅಭಿಪ್ರಾಯಪಟ್ಟರು.
ತುಮಕೂರು ವಿವಿಯ ಶ್ರೀಜುಂಜಪ್ಪ ಅಧ್ಯಯನ ಪೀಠ ಹಾಗೂ ವಿವಿ ಕಲಾ ಕಾಲೇಜಿನ ಕನ್ನಡ ವಿಭಾಗ ಗುರುವಾರ ಆಯೋಜಿಸಿದ್ದ ಜನಪದ ಮಹಾ ಕಾವ್ಯಗಳಲ್ಲಿ ಶೈವ ಪರಂಪರೆ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿ, ವಿಶ್ವ ವಿದ್ಯಾಲಯಗಳಲ್ಲಿರುವ ಹತ್ತಾರು ಅಧ್ಯಯನ ಪೀಠಗಳು ಅನುದಾನದ ಹಾಗೂ ಸೂಕ್ತ ಸೌಲಭ್ಯಗಳ ಕೊರತೆಯಿಂದ ನಲುಗುತ್ತಿವೆ, ಜನಪದ ಸಂಸ್ಕೃತಿಯನ್ನು ಸೂಕ್ಷ್ಮಚಿಂತನೆಗೆ ಒಳಪಡಿಸಿ, ವೈಚಾರಿಕವಾಗಿ, ವೈಜ್ಞಾನಿಕವಾಗಿ, ತಾತ್ವಿಕ ನೆಲೆಗಟ್ಟಿನಲ್ಲಿ, ಬೌದ್ಧಿಕವಾಗಿ ಪರಂಪರೆಯ ಮೂಲ ಸ್ವರೂಪ ತಿಳಿಯಲು ಅಧ್ಯಯನ ಪೀಠಗಳು ಮುಂದಾಗಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕುಲಸಚಿವೆ ನಾಹಿದಾ ಜಮ್ ಜಮ್ ಮಾತನಾಡಿ, ಜನಪದ ಎಂದರೆ ಜನರಿಂದ, ಜನರಿಗಾಗಿ, ಜನರಿಗೋಸ್ಕರ, ಜನಪದ ಕಾವ್ಯಗಳು, ಕಲಾವಿದರು ಮುಖ್ಯ ಭೂಮಿಕೆಯಿಂದ ಮರೆಯಾಗಿದ್ದಾರೆ, ಹಾಡಿನ ಜೀವ ತೆಗೆಯುವ ರ್ಯಾಪರ್ ಗಳನ್ನು ಪೋಷಿಸುವ ಬದಲು ಪದಗಳಿಗೆ ಜೀವ ತುಂಬಿ ಕಾವ್ಯಗಳನ್ನು ಕಟ್ಟುವ ಜನಪದರನ್ನು ಪ್ರೋತ್ಸಾಹಿಸೋಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಕರಿಯಣ್ಣ ಮಾತನಾಡಿ, ಕರ್ನಾಟಕದ ಸಂಸ್ಕೃತಿಯನ್ನು ಪರಿಭಾವಿಸಿಕೊಂಡಿರುವ ಬುಡಕಟ್ಟಿನ ನಾಯಕ ಜುಂಜಪ್ಪ ಪಶುಪಾಲಕರ ಆರಾಧ್ಯದೈವ ಎಂದು ತಿಳಿಸಿದರು.
ಜನಪದ ಮಹಾ ಕಾವ್ಯಗಳಲ್ಲಿ ಶೈವ ಪರಂಪರೆ ವಿಷಯದ ಕುರಿತು ವಿಚಾರ ಗೋಷ್ಠಿಗಳು ನಡೆದವು, ಜಾನಪದ ವಿದ್ವಾಂಸ ಡಾ.ಜಿ.ವಿ. ಆನಂದಮೂರ್ತಿ, ವಿಮರ್ಶಕ ಡಾ.ಸುರೇಶ್ ನಾಗಲಮಡಿಕೆ ಹಾಗೂ ವಿದ್ಯಾರ್ಥಿಗಳು ಪ್ರಬಂಧ ಮಂಡಿಸಿದರು.
ವಿವಿಯ ಶ್ರೀಜುಂಜಪ್ಪ ಅಧ್ಯಯನ ಪೀಠದ ಸಂಯೋಜಕ ಡಾ.ಎಸ್.ಶಿವಣ್ಣ ಬೆಳವಾಡಿ, ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನ ಕುಮಾರ್.ಕೆ, ಸಹ ಪ್ರಾಧ್ಯಾಪಕಿ ಡಾ.ಎಚ್.ಆರ್.ರೇಣುಕಾ ಇತರರು ಇದ್ದರು.
Comments are closed.