ದೊಣೆಗಂಗಾ ಕ್ಷೇತ್ರ ಅಭಿವೃದ್ಧಿ ಅಗತ್ಯ: ಸ್ವಾಮೀಜಿ

3

Get real time updates directly on you device, subscribe now.


ಗುಬ್ಬಿ: ಶ್ರೀಸಿದ್ದರಾಮೇಶ್ವರರು ತಲೆಕೆಳಗಾಗಿ ತಪಸ್ಸು ಮಾಡಿರುವ ಈ ಸ್ಥಳವು ಮುಂದಿನ ದಿನದಲ್ಲಿ ಮತ್ತಷ್ಟು ಅಭಿವೃದ್ಧಿಯತ್ತ ಸಾಗಲಿ ಎಂದು ರಂಗಾಪುರ ಮಠದ ಗುರುಪರದೇಶಿ ಕೇಂದ್ರ ಮಹಾ ಸ್ವಾಮೀಜಿ ತಿಳಿಸಿದರು.
ಗುಬ್ಬಿ ಹಾಗೂ ತಿಪಟೂರು ತಾಲೂಕಿನ ಗಡಿಭಾಗದ ಶ್ರೀದೊಣೆಗಂಗಾ ಕ್ಷೇತ್ರದಲ್ಲಿ ಲಕ್ಷ ದೀಪೋತ್ಸವ, ನಿತ್ಯ ದಾಸೋಹ ಭವನದ ಉದ್ಘಾಟನೆ ಹಾಗೂ ಧಾರ್ಮಿಕ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿ, ಇದೊಂದು ಪುಣ್ಯಭೂಮಿಯಾಗಿದ್ದು ಇಂತಹ ಸ್ಥಳದಲ್ಲಿ 12ನೇ ಶತಮಾನದ ಸಿದ್ದರಾಮೇಶ್ವರರು ತಂಗಿ ಲೋಕ ಕಲ್ಯಾಣಕ್ಕಾಗಿ ಉಗ್ರ ತಪಸ್ಸು ಮಾಡಿರುವ ಸ್ಥಳವಾಗಿದೆ, ಮೃತ್ಯುಂಜಯ ದೇಶಿ ಕೇಂದ್ರ ಮಹಾ ಸ್ವಾಮೀಜಿಗಳ ನೇತೃತ್ವದಲ್ಲಿ ಈ ಸ್ಥಳದಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸ ನಡೆಯಲಿ, ಬಂದಂತಹ ಭಕ್ತರಿಗೆ ಒಳಿತಾಗಬೇಕು, ಇಲ್ಲಿನ ಧಾರ್ಮಿಕ ವಿಶೇಷತೆಗಳು ಇಡೀ ನಾಡಿಗೆ ಪ್ರಸರಿಸಲಿ ಎಂದು ಆಶೀರ್ವಚನ ನೀಡಿದರು.

ಗೋಡೆಕೆರೆ ಮಠದ ಮೃತ್ಯುಂಜಯ ದೇಶೀಕೇಂದ್ರ ಮಹಾ ಸ್ವಾಮೀಜಿ ಮಾತನಾಡಿ, ಕಳೆದ ಒಂದುವರೆ ವರ್ಷದ ಹಿಂದೆ ಟ್ರಸ್ಟ್ ನಿರ್ಮಾಣ ಮಾಡಿ ಅದರ ಅಡಿಯಲ್ಲಿ ಕಾರೇಕುರ್ಚಿ ಗ್ರಾಮದ ಸಹಕಾರ ಮತ್ತು ಭಕ್ತರ ಸಹಕಾರದಿಂದ ಕೇವಲ ಒಂದು ವರ್ಷದಲ್ಲಿ ಒಂದು ಕೋಟಿ ವೆಚ್ಚದಲ್ಲಿ ನಿತ್ಯದಾಸೋಹ ಭವನ ನಿರ್ಮಾಣವಾಗಿದ್ದು, ಮುಂದಿನ ದಿನದಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳು ಇಲ್ಲಿ ನಡೆಯಬೇಕಿದೆ, ಬಂದಂತಹ ಭಕ್ತರಿಗೆ ಎಲ್ಲ ಮೂಲಭೂತ ಸೌಲಭ್ಯ ಇಲ್ಲಿ ಸಿಗುವಂತಾಗಬೇಕು, ಹಾಗಾಗಿ ತಮ್ಮೆಲ್ಲರ ಸಹಕಾರ ಶ್ರೀಕ್ಷೇತ್ರದ ಮೇಲೆ ಇರಬೇಕು ಎಂದು ತಿಳಿಸಿದರು.
ಬಳ್ಳಿಕಟ್ಟೆ ಸಿಡ್ಲಿಹಳ್ಳಿ ಮಠದ ಇಮ್ಮಡಿ ಕರಿಬಸವ ದೇಶೀ ಕೇಂದ್ರ ಮಹಾ ಸ್ವಾಮೀಜಿ ಮಾತನಾಡಿ, ಶ್ರೀಸಿದ್ದರಾಮೇಶ್ವರರು ಮಾಡಿದಂತಹ ಸಾಮಾಜಿಕ ಸೇವೆ ಇಂದಿಗೂ ಜೀವಂತವಾಗಿದ್ದು, ತುಮಕೂರು ಜಿಲ್ಲೆಯಲ್ಲಿ ಅವರು ಸಂಚರಿಸುವಂತಹ ಪ್ರತಿಯೊಂದು ಕ್ಷೇತ್ರಗಳು ಪುಣ್ಯಭೂಮಿಯಾಗಿವೆ, ಅಲ್ಲೆಲ್ಲಾ ಪ್ರಸಾದ ನಿಲಯಗಳು ಸೃಷ್ಟಿಯಾಗಿದ್ದು ದಾಸೋಹಕ್ಕೆ ಕೈಕನ್ನಡಿ ಯಾಗಿವೆ, ಸಿದ್ದರಾಮೇಶ್ವರ ತಪೋವನ ಮುಂದಿನ ದಿನದಲ್ಲಿ ಇಡೀ ರಾಜ್ಯದಲ್ಲಿಯೇ ವಿಶೇಷ ಧಾರ್ಮಿಕ ಕ್ಷೇತ್ರವಾಗಿ ಬೆಳೆಯುತ್ತದೆ ಎಂದು ಆಶಿಸಿದರು.

ಕರಡಿ ಗವಿಮಠದ ಶಿವಶಂಕರ ಶಿವಯೋಗಿ ಸ್ವಾಮೀಜಿ ಮಾತನಾಡಿ ಸಿದ್ದರಾಮೇಶ್ವರರು ಈ ಭಾಗಕ್ಕೆ ಬಂದಾಗ ಧರೆಯು ಹತ್ತಿ ಉರಿಯುತ್ತಿತ್ತು, ಅಂತಹ ಸಂದರ್ಭದಲ್ಲಿ ಧರೆಯನ್ನು ತಂಪಾಗಿಸಲು ಗಂಗೆಯನ್ನು ಸೃಷ್ಟಿಸಿದ ಮಹಾನುಭಾವ ಸಿದ್ದರಾಮೇಶ್ವರರು, ಇಂತಹ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ನಡೆಯುತ್ತಿರುವುದು ಖಂಡಿತವಾಗಿಯೂ ಮುಂದಿನ ಶಿವಶರಣರ ನೆಲೆವೀಡಾಗಿ ಕ್ಷೇತ್ರವು ಅಭಿವೃದ್ಧಿಯತ್ತ ಸಾಗುತ್ತದೆ ಎಂದು ತಿಳಿಸಿದರು.

ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾ ಸ್ವಾಮೀಜಿ ನಿತ್ಯ ದಾಸೋಹ ಭವನದ ಉದ್ಘಾಟನೆ ನೆರವೇರಿಸಿದರು, ಲಕ್ಷ ದೀಪೋತ್ಸವ ಸೇರಿದಂತೆ ಸಿದ್ದರಾಮೇಶ್ವರರ ಮೆರವಣಿಗೆ ಮಳೆಯ ನಡುವೆಯೂ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಬೆಟ್ಟದಹಳ್ಳಿ ಗವಿಮಠದ ಚಂದ್ರಶೇಖರ ಮಹಾ ಸ್ವಾಮೀಜಿ, ತಮ್ಮಡಿಹಳ್ಳಿಯ ಡಾ.ಅಭಿನವ ಮಲ್ಲಿಕಾರ್ಜುನ ಮಹಾ ಸ್ವಾಮೀಜಿ, ಯಳನಾಡು ಜ್ಞಾನಪ್ರಭು ಸಿದ್ದರಾಮೇಶ್ವರ ಸ್ವಾಮೀಜಿ, ನಂದಿಗುಡಿಯ ಸಿದ್ದರಾಮಯ್ಯ ಶಿವಾಚಾರ್ಯ ಸ್ವಾಮೀಜಿ, ದೊಡ್ಡಗುಣಿ ಹಿರೇಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಗೊಲ್ಲಹಳ್ಳಿಯ ವಿಭವ ವಿದ್ಯಾಶಂಕರ ಮಹಾ ಸ್ವಾಮೀಜಿ, ಟ್ರಸ್ಟ್ ಕಾರ್ಯದರ್ಶಿ ಕಾರೇ ಕುರ್ಚಿ ಸತೀಶ್, ಮುಖಂಡರಾದ ಎಸ್.ಡಿ.ದಿಲೀಪ್ ಕುಮಾರ್, ಚಂದ್ರಶೇಖರ ಬಾಬು, ನಿಟ್ಟೂರು ಪ್ರಕಾಶ್, ಸಾಗರನಹಳ್ಳಿ ವಿಜಯ್ ಕುಮಾರ್ ಸೇರಿದಂತೆ ಸಾವಿರಾರು ಭಕ್ತರು, ಟ್ರಸ್ಟ್ ನ ಎಲ್ಲಾ ಸದಸ್ಯರು ಪದಾಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!