ಕುಣಿಗಲ್: ತಾಲೂಕಿನಲ್ಲಿ ಬಿಜೆಪಿ- ಜೆಡಿಎಸ್ ಒಂದಾಗದಂತೆ ಈಗಲೂ ಕಾರ್ಯಕರ್ತರಲ್ಲಿ ಹುಳಿ ಹಿಂಡುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ, ಕಾರ್ಯಕರ್ತರು ಇಂತಹ ವಿಷಯಗಳ ಬಗ್ಗೆ ಗಮನ ಹರಿಸದೆ ಪಕ್ಷ ಎಲ್ಲಾ ಹಂತದಲ್ಲೂ ಅಧಿಕಾರ ಗಳಿಸುವ ನಿಟ್ಟಿನಲ್ಲಿ ಶ್ರಮಿಸಬೇಕೆಂದು ಮಾಜಿ ಸಚಿವ, ಜೆಡಿಎಸ್ ತಾಲೂಕು ವರಿಷ್ಠ ಡಿ.ನಾಗರಾಜಯ್ಯ ಹೇಳಿದರು.
ಬುಧವಾರ ಪಟ್ಟಣದ ಖಾಸಗಿ ಸಮುದಾಯ ಭವನದಲ್ಲಿ ತಾಲೂಕು ಜೆಡಿಎಸ್ ವತಿಯಿಂದ ಹಮ್ಮಿಕೊಳ್ಳಲಾದ ಸಹಕಾರ ರತ್ನ ಪ್ರಶಸ್ತಿ ವಿಜೇತ ಕಾಮನಹಳ್ಳಿ ರಾಮಣ್ಣನವರ ಅಭಿನಂದನೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಸಹಕಾರ ರಂಗದಲ್ಲಿ ಹಿಂದೆ ಇದ್ದಂತಹ ನ್ಯಾಯ, ನೀತಿ, ತತ್ವ, ಸಿದ್ಧಾಂತ, ನಿಯಮಗಳು ಈಗ ಕಡಿಮೆಯಾಗುತ್ತಾ ರಾಜಕಾರಣ ಹೆಚ್ಚಾಗುತ್ತಿರುವುದು ಖೇದಕರ, ಕನಕಪುರ ಧಣಿಗಳು ತಾಲೂಕಿಗೆ ಕಾಲಿಟ್ಟ ಮೇಲೆ ರಾಜಕಾರಣ ಕ್ಷೇತ್ರವಲ್ಲದೆ ಸಹಕಾರ ಕ್ಷೇತ್ರದಲ್ಲೂ ತೀವ್ರ ಹಸ್ತಕ್ಷೇಪ ಮಾಡುತ್ತಾ ಸಹಕಾರ ಸಂಘಗಳ ಸಿದ್ಧಾಂತವನ್ನೆ ಬುಡಮೇಲು ಮಾಡಲು ಹೊರಟಿದ್ದಾರೆ, ಲೋಕಸಭೆ ಚುನಾವಣೆ ನಂತರ ಜೆಡಿಎಸ್- ಬಿಜೆಪಿ ಮೈತ್ರಿ ಮುಂದಿನ ಚುನಾವಣೆಗೂ ಮುಂದುವರೆಯಲಿದೆ, ತಾವು ಡಿ.ಕೃಷ್ಣಕುಮಾರ್ ಒಂದಾಗಿದ್ದು ಇದನ್ನು ಸಹಿಸದ ಕಾಂಗ್ರೆಸ್ ನ ಶಾಸಕರು ಸೇರಿದಂತೆ ಕನಕಪುರ ಧಣಿಗಳು ನಮ್ಮ ಒಗ್ಗಟ್ಟು ಮರಿಯಲು ಇನ್ನು ಪ್ರಯತ್ನ ನಡೆಸುತ್ತಲೆ ಇದ್ದಾರೆ
ಎಂದರು.
ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ವೆಂಕಟೇಗೌಡ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ರಾಜಕಾರಣ ಇರಬಾರದು, ರಾಜಕಾರಣದಲ್ಲಿ ಸಹಕಾರ ಇರಬೇಕೆಂಬುದು ಸಹಕಾರ ಸಚಿವರಾದ ರಾಜಣ್ಣನವರ ಚಿಂತನೆ, ಅವರು ಸಹಕಾರ ಕ್ಷೇತ್ರವನ್ನು ರಾಜಕೀಯ ಹೊರತಾಗಿ ನೋಡುತ್ತಾರೆ, ಅವರ ಈ ಧೋರಣೆಯಿಂದಾಗಿಯೆ ಜೆಡಿಎಸ್ ಪಕ್ಷದವರಾದ ಹಿರಿಯ ಸಹಕಾರಿ ರಾಮಣ್ಣನವರಿಗೆ ಸಹಕಾರ ರತ್ನ ಪ್ರಶಸ್ತಿ ಸಿಕ್ಕಿದೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಶಿವಣ್ಣ ಮಾತನಾಡಿ, ಸಹಕಾರ ಸಚಿವ ರಾಜಣ್ಣನವರು ಸಹಕಾರ ರಂಗದಲ್ಲಿ ರಾಜಕೀಯ ಹೊರತಾಗಿ ಕಾರ್ಯಕ್ರಮ ರೂಪಿಸಿ ಅನುಷ್ಠಾನ ಮಾಡುವ ಮೂಲಕ ತಮ್ಮದೆ ಆದ ಛಾಪು ಮೂಡಿಸಿದ್ದಾರೆ, ತಾಲೂಕಿನಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಮುಂದುವರೆಯುವಲ್ಲಿ ಎರಡೂ ಪಕ್ಷದ ಕಾರ್ಯಕರ್ತರು ಸಮಾನ ಮನಸ್ಕರಾಗಿ ಶ್ರಮಿಸಬೇಕಿದೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ಡಾ.ರವಿ ಮಾತನಾಡಿ, ಸಹಕಾರ,ರಾಜಕಾರಣ ಈ ಎರಡೂ ಕ್ಷೇತ್ರದಲ್ಲೂ ಜನಪರವಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ವ್ಯಕ್ತಿ ಯಶಸ್ವಿಯಾಗುತ್ತಾನೆ, ಇಂದಿನ ಯುವ ರಾಜಕಾರಣಿಗಳು ಈ ನಿಟ್ಟಿನಲ್ಲಿ ಅರಿತುಕೊಳ್ಳಬೇಕು, ತಾಲೂಕಿನಲ್ಲಿ ಮೈತ್ರಿ ಧರ್ಮ ಪಾಲನೆ ಮಾಡುವ ನಿಟ್ಟಿನಲ್ಲಿ ಹಾಲು ಒಕ್ಕೂಟದ ಚುನಾವಣೆಯಲ್ಲಿ ಎರಡೂ ಪಕ್ಷ ಶ್ರಮಿಸಿದೆ, ಚುನಾವಣೆ ಎದುರಿಸಲಾಗದ ಕಾಂಗ್ರೆಸ್ ವಾಮ ಮಾರ್ಗದ ಮೂಲಕ ಅಧಿಕಾರ ಹಿಡಿಯಲು ಹೈಕೋರ್ಟ್ ಮೆಟ್ಟಿಲೇರಿದೆ ಎಂದರು. ಅಭಿನಂದನೆ ಸ್ವೀಕರಿಸಿ ಕಾಮನಹಳ್ಳಿ ರಾಮಣ್ಣ ಮಾತನಾಡಿದರು, ತಾಲೂಕು ಜೆಡಿಎಸ್ ಅಧ್ಯಕ್ಷ ಜಗದೀಶ್, ಪ್ರಮುಖರಾದ ಕೆಎಲ್.ಹರೀಶ, ಕಲ್ಲನಾಯಕನಹಳ್ಳಿ ಶಿವಣ್ಣ, ಮಹಾರಾಷ್ಟ್ರ ಶಿವಣ್ಣ, ವರದರಾಜು, ಪ್ರಕಾಶ, ಮಾರುತಿ, ವಸಂತ, ಅಕ್ಕಿಮರಿ ಪಾಳ್ಯಹೇಮರಾಜು, ಹರೀಶ್ ನಾಯ್ಕ, ಜಯಣ್ಣ, ಹುಲಿಪುರ ನಾರಾಯಣ, ಗಿರೀಶ್, ಗಂಗಾಧರ, ಕೃಷ್ಣೇಗೌಡ, ರಂಗಧಾಮಯ್ಯ ಇತರರು ಇದ್ದರು.
Comments are closed.