ಜಗತ್ತಿಗೆ ಯೋಗ ಹೇಳಿಕೊಟ್ಟದ್ದು ಭಾರತ

ಕಾನೂನು ವಿಶ್ವ ವಿದ್ಯಾಲಯದ ಅಂತರ ಕಾಲೇಜು ಯೋಗಾಸನ ಸ್ಪರ್ಧೆ

4

Get real time updates directly on you device, subscribe now.


ತುಮಕೂರು: ಜಗತ್ತಿಗೆ ಯೋಗ ಹೇಳಿಕೊಟ್ಟವರು ಭಾರತೀಯರು, ಆದರೆ ಇಂದು ಪ್ರಪಂಚದಲ್ಲಿ ಯೋಗ ಅಭ್ಯಾಸವಿಲ್ಲದ ದೇಶಗಳೇ ಇಲ್ಲ, ಇದು ಭಾರತೀಯರೆಲ್ಲರೂ ಹೆಮ್ಮೆ ಪಡುವ ವಿಚಾರ ಎಂದು ಯೋಗ ಗುರು ಡಾ.ಎಂ.ಕೆ.ನಾಗರಾಜರಾವ್ ತಿಳಿಸಿದ್ದಾರೆ.
ನಗರದ ವಿದ್ಯೋದಯ ಕಾನೂನು ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾಲಯದ ಅಂತರ ಕಾಲೇಜು ಯೋಗಾಸನ ಸ್ಪರ್ಧೆ ಹಾಗೂ ರಾಜ್ಯ ತಂಡದ ಆಯ್ಕೆ ಪ್ರಕ್ರಿಯೆಗೆ ದೀಪ ಬೆಳಗುವ ಮೂಲಕ ಚಾಲನೆ ನೀಡಿ ಮಾತನಾಡಿ, ಒಂದು ಸಮೀಕ್ಷೆಯ ಪ್ರಕಾರ 2028ನೇ ವರ್ಷದ ವೇಳೆಗೆ ಜಗತ್ತಿನಲ್ಲಿ 18 ಮಿಲಿಯನ್ ಯೋಗ ಮ್ಯಾಟ್ ಗಳು ಮಾರಾಟವಾಗಲಿವೆ ಎಂಬ ನಿರೀಕ್ಷೆಯಿದೆ ಎಂದರು.

ಯೋಗ ಎನ್ನುವಂತಹದ್ದು ಅನುಭವಿಸಿ ಮಾಡುವ ಒಂದು ದೈಹಿಕ ಚಟುವಟಿಕೆ, ಯೋಗಕ್ಕೆ ಭಾರತವೇ ತವರೂರಾದರೂ ವಿದೇಶಗಳ ರೀತಿ ಶಿಸ್ತು ಮತ್ತು ಶಾಸ್ತ್ರೀಯ ಬದ್ದ ಅಭ್ಯಾಸ ನಮ್ಮಲ್ಲಿ ಕಡಿಮೆಯಾಗಿದೆ, ಇದು ಭಾರತೀಯರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ವಿಚಾರವಾಗಿದೆ, ಯೋಗವನ್ನು ಒಂದು ಚಿಕಿತ್ಸೆ,ಔಷಧಿ ಎನ್ನುವ ರೀತಿಯಲ್ಲಿ ನೋಡುವ ಬದಲು ಒಂದು ಜೀವನ ಕ್ರಮವಾಗಿ ಅಳವಡಿಸಿಕೊಂಡರೆ ಹೆಚ್ಚಿನ ಉಪಯೋಗವಾಗಲಿದೆ, 45 ವರ್ಷದ ನಂತರ ಒಂದಿಲ್ಲೊಂದು ರೋಗವಿಲ್ಲ ಎಂದು ಹೇಳುವ ಮನುಷ್ಯರು ಅಪರೂಪವಾಗಿದ್ದಾರೆ, ಯೋಗ ಮನುಷ್ಯನಿಗೆ ಸರ್ವತೋಮುಖ ಮತ್ತು ಸಂಪೂರ್ಣ ಆರೋಗ್ಯ ನೀಡುವ ಕ್ರಮ ಎಂದು ಡಾ.ಎಂ.ಕೆ.ನಾಗರಾಜರಾವ್ ನುಡಿದರು.

ಪತಂಜಲಿ ಯೋಗ ಕೇಂದ್ರದ ಮುಖ್ಯಸ್ಥ ಆರ್.ಎ.ಸುರೇಶ್ ಕುಮಾರ್ ಮಾತನಾಡಿ, ಒತ್ತಡದ ಜೀವನದಿಂದ ಮುಕ್ತರಾಗಿ ದೈಹಿಕ ಮತ್ತು ಮಾನಸಿಕ ಸಮತೋಲನಕ್ಕೆ ಯೋಗ ಸಹಕಾರಿಯಾಗಿದೆ, ಇದೊಂದು ವಿಶಿಷ್ಟ ಜೀವನ ಕ್ರಮವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯೋಗ ಗುರು ಹಾಗೂ ವಿದ್ಯೋದಯ ಪೌಂಢೇಷನ್ ನ ಸಿಇಓ ಪ್ರೊ.ಕೆ.ಚಂದ್ರಣ್ಣ, ಎರಡು ದಿನಗಳ ಕಾಲ ನಡೆಯುವ ಈ ಯೋಗ ಸ್ಪರ್ಧೆ ರಾಜ್ಯಮಟ್ಟದ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಎಲ್ಲರೂ ಸಕ್ರಿಯರಾಗಿ ಪಾಲ್ಗೊಂಡು ತಾವು ಪ್ರತಿನಿಧಿಸುವ ಕಾಲೇಜುಗಳಿಗೆ ಒಳ್ಳೆಯ ಹೆಸರು ತರುವಂತೆ ಸಲಹೆ ನೀಡಿದರು.

ವಿದ್ಯೋದ್ಯಯ ಕಾನೂನು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕಿಶೋರ್.ವಿ. ಮಾತನಾಡಿ, ರಾಜ್ಯದ 20 ಕ್ಕೂ ಹೆಚ್ಚು ಕಾನೂನು ಕಾಲೇಜುಗಳ 150ಕ್ಕೂ ಹೆಚ್ಚು ಯೋಗಪಟುಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಇಲ್ಲಿ ಉತ್ತಮ ಪ್ರದರ್ಶನ ನೀಡಿದವರು ಒರಿಸ್ಸಾದಲ್ಲಿ ನಡೆಯುವ ರಾಷ್ಟ್ರಮಟ್ಟದ ಅಂತರ ವಿವಿ ಯೋಗ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆಯುತ್ತಾರೆ ಎಂದರು.

ವೇದಿಕೆಯಲ್ಲಿ ವಿದ್ಯೋದಯ ಪೌಂಢೇಷನ್ ನ ಮ್ಯಾನೇಜಿಂಗ್ ಟ್ರಸ್ಟಿ ಹೆಚ್.ಎಸ್.ರಾಜು, ವಿದ್ಯೋದ್ಯಯ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಶಮ ಸೈಯಿದ್, ಐಕ್ಯೂಎಸಿ ಸಂಚಾಲಕ ಕುಮಾರ್.ಎನ್.ಹೆಚ್, ವಿದ್ಯೋದಯ ಕಾನೂನು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕಿಶೋರ್.ವಿ, ಸಹಾಯಕ ಪ್ರಾಧ್ಯಾಪಕಿತಿ ಪುಷ್ಪ.ಕೆ.ಎಸ್, ಟ್ರಸ್ಟಿ ಕೃಷ್ಣಯ್ಯ ಮತ್ತಿತರರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!