ಶಿರಾ: ಮನುಕುಲಕ್ಕೆ ಕಂಟಕವಾಗಿರುವ ಏಡ್ಸ್ ರೋಗ ತಡೆಗಟ್ಟಲು ಎಲ್ಲರೂ ಕೈಜೋಡಿಸಬೇಕು, ಒಮ್ಮೆ ಏಡ್ಸ್ ರೋಗ ಬಂದರೆ ಅದನ್ನು ಗುಣಪಡಿಸುವುದು ಕಷ್ಟ, ಆದ್ದರಿಂದ ಏಡ್ಸ್ ರೋಗ ಬಾರದಂತೆ ಜಾಗೃತಿ ವಹಿಸುವುದು ಸೂಕ್ತ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಸಿದ್ದೇಶ್ ಹೇಳಿದರು.
ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ವಿಶ್ವ ಏಡ್ಸ್ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಏಡ್ಸ್ ರೋಗ ಮೂಲ ಕಾರಣವಾದ ಎಚ್ ಐವಿ ವೈರಸ್ ನಿಂದ ಮನುಷ್ಯರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಂಟಿತವಾಗುತ್ತದೆ, ಅಸುರಕ್ಷಿತ ಲೈಂಗಿಕ ಸಂಪರ್ಕ ಮತ್ತು ಏಡ್ಸ್ ರೋಗಿ ರಕ್ತ ದೇಹವನ್ನು ನೇರವಾಗಿ ಸೇರಿದಲ್ಲಿ ರೋಗ ಹರಡುತ್ತದೆಯೇ ವಿನಃ ಏಡ್ಸ್ ಸೋಂಕಿತರ ಆಲಿಂಗನ, ಸೊಳ್ಳೆ ಕಡಿತ ಅಥವಾ ಅವರೊಂದಿಗೆ ಆಹಾರ ಸೇವಿಸುವುದರಿಂದ ಹರಡುವುದಿಲ್ಲ ಎಂದರು.
ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಶ್ರೀನಾಥ್ ಮಾತನಾಡಿ, ಎಚ್ ಐವಿ ಸೋಂಕು ಶೇ.87 ಕ್ಕಿಂತಲೂ ಹೆಚ್ಚು ಅಸುರಕ್ಷಿತ ಲೈಂಗಿಕ ಸಂಬಂಧದ ಮೂಲಕ ಹರಡುತ್ತದೆ, ಎಚ್ಐವಿ ಸೋಂಕಿತ ರಕ್ತ ಪರೀಕ್ಷಿಸದೆ ಪಡೆಯುವುದರಿಂದ, ಎಚ್ ಐವಿ ಸೋಂಕಿತ ಸೂಜಿ, ಸಿರಿಂಜುಗಳನ್ನು ಸಂಸ್ಕೃರಿಸದೇ ಬಳಸುವುದು, ಗರ್ಭಾವಸ್ಥೆಯಲ್ಲಿ ಪ್ರಸವದ ಸಂದರ್ಭದಲ್ಲಿ ಬಳಸುವ ಸಲಕರಣೆಗಳು, ಸೋಂಕಿರುವ ತಾಯಿಯ ಎದೆ ಹಾಲು ಉಪಯೋಗಿಸುವುದರಿಂದ ಕಾಯಿಲೆ ಹರಡುತ್ತದೆ ಎಂದರು.
ಈ ಸಂದರ್ಭದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಡಿ.ಎಂ.ಗೌಡ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕೆ.ಎನ್.ರಮೇಶ್, ಎಆರ್ ಟಿ ವೈದ್ಯಾಧಿಕಾರಿ ಡಾ.ಯೋಗೀಶ್, ಆಪ್ತ ಸಮಾಲೋಚಕರಾದ ಬರಗೂರಪ್ಪ.ಆರ್, ಮಧು. ಕೆ.ಆರ್ ಸೇರಿದಂತೆ ಹಲವರು ಹಾಜರಿದ್ದರು.
Comments are closed.