ಎಕ್ಸ್ ಪ್ರೆಸ್ ಕೆನಾಲ್ ವಿರುದ್ಧ ಮೈತ್ರಿ ಪಕ್ಷಗಳ ಹೋರಾಟ

11

Get real time updates directly on you device, subscribe now.


ತುಮಕೂರು: ಜಿಲ್ಲೆಯ ರೈತರ ಬದುಕಿಗೆ ಮರಣ ಶಾಸನವಾಗಲಿರುವ ಹಾಗೂ ಜಿಲ್ಲೆಯಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಟಿ ಮಾಡಲಿರುವ ಅವೈಜ್ಞಾನಿಕ ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ಯೋಜನೆ ವಿರೋಧಿಸಿ ನಮ್ಮ ನೀರು- ನಮ್ಮ ಹಕ್ಕು ಹೆಸರಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಎನ್ ಡಿಎ ಮಿತ್ರ ಪಕ್ಷಗಳ ನೇತೃತ್ವದಲ್ಲಿ ಈ ತಿಂಗಳ 7 ಮತ್ತು 8ರಂದು ಬೃಹತ್ ಪ್ರತಿಭಟನಾ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಎನ್ ಡಿಎ ಮಿತ್ರ ಪಕ್ಷಗಳಾದ ಬಿಜೆಪಿ, ಜೆಡಿಎಸ್ ನಾಯಕರು ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ಯೋಜನೆ ಬಗ್ಗೆ ಹಟಮಾರಿ ಧೋರಣೆ ಅನುಸರಿಸುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದರು.
ಗ್ರಾಮಾಂತರ ಕ್ಷೇತ್ರ ಶಾಸಕ ಬಿ.ಸುರೇಶ್ ಗೌಡ ಮಾತನಾಡಿ, ಎಕ್ಸ್ ಪ್ರೆಸ್ ಕೆನಾಲ್ ವಿಚಾರದಲ್ಲಿ ಉಂಟಾಗಿರುವ ಹೇಮಾವತಿ ನೀರಿನ ಗೊಂದಲವನ್ನು ಸರ್ಕಾರ ನಿವಾರಣೆ ಮಾಡಬೇಕು, ಇತ್ತೀಚೆಗೆ ನಗರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಈ ಬಗ್ಗೆ ಮನವರಿಕೆ ಮಾಡಿದ್ದೆವು ಎಂದರು.

ಹಲವು ಮುಖಂಡರ ಹೋರಾಟದ ಫಲವಾಗಿ ಜಿಲ್ಲೆಗೆ ಹೇಮಾವತಿ ನೀರು ಬಂದಿದೆ, ಎಕ್ಸ್ ಪ್ರೆಸ್ ಕೆನಾಲ್ ಮೂಲಕ ಈ ನೀರನ್ನು ಕಸಿಯುವ ಪ್ರಯತ್ನಕ್ಕೆ ಅವಕಾಶ ಮಾಡಿಕೊಡುವುದಿಲ್ಲ, ಹೋರಾಟ ನಿಲ್ಲುವುದಿಲ್ಲ, ಹೋರಾಟದಲ್ಲಿ ಪ್ರಾಣಹಾನಿ, ಕಾನೂನು ಸುವ್ಯವಸ್ಥೆ ಹಾಳಾದರೆ ಅದಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳೇ ಹೊಣೆ ಎಂದು ಎಚ್ಚರಿಸಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ನಿಂದ ಜಿಲ್ಲೆಯ ಕುಡಿಯುವ ನೀರಿಗೆ ದೊಡ್ಡಮಟ್ಟದ ತೊಂದರೆಯಾಗುತ್ತದೆ, ನೀರು ತೆಗೆದುಕೊಂಡು ಹೋಗಲು ಭಾರಿ ಗಾತ್ರದ ಪೈಪ್ ಗಳನ್ನು ಬಳಸಿದರೆ ನಮಗೆ ಹನಿ ನೀರೂ ಉಳಿಯುವುದಿಲ್ಲ, ಎಕ್ಸ್ ಪ್ರೆಸ್ ಕೆನಾಲ್ ಯೋಜನೆ ಆಗಲು ಬಿಡುವುದಿಲ್ಲ, ಈ ಬಗ್ಗೆ ಅಧಿವೇಶನದಲ್ಲೂ ಹೋರಾಟ ಮಾಡುವುದಾಗಿ ಹೇಳಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಮಾತನಾಡಿ, ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಜಿಲ್ಲೆಯ ಜನರಿಗೆ, ರೈತರಿಗೆ ಮರಣ ಶಾಸನವಾಗಲಿದೆ, ನಮ್ಮ ನೀರಿನ ಹಕ್ಕನ್ನು ಕಸಿಯುವ ಈ ಯೋಜನೆಗೆ ಜಿಲ್ಲೆಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದೆ, ಬಿಜೆಪಿ ಹಾಗೂ ಜೆಡಿಎಸ್ ಮುಂದಾಳತ್ವದಲ್ಲಿ ಜಿಲ್ಲೆಯ ವಿವಿಧ ಮಠಾಧೀಶರು, ರೈತರೊಂದಿಗೆ ಇದೇ 7ರಂದು ಬೆಳಗ್ಗೆ 10.30ಕ್ಕೆ ಗುಬ್ಬಿ ತಾಲ್ಲೂಕು ಸಾಗರನಹಳ್ಳಿ ಬಳಿಯ ಹೇಮಾವತಿ ನಾಲೆ ಗೇಟ್ ಬಳಿಯಿಂದ ಡಿಸಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
7ರಂದು ಮಧ್ಯಾಹ್ನ ಗುಬ್ಬಿ ಬಸ್ ನಿಲ್ದಾಣದಲ್ಲಿ ಪ್ರತಿಭಟನಾ ಸಭೆ ನಡೆಸಿ ಪಾದಯಾತ್ರೆ ಮುಂದುವರೆಸಿ, ಕಳ್ಳಿಪಾಳ್ಯದ ಗೇಟ್ ಬಳಿಯ ಓಂ ಪ್ಯಾಲೇಸ್ ಭವನದಲ್ಲಿ ಪಾದಯಾತ್ರಿಗಳು ರಾತ್ರಿ ತಂಗಿ ಮಾರನೆ ದಿನ ಯಾತ್ರೆ ಮುಂದುವರೆಸುವರು, 8 ರಂದು ಸಂಜೆ ತುಮಕೂರಿನ ಜಿಲ್ಲಾಧಿಕಾರಿ ಕಚೇರಿ ತಲುಪಿ ಸೋಮವಾರದಿಂದ ಅನಿರ್ಧಿಷ್ಟ ಕಾಲ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಹೆಬ್ಬಾಕ ರವಿಶಂಕರ್ ಹೇಳಿದರು.

ಬಿಜೆಪಿ ಮುಖಂಡರಾದ ಎಸ್.ಶಿವಪ್ರಸಾದ್, ದಿಲೀಪ್ ಕುಮಾರ್, ಸಾಗರನಹಳ್ಳಿ ವಿಜಯಕುಮಾರ್, ಗಂಗರಾಜು, ಜೆಡಿಎಸ್ ಮುಖಂಡರಾದ ಗುಬ್ಬಿ ನಾಗರಾಜು, ಯೋಗಾನಂದ್, ವಿಜಯ್ ಕುಮಾರ್, ಮುಖಂಡರಾದ ಚಂದ್ರಶೇಖರಬಾಬು, ಟಿ.ಆರ್.ಸದಾಶಿವಯ್ಯ, ಪಂಚಾಕ್ಷರಯ್ಯ, ಜೆ.ಜಗದೀಶ್, ನಿಟ್ಟೂರು ಪ್ರಕಾಶ್ ಮೊದಲಾದವರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!