ತುಮಕೂರು: ಇತಿಹಾಸ ಪ್ರಸಿದ್ದ ಗೂಳೂರು ಗಣೇಶನ ವಿಸರ್ಜನಾ ಮಹೋತ್ಸವ ಡಿಸೆಂಬರ್ 7ರ ಶನಿವಾರ ಮತ್ತು ಡಿಸೆಂಬರ್ 08ರ ಭಾನುವಾರ ಅತಿ ವಿಜೃಂಭಣೆಯಿಂದ ನಡೆಯಲಿದೆ ಎಂದು ಶ್ರೀಮಹಾ ಗಣಪತಿ ಭಕ್ತ ಮಂಡಳಿಯ ಅಧ್ಯಕ್ಷ ಗೂಳೂರು ಶಿವಕುಮಾರ್ ತಿಳಿಸಿದ್ದಾರೆ.
ಬಲಿಪಾಢ್ಯಮಿಯ ದಿನ ಸ್ಥಾಪಿಸಲಾಗುವ ಗಣೇಶ ಮೂರ್ತಿಗೆ ಕಾರ್ತಿಕ ಮಾಸದಲ್ಲಿ 1 ತಿಂಗಳ ಕಾಲ ಪ್ರತಿನಿತ್ಯ ವಿಶೇಷ ಪೂಜಾ ಕೈಂಕರ್ಯದೊಂದಿಗೆ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಬೃಹತ್ ಗಣೇಶ ಮೂರ್ತಿಗೆ ವಿಶೇಷ ಐತಿಹ್ಯವಿದ್ದು, 1 ತಿಂಗಳ ಕಾಲ ಗ್ರಾಮದ ಪ್ರತಿಯೊಂದು ಮನೆಯವರು ನಿತ್ಯ ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಕ್ತಿ ಸಮರ್ಪಿಸುವರು, ಪ್ರತಿದಿನ ರಾತ್ರಿ 9 ಗಂಟೆಗೆ ಮಹಾ ಮಂಗಳಾರತಿ ನಡೆಯಲಿದೆ, 18 ಕೋಮಿನವರು ಗೂಳೂರು ಗಣಪನಿಗೆ ವಿವಿಧ ಸೇವೆ ಸಲ್ಲಿ ಸಲಿಸಿ, ವಿಸರ್ಜನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಡಿಸೆಂಬರ್ 07ರ ಶನಿವಾರ ರಾತ್ರಿ ಹತ್ತು ಗಂಟೆಗೆ ವಿದ್ಯುತ್ ಅಲಂಕಾರ ಮತ್ತು ಹೂವಿನಿಂದ ಅಲಂಕೃತಗೊಂಡ ಮಂಟಪದಲ್ಲಿ ಗಣಪತಿ ಪ್ರತಿಷ್ಠಾಪಿಸಿ ಶ್ರೀಮಹಾ ಗಣಪತಿ ಉತ್ಸವವನ್ನು ನಾದಸ್ವರ, ಕರಡಿ ಮಜಲು, ನಾಸಿಕ್ ಡೋಲ್, ಕೇರಳದ ಜಾನಪದ ನೃತ್ಯ, ಮಂಡದ ಕಲಾ ತಂಡದಿಂದ ಕರಡಿ ವಾಧ್ಯ, ನಾಸಿಕ್ ಡೋಲ್, ಮಹಿಳಾ, ಪುರುಷ ವೀರಗಾಸೆ ತಂಡಗಳು, ಕೀಲು ಕುದುರೆ, ನಂದಿಕೋಲು, ನವಿಲು, ಜಿರಾಫೆ, ಕವಾಡ ನೃತ್ಯ, ಹಾಸ್ಯದ ಚಾರ್ಲಿ ನೃತ್ಯ, ವೀರಭದ್ರ ದೇವರ ಕುಣಿತ, ವೀರಗಾಸೆ, ಡೊಳ್ಳು, ಪೂಜಾ ಕುಣಿತದ ಪ್ರದರ್ಶನದೊಂದಿಗೆ ಗೂಳೂರಿನ ಪ್ರಮುಖ ರಾಜ ಬೀದಿಗಳಲ್ಲಿ ಗಣಪತಿಯ ಉತ್ಸವ ನಡೆಯಲಿದೆ.
ವಿಶೇಷ ಆಕರ್ಷಣೆಯಾಗಿ ಗೂಳೂರಿನ ಪಾರ್ಥ ಸಾರಥಿ ಅವರಿಂದ ಚಿತ್ರದುರ್ಗದ ಮದಕರಿ ನಾಯಕನ ವೇಷ ಹಾಗೂ ಕುಮಟ ನಾಯಕ ಅವರ ಕುಟುಂಬದಿಂದ ಪಾಳೇಗಾರರ ವೇಷದ ಪ್ರದರ್ಶನ ನಡೆಲಿದೆ ಎಂದರು.
ಡಿಸೆಂಬರ್ 08ರ ಭಾನುವಾರ ಮಧ್ಯಾಹ್ನದಿಂದ ಗ್ರಾಮದ ಮಧ್ಯ ಭಾಗದಿಂದ ಶ್ರೀಮಹಾ ಗಣಪತಿಯ ಉತ್ಸವ ಆರಂಭಗೊಂಡು ಸಂಜೆ ಐದು ಗಂಟೆಯವರೆಗೆ ಗ್ರಾಮದಲ್ಲಿ ಮರೆವಣಿಗೆ ನಡೆಸಿ ಸಕಲ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಗೂಳೂರು ಕೆರೆಯಲ್ಲಿ ಗಣಪತಿಯ ವಿಸರ್ಜನೆ ಮಾಡಲಾಗುವುದು, ವಿಸರ್ಜನೆ ವೇಳೆ ನುರಿತ ಸಿಡಿಮದ್ದು ಸಿಡಿಸುವ ಕೆಲಸಗಾರರಿಂದ 500 ಅಡಿ ಉದ್ದದ ಜೋಗ್ ಪಾಲ್ಸ್, ನೂರು ಬಾರಿ ಒಡೆಯುವ ಔಟ್ಸ್ ಹಾಗೂ ಪ್ಯಾರಚೂಟ್ ಗಳ ಪ್ರದರ್ಶನ ಏರ್ಪಡಿಸಲಾಗಿದೆ, ಗ್ರಾಮಸ್ಥರು, ದಾನಿಗಳ ಸಹಕಾರದಿಂದ ಒಂದು ತಿಂಗಳ ಕಾಲ ಪೂಜಿಸಲಾದ ಗಣಪತಿಯ ವಿಸರ್ಜನೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಭಕ್ತರಲ್ಲದೆ ಹೊರ ರಾಜ್ಯದ ಭಕ್ತರು ಪಾಲ್ಗೊಳ್ಳುವುದು ವಾಡಿಕೆ.
ಡಿಸೆಂಬರ್ 09ರ ಸೋಮವಾರ ಶ್ರೀಮಹಾ ಗಣಪತಿ ವಿಸರ್ಜನಾ ಮಹೋತ್ಸವದ ಅಂಗವಾಗಿ ಬೆಳಗ್ಗೆ 11 ಗಂಟೆ ಶ್ರೀಮಹಾ ಗಣಪತಿ ಕೃಪಾಪೋಷಿತ ನಾಟಕ ಮಂಡಳಿಯಿಂದ ಕರುಕ್ಷೇತ್ರ ನಾಟಕದ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ, ಸಾರ್ವಜನಿಕರು, ಗಣಪತಿಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗಣಪತಿ ವಿಸರ್ಜನಾ ಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ಮಹಾ ಗಣಪತಿ ಭಕ್ತ ಮಂಡಳಿಯ ಅಧ್ಯಕ್ಷ ಗೂಳೂರು ಶಿವಕುಮಾರ್ ಮನವಿ ಮಾಡಿದ್ದಾರೆ.
Comments are closed.