ಫಲಾನುಭವಿಗಳಿಗೆ ಸಾಲ ಸೌಲಭ್ಯ ಒದಗಿಸಿ

ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶುಭಾಕಲ್ಯಾಣ್ ಸೂಚನೆ

14

Get real time updates directly on you device, subscribe now.


ತುಮಕೂರು: ಸಮಾಜ ಕಲ್ಯಾಣ ಇಲಾಖೆ ಅನುಷ್ಠಾನ ಮಾಡುವ ನೇರ ಸಾಲ, ಸ್ವಾವಲಂಬಿ ಸಾರಥಿ ಸೇರಿದಂತೆ ಹಲವಾರು ಯೋಜನೆಗಳಡಿ ಸಾಲ ಸೌಲಭ್ಯಕ್ಕಾಗಿ ಆಯ್ಕೆಯಾದ ಫಲಾನುಭವಿಗಳಿಗೆ ನಿಗಧಿತ ಕಾಲಾವಧಿಯೊಳಗೆ ಸಾಲ ಸೌಲಭ್ಯ ಒದಗಿಸಲು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯದ ಫಲಾನುಭವಿಗಳಿಗೆ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಕಲ್ಪಿಸಲು ಗುರುವಾರ ಜರುಗಿದ ಆಯ್ಕೆ ಸಮಿತಿ ಸಭೆಯಲ್ಲಿ ಫಲಾನುಭವಿಗಳ ಆಯ್ಕೆ ಮಾಡಿದ ನಂತರ ಮಾತನಾಡಿ, 2023- 24ನೇ ಆರ್ಥಿಕ ಸಾಲಿನಿಂದ ಬಾಕಿಯಿದ್ದ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಗಿದ್ದು, ಸರ್ಕಾರ ನಿಗದಿಪಡಿಸಿರುವ ಭೌತಿಕ ಗುರಿಯ ಆಧಾರದ ಮೇಲೆ ಪಾರದರ್ಶಕವಾಗಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ಮಾತನಾಡಿ, ಕೇಂದ್ರ ಕಚೇರಿ ನೀಡಿರುವ ಮಾನದಂಡಗಳನ್ವಯ ವಿವಿಧ ಯೋಜನೆಗಳಡಿ 112 ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ, ಈ ಆಯ್ಕೆ ಸಮಿತಿಯಲ್ಲಿ ನೇರ ಸಾಲ, ಸ್ವಾವಲಂಬಿ ಸಾರಥಿ, ಉದ್ಯಮಶೀಲತೆ, ಭೂ ಒಡೆತನ, ಪ್ರೇರಣಾ, ಗಂಗಾಕಲ್ಯಾಣ ಯೋಜನೆಗಳಡಿ 2023- 24 ರಿಂದ 2024- 25ನೇ ಸಾಲಿಗಾಗಿ ಫಲಾನುಭವಿಗಳು ಆಯ್ಕೆಯಾಗಿದ್ದು, ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಆಯ್ಕೆಯಾದವರಿಗೆ ನಿಗದಿತ ಸಮಯದೊಳಗೆ ಸಾಲ ಸೌಲಭ್ಯ ಒದಗಿಸಲು ಕ್ರಮವಹಿಸಲಾಗುವುದು ಎಂದು ಸಭೆಗೆ ತಿಳಿಸಿದರು.
ಪರಿಶಿಷ್ಟ ಜಾತಿ ಅಲೆಮಾರಿ ಸಮುದಾಯದಲ್ಲಿ ನೇರಸಾಲ ಯೋಜನೆಯಡಿ-52, ಸ್ವಾವಲಂಭಿ ಸಾರಥಿ ಯೋಜನೆಯಡಿ-9, ಉದ್ಯಮಶೀಲತಾ ಯೋಜನೆಯಡಿ-7, ಭೂ-ಒಡೆತನ ಯೋಜನೆಯಡಿ-3, ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯದಲ್ಲಿ ನೇರಸಾಲ ಯೋಜನೆಯಡಿ-7, ಸ್ವಾವಲಂಭಿ ಸಾರಥಿ ಯೋಜನೆಯಡಿ -6, ಉದ್ಯಮಶೀಲತಾ ಯೋಜನೆಯಡಿ-3, ಭೂ-ಒಡೆತನ ಯೋಜನೆಯಡಿ-2, ಪ್ರೇರಣಾ ಯೋಜನೆಯಡಿ-4, ಗಂಗಾ ಕಲ್ಯಾಣ ಯೋಜನೆಯಡಿ-1, ಮೇದಾರ ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯದಲ್ಲಿ ನೇರಸಾಲ ಯೋಜನೆಯಡಿ-15, ಸ್ವಾವಲಂಬಿ ಸಾರಥಿ ಯೋಜನೆಯಡಿ-2, ಪ್ರೇರಣಾ ಯೋಜನೆಯಡಿ-1 ಫಲಾನುಭವಿಯನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ತ್ಯಾಗರಾಜ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಸಣ್ಣ ಮಸಿಯಪ್ಪ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಮಂಜುನಾಥ್ ಸೇರಿದಂತೆ ಆಯ್ಕೆ ಸಮಿತಿ ಸದಸ್ಯರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!