ತುಮಕೂರು: ದೇಶದ ಆರ್ಥಿಕತೆ ಸುಧಾರಿಸುವುದಕ್ಕೆ ಉತ್ತಮ ಗುಣಾತ್ಮಕ ಶಿಕ್ಷಣವೇ ಆಧಾರ, ಏಕೆಂದರೆ ವಿದ್ಯೆಯು ಒಂದು ರಾಷ್ಟ್ರವನ್ನು ಕಟ್ಟುತ್ತದೆ, ರೂಪಿಸುತ್ತದೆ ಮತ್ತು ಬೆಳೆಸುತ್ತದೆ ಎಂದು ಜಿಲ್ಲಾ ಪಂಚಾಯತ್ ಸಿಇಒ ಪ್ರಭು.ಜಿ. ಹೇಳಿದರು.
ವಿದ್ಯಾನಿಧಿ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ತುಮಕೂರು ಜಿಲ್ಲೆ, ತುಮಕೂರು ಜಿಲ್ಲಾ ವಾಣಿಜ್ಯ ಶಾಸ್ತ್ರ ಉಪನ್ಯಾಸಕರ ವೇದಿಕೆ ಮತ್ತು ವಿದ್ಯಾನಿಧಿ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವ್ಯವಹಾರ ಅಧ್ಯಯನ ಮತ್ತು ಲೆಕ್ಕಶಾಸ್ತ್ರ ವಿಷಯಗಳ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಶಿಕ್ಷಕರ ಪಾತ್ರ ವಿದ್ಯಾರ್ಥಿಗಳ ಬದುಕಿನಲ್ಲಿ ಅತ್ಯಂತ ಮಹತ್ವದ್ದು, ಅವರನ್ನುಉತ್ತಮ ದಾರಿಯಲ್ಲಿ ಮುನ್ನಡೆಸುವ ಹೊಣೆ ಶಿಕ್ಷಕರದ್ದೆ, ಜೀವನ ಮೌಲ್ಯಗಳನ್ನು ಕಲಿಸುವ ಪುಸ್ತಕಗಳನ್ನು ಓದುವ ಹವ್ಯಾಸ ವಿದ್ಯಾರ್ಥಿಗಳದ್ದಾಗಬೇಕು, ಅವರ ಭವಿಷ್ಯ ರೂಪಿಸುವಲ್ಲಿ ಉಪನ್ಯಾಸಕರು ಕಾರ್ಯೋನ್ಮುಖರಾಗಬೇಕು, ನಾವೀನ್ಯತೆ ಶಿಕ್ಷಣದ ಮೂಲ ಉದ್ದೇಶ ಅಗಿರುವುದರಿಂದ ನಿಂತ ನೀರಾಗದಂತೆ ಎಚ್ಚರ ವಹಿಸಬೇಕು ಎಂದು ಕರೆ ನೀಡಿದರು.
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪ ನಿರ್ದೇಶಕ ಡಾ.ಬಾಲಗುರು ಮೂರ್ತಿ ಮಾತನಾಡಿ, ಮುಂದಿನ ಶೈಕ್ಷಣಿಕ ವರ್ಷಗಳಲ್ಲಿ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಸುಧಾರಣೆಯಾಗಲೇ ಬೇಕಿದೆ, ಯಾವುದೇ ನೆಪಗಳನ್ನು ಹುಡುಕದೆ, ಹೆಚ್ಚುವರಿ ತರಗತಿಗಳನ್ನು ತೆಗೆದುಕೊಂಡು ಮಕ್ಕಳ ಕಲಿಕೆ ಧನಾತ್ಮಕವಾಗಿರುವಂತೆ ನೋಡಿಕೊಳ್ಳಿ, ಶಿಕ್ಷಕರು ತಮ್ಮನ್ನು ತಾವು ಓರೆಗೆ ಹಚ್ಚಿಕೊಂಡು ನೋಡಲು ಇರುವ ಅವಕಾಶ ಇದು, ಉತ್ತಮ ಶಿಕ್ಷಣ ಒದಗಿಸಿದರೆ ಭವಿಷ್ಯ ಭದ್ರವಾಗುತ್ತದೆ ಎಂದರು.
ವಿದ್ಯಾವಾಹಿನಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಎನ್.ಬಿ.ಪ್ರದೀಪ್ ಕುಮಾರ್ ಮಾತನಾಡಿ, ನಮ್ಮ ವಿದ್ಯಾರ್ಥಿಗಳನ್ನು ಉದ್ಯೋಗ ಸಮರ್ಥರನ್ನಾಗಿ ಮಾಡಬೇಕೆಂದರೆ ಅವರಲ್ಲಿನ ಕೌಶಲ ವೃದ್ಧಿ ಆಗಬೇಕು, ಅಂತರ್ಜಾಲದ ಮುಖೇನ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶ ದೊರೆಯುತ್ತವೆ, ವೃತ್ತಿಪರ ಕೋರ್ಸ್ಗಳಿಗೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಚ್ಚಿನ ಒತ್ತು ನೀಡುವುದು ಇಂದಿನ ಅಗತ್ಯ ಎಂದು ಹೇಳಿದರು.
ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷ ಪ್ರಭಾಕರರೆಡ್ಡಿ, ಸಂಪನ್ಮೂಲ ವ್ಯಕ್ತಿಗಳಾದ ಕೃಷ್ಣಕುಮಾರ್.ಜಿ.ಸಿ, ನಾರಾಯಣ.ಎಚ್.ಎಸ್, ಮಹಾಬಲೇಶ್ವರ ತುಂಗಾ, ಜಿಲ್ಲಾ ಪ್ರಾಚಾರ್ಯರ ಸಂಘದ ಕೋಶಾಧ್ಯಕ್ಷ ಕೃಷ್ಣಮೂರ್ತಿ.ಜಿ, ಉಪನ್ಯಾಸಕಿ ಆರತಿ ಪಟ್ರಮೆ ಹಾಗೂ ವಿದ್ಯಾನಿಧಿ ಪ್ರಾಂಶುಪಾಲರು ಉಪಸ್ಥಿತರಿದ್ದರು.
Comments are closed.