ಗುಬ್ಬಿ: ತುಮಕೂರು ಜಿಲ್ಲೆಯಲ್ಲಿ ಇರುವುದು ಗಂಡುಗಲಿಗಳು ಅನ್ನೋದನ್ನ ಮರೆಯಬೇಡಿ ಮಿಸ್ಟರ್ ಡಿಕೆಶಿ ಎಂದು ತುರುವೇಕೆರೆ ಕ್ಷೇತ್ರದ ಶಾಸಕ ಎಂ.ಟಿ.ಕೃಷ್ಣಪ್ಪ ಕಿಡಿ ಕಾರಿದರು.
ಗುಬ್ಬಿ ತಾಲೂಕಿನ ಸಾಗರನಹಳ್ಳಿ ಗೇಟಿನಿಂದ ಮಲ್ಲಸಂದ್ರದ ಓಂ ಪ್ಯಾಲೇಸ್ ವರೆಗೆ ಪಾದಯಾತ್ರೆಯಲ್ಲಿ ಸಾವಿರಾರು ರೈತರು, ಹಲವು ಶ್ರೀಗಳು, ಸಂಘಟನೆಯ ಪ್ರಮುಖರು, ಎನ್ ಡಿಎ ಮುಖಂಡರು, ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಕೃಷ್ಣಪ್ಪ, ಡಿ.ಕೆ.ಶಿವ ಕುಮಾರ್ ಅವರೇ, ನೀವು ಅಲ್ಲೇ ಇದ್ರೆ ಮುಖ್ಯಮಂತ್ರಿ ಆಗಲ್ಲ, ನಮ್ಮ ಜೊತೆಗೆ ಬನ್ನಿ ಮುಖ್ಯಮಂತ್ರಿ ಮಾಡುತ್ತೇವೆ, ನಮ್ಮ ನೀರನ್ನು ನೀವು ತೆಗೆದು ಕೊಂಡು ಹೋಗಿ ನಮ್ಮ ಜಿಲ್ಲೆಗೆ ಮರಣ ಶಾಸನ ಬರೆಯಲು ಹೊರಟಿದ್ದೀರಾ, ಇದು ಸರಿಯಲ್ಲ, ಕ್ಯಾಬಿನೆಟ್ ನಲ್ಲಿ ಅಂಗೀಕಾರವಾಗಿದೆ ಎಂದರೆ ಅದೇನು ದೊಡ್ಡ ಮಹತ್ವವಲ್ಲ, ರೈತರ ಬಗ್ಗೆ ಕಾಳಜಿ ನಿಮಗೆ ಇದ್ದರೆ ಮೊದಲು ಅದನ್ನ ರಿಜೆಕ್ಟ್ ಮಾಡಿ ನೇರವಾಗಿ ಅಣೆಕಟ್ಟೆಯಿಂದಲೇ ನೀರು ತೆಗೆದುಕೊಂಡು ಹೋಗುವುದನ್ನ ಮಾಡಬೇಕು ಎಂದು ಒತ್ತಾಯ ಮಾಡಿದರು.
ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ಮಾತನಾಡಿ ನನ್ನ ಶಾಸಕ ಸ್ಥಾನ ಹೋದರು ಪರವಾಗಿಲ್ಲ, ನೀರಾವರಿ ಹೋರಾಟ ಮಾಡಿಯೇ ಮಾಡುತ್ತೇವೆ, ಡಿ.ಕೆ.ಶಿವಕುಮಾರ್ ನಿಮಗೆ ತಾಕತ್ತಿದ್ದರೆ ಇಲ್ಲಿಂದ ನೀರು ತೆಗೆದುಕೊಂಡು ಹೋಗಿ ನೋಡುವ, ರಕ್ತ ಕೊಟ್ಟರು ನೀರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ, ಸಾವಿರಾರು ಜನರು ಇಂದು ಬಂದಿದ್ದೇವೆ, ಮುಂದೆ ಇದೆ ಲಕ್ಷಗಟ್ಟಲೆ ರೈತರು ಹೋರಾಟಕ್ಕೆ ಇಳಿಯುವುದು ಸತ್ಯ ಎಂದು ಕಿಡಿಕಾರಿದರು.
ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ಮಾತನಾಡಿ, ನಾವು ಏನಾದರೂ ಈಗ ಯಾಮಾರಿದರೆ ಖಂಡಿತವಾಗಿ ನಾವು ನಮ್ಮ ನೀರನ್ನ ಉಳಿಸಿಕೊಳ್ಳಲು ಸಾಧ್ಯವಿಲ್ಲ, ಇಂತಹ ಸಂದರ್ಭದಲ್ಲಿ ದೊಡ್ಡ ಹೋರಾಟವೇ ನಮಗೆ ಅಸ್ತ್ರವಾಗಬೇಕು ಎಂದು ತಿಳಿಸಿದರು.
ಚಿಕ್ಕನಾಯಕನ ಹಳ್ಳಿ ಕ್ಷೇತ್ರದ ಶಾಸಕ ಸಿ.ಬಿ.ಸುರೇಶ್ ಬಾಬು ಮಾತನಾಡಿ, ತುಮಕೂರು ಜಿಲ್ಲೆಗೆ ಹರಿಯುತ್ತಿರುವಂತಹ ನೀರನ್ನ ಬೇರೆ ಜಿಲ್ಲೆಗೆ ಹರಿಸುವುದಕ್ಕೆ ಸಾಧ್ಯವೇ ಇಲ್ಲ ಆಡಳಿತವಿದೆಯೆಂದು ರೈತರ ಹಿತ ಕಾಯದೆ ಹೋದರೆ ಮುಂದಿನ ದಿನದಲ್ಲಿ ದೊಡ್ಡ ಸಮಸ್ಯೆ ನೀವೇ ಅನುಭವಿಸುತ್ತೀರಾ ಎಂದು ತಿಳಿಸಿದರು.
ಬಿಜೆಪಿ ಮುಖಂಡ ದಿಲೀಪ್ ಕುಮಾರ್ ಮಾತನಾಡಿ, ಗುಬ್ಬಿ ಶಾಸಕರು ವಾಸಣ್ಣ ಅಲ್ಲ, ಅವರು ಮೋಸಣ್ಣ, ಕ್ಷೇತ್ರವನ್ನೇ ಅಡ ಇಡಲು ಮುಂದಾಗಿದ್ದಾರೆ, ರಾಜಿನಾಮೆ ಕೊಟ್ಟು ಬನ್ನಿ ನಾವೇ ನಿಮ್ಮನ್ನು ಮತ್ತೆ ಅವಿರೋಧವಾಗಿ ಆಯ್ಕೆ ಮಾಡಿ ವಿಧಾನಸೌಧಕ್ಕೆ ಕಳುಹಿಸುತ್ತೇವೆ, ರೈತರ ಮತ ಪಡೆದು ರೈತರಿಗೆ ಅನ್ಯಾಯ ಮಾಡುತ್ತಿರುವ ನೀವು ಶಾಸಕರಾಗಿ ಮುಂದುವರಿಯಬೇಕಾ ಎಂದು ಪ್ರಶ್ನಿಸಿದರು.
ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು, ಬೆಳ್ಳಾವಿಯ ಕಾರದ ವೀರ ಬಸವ ಸ್ವಾಮೀಜಿ, ಗೊಲ್ಲಹಳ್ಳಿ ಮಠದ ವಿಭವ ವಿದ್ಯಾ ಶಂಕರ ಸ್ವಾಮೀಜಿ, ಮಾಜಿ ಶಾಸಕ ಮಸಾಲೆ ಜಯರಾಮ್, ಗೋಡೆಕೆರೆ ಮಠದ ಮೃತ್ಯುಂಜಯ ಮಹಾ ಸ್ವಾಮೀಜಿ, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕ ಲಿಂಗಪ್ಪ, ಎಂಎಲ್ಸಿ ಚಿದಾನಂದ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್, ಜೆಡಿಎಸ್ ಜಿಲ್ಲಾಧ್ಯಕ್ಷ ಆಂಜನಪ್ಪ, ಮುಖಂಡರಾದ ಚಂದ್ರಶೇಖರ ಬಾಬು, ಕಳ್ಳಿ ಪಾಳ್ಯ ಲೋಕೇಶ್, ಹೊನ್ನಗಿರಿ ಗೌಡ, ಕೆ.ಟಿ.ಶಾಂತ ಕುಮಾರ್, ಸಾಗರನ ಹಳ್ಳಿ ವಿಜಯ್ ಕುಮಾರ್, ಪಂಚಾಕ್ಷರಿ, ಪ್ರಕಾಶ್, ಜಿ.ಎನ್.ಬೆಟ್ಟ ಸ್ವಾಮಿ, ಸಿದ್ದಗಂಗಮ್ಮ, ಯೋಗಾನಂದ ಕುಮಾರ್ ಇತರರು ಇದ್ದರು.
Comments are closed.