ಗುಬ್ಬಿ: ತಾಲ್ಲೂಕಿನ ಸುರಿಗೇನಹಳ್ಳಿಯಲ್ಲಿ ಸೋಮವಾರ ಕುರಿ ರೊಪ್ಪಕ್ಕೆ ಚಿರತೆ ನುಗ್ಗಿ 9 ಕುರಿಗಳನ್ನು ಸಾಯಿಸಿದೆ.
ಗ್ರಾಮದ ರೈತ ಕೃಷ್ಣಪ್ಪ ಅವರು ತಮ್ಮ ತೋಟದಲ್ಲಿ ಕುರಿ ರೊಪ್ಪ ನಿರ್ಮಿಸಿ ಸುಮಾರು 30 ಕುರಿ ಸಾಕಿದ್ದರು, ಸೋಮವಾರ ಬೆಳಗ್ಗೆ ಕೊಟ್ಟಿಗೆ ಸ್ವಚ್ಛಗೊಳಿಸಿ ಮನೆಗೆ ಬಂದು ತಿಂಡಿ ತಿಂದು ಕುರಿ ಮೇಯಿಸಲು ಸಿದ್ಧರಾಗಿ ರೊಪ್ಪದ ಬಳಿ ಬಂದಾಗ ಚಿರತೆ ದಾಳಿ ನಡೆಸಿರುವುದು ಕಂಡು ಬಂದಿದೆ.
ತಕ್ಷಣ ಅರಣ್ಯ ಇಲಾಖೆಯವರಿಗೆ ಸುದ್ದಿ ಮುಟ್ಟಿಸಿದ್ದಾರೆ, ಕುರಿ ಸಾಕಾಣಿಕೆಯಿಂದಲೇ ಬದುಕು ಕಟ್ಟಿಕೊಂಡಿದ್ದ ಕೃಷ್ಣಪ್ಪನವರ ಕುಟುಂಬ ಇದರಿಂದ ಸಂಕಷ್ಟಕ್ಕೆ ಸಿಲುಕಿದೆ, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಚಿರತೆ ಸಾಮಾನ್ಯವಾಗಿ ಹಗಲು ವೇಳೆಯಲ್ಲಿ ದಾಳಿ ನಡೆಸುವುದು ಅಪರೂಪ, ಆದರೂ ಆಹಾರಕ್ಕಾಗಿ ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆಯವರು ತಿಳಿಸಿದ್ದಾರೆ.
ದೂರು ದಾಖಲಿಸಿಕೊಂಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ಪಶು ವೈದ್ಯಾಧಿಕಾರಿಗಳನ್ನು ಕರೆಸಿ ಮರಣೋತ್ತರ ಪರೀಕ್ಷೆ ನಡೆಸಿ ಅಗತ್ಯ ಕ್ರಮ ಕೈಗೊಂಡಿದ್ದಾರೆ, ಮರಣೋತ್ತರ ಪರೀಕ್ಷೆ ವರದಿಯ ಆಧಾರದ ಮೇಲೆ ನಿಯಮಾನುಸಾರ ಪರಿಹಾರ ನೀಡಲು ಕ್ರಮ ಕೈಗೊಳ್ಳುವೆವು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ಗ್ರಾಮದ ಸುತ್ತ ಮುತ್ತ ಚಿರತೆಗಳು ಓಡಾಡುತ್ತಿದ್ದು, ಜನತೆಯಲ್ಲಿ ಭೀತಿ ಉಂಟಾಗಿದೆ, ಅರಣ್ಯ ಇಲಾಖೆಯವರು ಆಯಕಟ್ಟಿನ ಜಾಗದಲ್ಲಿ ಬೋನು ಇಟ್ಟು ಚಿರತೆ ಸೆರೆ ಹಿಡಿಯಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Comments are closed.