ಅದ್ದೂರಿಯಾಗಿ ಗೂಳೂರು ಗಣೇಶ ವಿಸರ್ಜನೆ

ವಿಜೃಂಭಣೆಯ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಭಾಗಿ

22

Get real time updates directly on you device, subscribe now.


ತುಮಕೂರು: ಐತಿಹಾಸಿಕ ಪ್ರಸಿದ್ಧ ಗೂಳೂರು ಶ್ರೀಮಹಾ ಗಣಪತಿಯ ವಿಸರ್ಜನಾ ಮಹೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ವೈಭವಯುತವಾಗಿ ನಡೆಯಿತು.
ಬಲಿಪಾಢ್ಯಮಿಯಂದು ಪ್ರತಿಷ್ಠಾಪನೆಯಾಗಿ ಆರಂಭವಾದ ಗೂಳೂರು ಗಣಪನ ಪೂಜಾ ಕೈಂಕರ್ಯ ಕಾರ್ತಿಕ ಮಾಸದಲ್ಲಿ ಸಂಪೂರ್ಣಗೊಂಡು, ಸಕಲ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಗೂಳೂರು ಕೆರೆಯಲ್ಲಿ ವರ್ಣರಂಜಿತ ಸಿಡ್ಡಿಮದ್ದಿನ ಅಬ್ಬರದ ನಡುವೆ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು.
ಎರಡು ದಿನಗಳ ಕಾಲ ನಡೆದ ಗೂಳೂರು ಗಣೇಶ ಜಾತ್ರೆಯಲ್ಲಿ ನಾಡಿನ ವಿವಿಧೆಡೆಗಳಿಂದ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡು ಸ್ವಾಮಿಯ ದರ್ಶನ ಪಡೆದು ಪುನೀತರಾದರು.

ಶನಿವಾರ ಸಂಜೆ 7 ಗಂಟೆಗೆ ಊರಿನ ಯಜಮಾನರ ಮನೆಯಿಂದ ನಂದಿಧ್ವಜ ಮತ್ತು ಕರಡಿ ವಾದ್ಯದೊಂದಿಗೆ ಗಣಪತಿ ದೇವಾಲಯಕ್ಕೆ ಕಳಸ ತಂದು ಮಹಾ ಗಣಪತಿಗೆ ಮಹಾ ಮಂಗಳಾರತಿ ನೆರವೇರಿಸಲಾಯಿತು.
ನಂತರ ಹೊನ್ನೇನಹಳ್ಳಿಯ ಭೋಮಿ ಸಮುದಾಯ ಸೇರಿದಂತೆ ಗ್ರಾಮದ 18 ಕೋಮಿನ ಜನರು ಒಗ್ಗೂಡಿ ಮಹಾ ಗಣಪತಿಯನ್ನು ದೇವಾಲಯದಿಂದ ಹೊರತಂದು ಸರ್ವಾಲಂಕೃತ ವಾಹನದಲ್ಲಿ ಕೂರಿಸಿ ಮಧ್ಯರಾತ್ರಿವರೆಗೂ ಗ್ರಾಮದ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ನಂತರ ಭಾನುವಾರ ಮಧ್ಯಾಹ್ನದಿಂದ ಜಾನಪದ ಕಲಾತಂಡಗಳಾದ ಮಹಾಗಣಪತಿ ಉತ್ಸವವು ನಾದಸ್ವರ, ಕರಡಿ ಮಜಲು, ನಾಸಿಕ್ ಡೋಲ್, ಕೇರಳದ ಜಾನಪದ ನೃತ್ಯ, ಮಂಡದ ಕಲಾ ತಂಡದಿಂದ ಕರಡಿ ವಾದ್ಯ, ಮಹಿಳಾ, ಪುರುಷ ವೀರಗಾಸೆ ತಂಡಗಳು, ಕೀಲು ಕುದುರೆ, ನಂದಿಕೋಲು, ನವಿಲು, ಜಿರಾಫೆ, ಕವಾಡ ನೃತ್ಯ, ಹಾಸ್ಯದ ಚಾರ್ಲಿ ನೃತ್ಯ, ವೀರಭದ್ರ ದೇವರ ಕುಣಿತ, ವೀರಗಸೆ, ಡೊಳ್ಳು, ಪೂಜಾ ಕುಣಿತದ ಪ್ರದರ್ಶನದೊಂದಿಗೆ ಗೂಳೂರಿನ ಪ್ರಮುಖ ರಾಜಬೀದಿಗಳಲ್ಲಿ ಅತ್ಯಂದ ವೈಭವೋಪೇತವಾಗಿ ನಡೆಯಿತು.

ವಿಶೇಷ ಆಕರ್ಷಣೆಯಾಗಿ ಗೂಳೂರಿನ ಪಾರ್ಥ ಸಾರಥಿ ಅವರಿಂದ ಚಿತ್ರದುರ್ಗದ ಮದಕರಿ ನಾಯಕನ ವೇಷ ಹಾಗೂ ಕುಮಟ ನಾಯಕ ಅವರ ಕುಟುಂಬದಿಂದ ಪಾಳೇಗಾರರ ವೇಷದ ಪ್ರದರ್ಶನ ಸಹ ನಡೆದಿದ್ದ ನೆರೆದಿದ್ದ ಭಕ್ತಸಮೂಹದ ಗಮನ ಸೆಳೆಯಿತು.
ಬೆಳಗಿನ ಜಾವ 500 ಅಡಿ ಉದ್ದದ ಜೋಗ್ ಪಾಲ್ಸ್, ನೂರು ಬಾರಿ ಒಡೆಯುವ ಔಟ್ಸ್ ಹಾಗೂ ಪ್ಯಾರಚೂಟ್ ಗಳ ಪ್ರದರ್ಶನ, 4 ಗಂಟೆಗೆ ನಡೆದ ಆಕರ್ಷಕ ವರ್ಣರಂಜಿತ ಸಿಡಿಮದ್ದಿನ ಪ್ರದರ್ಶನ ನೆರೆದಿದ್ದ ಭಕ್ತಾದಿಗಳಲ್ಲಿ ರೋಮಾಂಚನ ಉಂಟು ಮಾಡಿತು.
ಗಣೇಶಮೂರ್ತಿಯ ಮೆರವಣಿಗೆ ಸಾಗಿದ ದಾರಿಯುದ್ದಕ್ಕೂ ಗ್ರಾಮದ ಜನತೆ ಮತ್ತು ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳು ರಸ್ತೆಯ ಇಕ್ಕೆಲಗಳಲ್ಲಿ ಜಮಾಯಿಸಿ ವಿಘ್ನೇಶ್ವರಿಗೆ ಪೂಜೆ ಸಲ್ಲಿಸಿ ಧನ್ಯತೆ ಮೆರೆದರು.

ಅದ್ದೂರಿ ಮೆರವಣಿಗೆಯಲ್ಲಿ ಗೂಳೂರು ಕೆರೆ ಬಳಿ ಸಾಗಿದ ಗಣೇಶ ಮೂರ್ತಿಯನ್ನು ಆಕರ್ಷಕ ಸಿಡ್ಡಿಮದ್ದು ಸಿಡಿಸಿ ಸಂಭ್ರಮಿಸಿದ ನಂತರ ಭಕ್ತಾದಿಗಳ ಹರ್ಷೋದ್ಘಾರದ ನಡುವೆ ಮಹಾ ಗಣಪತಿ ಮೂರ್ತಿಯನ್ನು ಕೆರೆಯಲ್ಲಿ ವಿಸರ್ಜಿಸಲಾಯಿತು.
ಕಳೆದ ಒಂದು ತಿಂಗಳಿನಿಂದಲೂ ಕಾರ್ತಿಕ ಮಾಸದಲ್ಲಿ ಪ್ರತಿನಿತ್ಯ ವಿಶೇಷ ಪೂಜಾ ಕೈಂಕರ್ಯದೊಂದಿಗೆ ಗಣೇಶ ಮೂರ್ತಿಯನ್ನು ಗ್ರಾಮಸ್ಥರು ಹಾಗೂ ನಾಡಿನ ವಿವಿಧೆಡೆಯ ಭಕ್ತರು ಆರಾಧಿಸಿ ಆಶೀರ್ವಾದ ಪಡೆದರು, ಪ್ರತಿದಿನವೂ ಪ್ರಸಾದ ವಿನಿಯೋಗ ಸಹ ನಡೆಯಿತು, ಈ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಭಕ್ತಾದಿಗಳು ಅನ್ನ ಸಂತರ್ಪಣೆ ಸಹ ಏರ್ಪಡಿಸಲಾಗಿತ್ತು, ಜಾತ್ರಾ ಮಹೋತ್ಸವ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದು ಗೂಳೂರು ಮಹಾ ಗಣಪತಿ ಭಕ್ತಮಂಡಳಿಯ ಶಿವಕುಮಾರ್ ತಿಳಿಸಿದರು.

Get real time updates directly on you device, subscribe now.

Comments are closed.

error: Content is protected !!