ಹುಳಿಯಾರು: ಹುಳಿಯಾರು ಸಮೀಪದ ಕಂಪನಹಳ್ಳಿ ತೋಟದಮನೆಯ ಬಳಿ ಬುಧವಾರ ಮುಂಜಾನೆ ಚಿರತೆ ದಾಳಿಗೆ 6 ಕರುಗಳು ಬಲಿಯಾಗಿರುವ ಘಟನೆ ನಡೆದಿದೆ, ಕರಡಿ ಸಾಬರಪಾಳ್ಯದ ಬುಡೇನ್ ಸಾಬ್ ಅವರಿಗೆ ಸೇರಿದ ಹಸು ಇದಾಗಿದೆ.
ಬುಡೇನ್ ಸಾಬ್ ಹೊರ ವಲಯದ ತಮ್ಮ ಜಮೀನಿನ ಬಳಿ ಹಸು ಮೇಯಲು ಕಟ್ಟಿ ಹಾಕಿದ್ದರು, ಈ ಸಂದರ್ಭದಲ್ಲಿ ಹಾಡಹಗಲೇ ಕರುಗಳ ಮೇಲೆ ದಾಳಿ ಮಾಡಿದ ಚಿರತೆ 3 ಕರುಗಳನ್ನೂ ಬಲಿ ಪಡೆದಿದೆ, 1 ಕರುವನ್ನು ಅರ್ಧ ತಿಂದಿದ್ದು ಉಳಿದ 2 ಕರುಗಳ ರಕ್ತ ಹೀರಿ ಹೋಗಿದೆ, ದಾರಿ ಹೋಕರಿಂದ ವಿಷಯ ತಿಳಿದ ಬುಡೇನ್ ಸಾಬ್ ಸ್ಥಳಕ್ಕೋಗುವಷ್ಟರಲ್ಲಿ 3 ಕರುಗಳೂ ಸಾವನ್ನಪ್ಪಿವೆ.
ಕಳೆದ ಹಲವು ತಿಂಗಳಿಂದ ಈ ಭಾಗದಲ್ಲಿ ಚಿರತೆ ಓಡಾಡುತ್ತಿರುವುದು ರೈತರ ಗಮನಕ್ಕೆ ಬಂದಿತ್ತು, ಇದನ್ನು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರಲಿಲ್ಲ, ಬೋರನಕಣಿವೆ ಗುಡ್ಡದಲ್ಲಿ ಚಿರತೆ ಇರುವ ಫೋಟೋ ಸಹಿತ ಪತ್ರಿಕೆಯಲ್ಲಿ ಸುದ್ದಿ ಮಾಡಿದ್ದರೂ ಹಿಡಿಯಲು ಕ್ರಮ ಕೈಗೊಳ್ಳಲಿಲ್ಲ, ಅರಣ್ಯ ಇಲಾಖೆಯ ಈ ನಿರ್ಲಕ್ಷ್ಯದಿಂದಾಗಿ ಬುಡೇನ್ 3 ಕರುಗಳನ್ನು ಕಳೆದುಕೊಳ್ಳುವಂತಾಗಿದೆ, ಚಿರತೆ ದಾಳಿಯಿಂದ ಕರುಗಳನ್ನು ಕಳೆದುಕೊಂಡಿರುವ ರೈತ ಬುಡೇನ್ ಸಾಬ್ ಅವರಿಗೆ ಅರಣ್ಯ ಇಲಾಖೆಯ ವತಿಯಿಂದ ಸೂಕ್ತ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ್ದಾರೆ.
ಗಾಣಧಾಳು ಪಂಚಾಯ್ತಿ ವ್ಯಾಪ್ತಿಯಲ್ಲಿ ಚಿರತೆ ಹಾವಳಿ ಮಿತಿ ಮೀರಿದೆ, ಸಾಮಾನ್ಯವಾಗಿ ರಾತ್ರಿ ವೇಳೆ ಸಾಕು ನಾಯಿಗಳು ಮತ್ತು ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಚಿರತೆಗಳು ಇದೀಗ ಹಾಡು ಹಗಲೇ ರೈತರ ಹೊಲ ಗದ್ದೆಗಳಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದು ಜನ ಭಯಭೀತಗೊಂಡಿದ್ದಾರೆ, ಪ್ರತಿ ದಿನ ರೈತರು ಜಮೀನಿಗೆ ಹೋಗುವುದು ಕಷ್ಟವಾಗುತ್ತಿದೆ, ವಿಧಿ ಇಲ್ಲದೆ ಜೀವ ಕೈಯಲ್ಲಿ ಹಿಡಿದು ಹೋಗುವ ಸ್ಥಿತಿ ನಿರ್ಮಾಣವಾಗಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳ ಉದಾಸೀನ ಮಾಡಿದ್ದಾರೆ ಎಂದು ಗ್ರಾಮಸ್ಥರು ಅಸಮಾಧಾನ ಹೊರ ಹಾಕಿದ್ದಾರೆ, ತಕ್ಷಣ ಬೋನ್ ಇಟ್ಟು ಚಿರತೆ ಹಿಡಿಯಲು ಒತ್ತಾಯಿಸಿದ್ದಾರೆ.
Comments are closed.