ಜನಬೆಂಬಲ ಇಲ್ಲದೆ ಯಾವ ಕಲೆ ಬೆಳೆಯಲ್ಲ

ಯಕ್ಷದೀವಿಗೆ ಸಂಸ್ಥೆಯ ದಶಮಾನೋತ್ಸವ ಉದ್ಘಾಟನೆ

1

Get real time updates directly on you device, subscribe now.


ತುಮಕೂರು: ಸರ್ಕಾರ ಎಷ್ಟೇ ಅನುದಾನ, ಪ್ರೋತ್ಸಾಹ ನೀಡಿದರೂ ಜನಬೆಂಬಲ ಇಲ್ಲದೆ ಯಾವ ಕಲೆಯೂ ಬೆಳೆಯುವುದಿಲ್ಲ, ಜನರೇ ಅವುಗಳ ಶಕ್ತಿ ಎಂದು ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ಅಭಿಪ್ರಾಯಪಟ್ಟರು.
ಯಕ್ಷದೀವಿಗೆ ಸಂಸ್ಥೆಯ ದಶಮಾನೋತ್ಸವ ವರ್ಷದ ಉದ್ಘಾಟನೆಯನ್ನು ನಗರದ ಶ್ರೀಕೃಷ್ಣ ಮಂದಿರದಲ್ಲಿ ನೆರವೇರಿಸಿ ಮಾತನಾಡಿ, ಯಕ್ಷಗಾನ ಕಲೆಗೆ ಸುಸಂಸ್ಕೃತ ಕಲಾವಿದರ ಹಿನ್ನೆಲೆ ಇದೆ, ಅದರ ಪ್ರೇಕ್ಷಕರಲ್ಲೂ ಕಲೆಯ ಕುರಿತು ಅಪಾರ ಶ್ರದ್ಧೆ ಹಾಗೂ ಗೌರವ ಇರುತ್ತದೆ, ಅವರು ಕಾಟಾಚಾರಕ್ಕೋ ಕಾಲಹರಣಕ್ಕೋ ಬರುವವರಲ್ಲ, ಯಕ್ಷಗಾನ ಇಷ್ಟು ಜನಪ್ರಿಯವಾಗಿರುವುದಕ್ಕೆ ಕಲಾವಿದರು ಹಾಗೂ ಪ್ರೇಕ್ಷಕರ ಕೊಡುಗೆ ಹೆಚ್ಚಿನದ್ದಾಗಿದೆ ಎಂದರು.

ಕೈಗಾರಿಕೋದ್ಯಮಿ ಹೆಚ್.ಜಿ.ಚಂದ್ರಶೇಖರ್ ಮಾತನಾಡಿ, ಯಕ್ಷಗಾನ ವಾಚಿಕ ಪ್ರಧಾನವಾದ ಕಲೆ, ಯಕ್ಷಗಾನ ಕಲಾವಿದರ ಮಾತಿನ ಮೋಡಿಗೆ ಒಳಗಾಗದವರಿಲ್ಲ, ಅನೇಕ ವಿದ್ವಾಂಸರು ನೂರಾರು ವರ್ಷಗಳಿಂದ ಯಕ್ಷಗಾನದ ಮೂಲಕ ಕನ್ನಡದಲ್ಲಿ ಮೌಖಿಕ ಪರಂಪರೆಯೊಂದನ್ನು ಕಟ್ಟಿಬೆಳೆಸಿದ್ದಾರೆ ಎಂದರು.

ಯಕ್ಷದೀವಿಗೆಯ ವಾರ್ಷಿಕ ಗೌರವ ಸ್ವೀಕರಿಸಿ ಮಾತನಾಡಿದ ಶ್ರೀಕೃಷ್ಣ ಭಟ್ ದೇವಕಾನ, ನೇಪಥ್ಯ ಕಲಾವಿದರು ಯಕ್ಷಗಾನದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದ ಕಾಲವಿತ್ತು, ಆದರೆ ಇತ್ತೀಚೆಗೆ ಅವರಿಗೂ ಗೌರವ ಪುರಸ್ಕಾರ ದೊರೆಯುತ್ತಿವೆ, ಕಲಾವಿದರು ರಂಗದ ಮೇಲೆ ತಮ್ಮ ಪ್ರೌಢಿಮೆ ಮೆರೆಯುವ ಹಿಂದೆ ನೇಪಥ್ಯ ಕಲಾವಿದರ ಕೊಡುಗೆ ಹೆಚ್ಚಿನದ್ದಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಯಕ್ಷದೀವಿಗೆ ಅಧ್ಯಕ್ಷೆ ಆರತಿ ಪಟ್ರಮೆ ಮಾತನಾಡಿ, ಮುಂದಿನ ದಿನಗಳಲ್ಲಿ ವಿದ್ಯಾರ್ಥಿ ಸಮೂಹದಲ್ಲಿ ಸಾಮಾಜಿಕ ಹಾಗೂ ನೈತಿಕ ಮೌಲ್ಯ ಬಿತ್ತುವ ಪ್ರಯತ್ನವನ್ನು ಯಕ್ಷಗಾನದ ಮೂಲಕ ಮಾಡುವ ಯೋಜನೆಯಿದೆ ಎಂದರು.
ಶ್ರೀಕೃಷ್ಣ ಮಂದಿರ ಅಧ್ಯಕ್ಷ ಶ್ರೀನಿವಾಸ ಹತ್ವಾರ್, ಮಾರುತಿ ವಿದ್ಯಾಕೇಂದ್ರದ ನಿರ್ದೇಶಕಿ ಉಮಾ ಪ್ರಸಾದ್ ಹಾಜರಿದ್ದರು. ಕರ್ಣಭೇದನ ಯಕ್ಷಗಾನ ತಾಳಮದ್ದಳೆ ಹಾಗೂ ಮಹಿಷ ಮರ್ದಿನಿ ಬಯಲಾಟ ಪ್ರದರ್ಶನ ನಡೆಯಿತು.

Get real time updates directly on you device, subscribe now.

Comments are closed.

error: Content is protected !!